‘ನೆಮ್ಮದಿಯೆಂಬ ಮರೀಚಿಕೆ’ ಪ್ರೊ. ಸಿದ್ದು ಸಾವಳಸಂಗರವರ ಲೇಖನ

ಲೇಖನ ಸಂಗಾತಿ

‘ನೆಮ್ಮದಿಯೆಂಬ ಮರೀಚಿಕೆ’

ಪ್ರೊ. ಸಿದ್ದು ಸಾವಳಸಂಗರವರ ಲೇಖನ

ಎಲ್ಲಿ ಹುಡುಕಲಿ ನೆಮ್ಮದಿಯನ್ನು
ಪರರಲ್ಲೋ ನನ್ನಲ್ಲೋ ಗೊತ್ತಿಲ್ಲ !
ಹುಡುಕಿ-ಹುಡುಕಿ ಸಿಗದೆ ಸುಸ್ತಾಗಿ
ನೆಮ್ಮದಿ ಎಂದರೇನು ? ಎಂಬುದೇ ತಿಳಿಯದಾಗಿದೆ !!

     ನೆಮ್ಮದಿ ಎಂದರೆ ಸಂತೋಷ,ಆನಂದ.ಅದು ನಮ್ಮೊಳಗೆ ಇದೆಯೆಂಬುದು ಬಲ್ಲವರ ಮಾತು.ನಾನು ನನ್ನೊಳಗೆ ಹೊಕ್ಕು ಹುಡುಕಿದೆ.ಅದು ಎಲ್ಲಿದೆಯೆಂದು ಸಿಗದೆ ಸುಮ್ಮನಾಗಿದ್ದೇನೆ.ಬಹುಶಃ ರೊಕ್ಕ ಕೊಟ್ಟರೆ ಅಂಗಡಿಯಲ್ಲಿ ಸಿಗಬಹುದೇನೋ.ಅಲ್ಲಿಯೂ ಕೇಳಿದೆ.ಅವರು ಹುಚ್ಚ ಎಂದು ಬೈದರು.ಸುಮ್ಮನಾದೆ.
ಮನಸ್ಸಿಗೆ ಯಾವಾಗಲೂ ತಳಮಳವೇಕೆ.ಒಂದು ಕಡೆ ಕುಳಿತರೆ ಸಮಾಧಾನವೇ ಇಲ್ಲ.ಯಾವ ಕೆಲಸ ಮಾಡಿದರೂ ಸಂತೋಷವಿಲ್ಲ. ಅನೇಕ ಜನಗಳ ಮಧ್ಯವಿದ್ದರೂ ತೃಪ್ತಿಯಿಲ್ಲ.ಏನೋ ಒಂದು ಬೇಸರ.ಏನೋ ಹಳಹಳಿ.ಮನೆಯಲ್ಲಿ ಹೆಂಡತಿ-ಮಕ್ಕಳು ಕಂಡರೂ ಸಿಡಿಸಿಡಿ.ಊಟದಲ್ಲಿ ಆಸಕ್ತಿಯಿಲ್ಲ.ಪಾಠ ಮಾಡಲು ಬೇಸರ.ಸುಮ್ಮನೆ ಕುಳಿತರೂ ಹೊತ್ತು ಹೋಗದು.ಮನಸ್ಸಿನ ವ್ಯಾಪಾರವೇ  ವಿಚಿತ್ರವಲ್ಲವೆ.

     ಪರಿಸರಕ್ಕೆ ನಾವು ಹೊಂದಿಕೊಳ್ಳದಿದ್ದರೆ ಪರಿಸರ ನಮಗೆ ಹೊಂದಿಕೊಳ್ಳುವುದಿಲ್ಲ.ಎಲ್ಲರಲ್ಲಿ ತಪ್ಪನ್ನು ಹುಡುಕಲು ಹೊರಟರೆ ಒಳ್ಳೆಯವರು ಯಾರೆಂಬುದು ತಿಳಿಯುವುದಿಲ್ಲ.ಕೊನೆಗೆ ಯಾರೂ ಒಳ್ಳೆಯವರಿಲ್ಲವೆಂದು ಮಾತು ಬಿಡುತ್ತಾ ಹೋದರೆ ಎಲ್ಲರೊಂದಿಗೂ ಮಾತು ಬಿಡಬೇಕಾಗುತ್ತದೆ.ಇದು ನನಗೆ ಗೊತ್ತು.ಮುಂದೆ ಗೊಂದಲಕ್ಕೊಳಗಾಗಿ ಒಳ್ಳೆಯರು ಯಾರು ಕೆಟ್ಟವರು ಯಾರು ಎಂಬುದು ತಿಳಿಯದಾಗಿ ತಪ್ಪು ನಿರ್ಧಾರಕ್ಕೆ ಬರುತ್ತೇವೆ.ಮನುಷ್ಯನಿಗೆ ಬೇಕಾಗಿರುವುದೇನು.ಒಂದು ವಸತಿ,ತೊಡಲು ಬಟ್ಟೆ,ಎರಡೊತ್ತು ಊಟ.ಇಷ್ಟಕ್ಕೆ ಎಷ್ಟಲ್ಲಾ ಹೋರಾಟ.ಬಡಿದಾಟ.ತುಳಿದಾಟ.ಅವನು ಮುಂದೆ ಹೋದರೆ ನಾನು ಹಿಂದೆ ಎಳೆಯುತ್ತೇನೆ.
ನಾನು ಮುಂದೆ ಹೊರಟರೆ ಹಲವಾರು ಜನ ಹಿಂದೆ ಎಳೆಯುತ್ತಾರೆ.ಇದೇ ಹಗ್ಗ-ಜಗ್ಗಾಟದಲ್ಲಿ ಜೀವನ ಕಳೆದರೆ ನೆಮ್ಮದಿ ಎಲ್ಲಿ ಸಿಗುತ್ತದೆ.ಹೀಗಾಗಿ ಮನಸ್ಸಿಗೆ ತಳಮಳ ಆವರಿಸಿ ಸಂತೋಷ ಕಳೆದುಕೊಳ್ಳುತ್ತೇವೆ.
ಉದ್ಯೋಗ ಸ್ಥಳದಲ್ಲಿ ಹೊಂದಾಣಿಕೆ ಕಡಿಮೆ.ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುವುದಿಲ್ಲ.ಸದಾ ಸ್ಪರ್ದೆ.ಹೀಗಾಗಿ ಅಲ್ಲಿ ನೆಮ್ಮದಿಯನ್ನು ಬ್ಯಾಟರಿ ಹಚ್ಚಿ ಹುಡುಕಿದರೂ ಸಿಗುವುದಿಲ್ಲ.

     ಮನೆಗೆ ಬಂದರೆ ಹೆಂಡತಿ ಸರಿಯಾದ ಸಮಯಕ್ಕೆ ಅಡುಗೆ ಮಾಡುವುದಿಲ್ಲ.ಅಥವಾ ಅಡುಗೆಯೇ ಸರಿಯಾಗಿ ಮಾಡಲು ಬರುವುದಿಲ್ಲ ಸುಮ್ಮನೆ ಇಲ್ಲ-ಸಲ್ಲದ ಕಾರಣದಿಂದ ನೆಮ್ಮದಿಯನ್ನು ಕಳೆದುಕೊಳ್ಳುತ್ತೇವೆ.ಮಕ್ಕಳು ಓದುವುದಿಲ್ಲ.ಮೊಬೈಲ್ ನೋಡುತ್ತಾರೆ.ನನ್ನ ಮಾತು ಕೇಳುವುದಿಲ್ಲ ಹಲವಾರು ಕಾರಣಗಳಿಂದ ನೆಮ್ಮದಿ ಹಾಳಾಗುತ್ತದೆ.ಹೆತ್ತವರಿದ್ದರೆ ಅವರ ಸೇವೆ ಮಾಡಿ.ತೃಪ್ತಿ ಸಿಗುತ್ತದೆ.ಅಣ್ಣ-ತಮ್ಮರ ಬಗ್ಗೆ ಬಹಳ ಯೋಚಿಸಬೇಡಿ.ಅವರ ಬದುಕು ಅವರು ಕಟ್ಟಿಕೊಳ್ಳಲಿ.ಸಂಬಂಧಿಕರು ಬರುತ್ತಾರೆ ಹೋಗುತ್ತಾರೆ.ಅವರ ಬಗ್ಗೆಯೂ ಯೋಚನೆ ಮಾಡಬೇಡಿ.ನನ್ನ ಮನೆ ಚೆನ್ನಾಗಿಲ್ಲ.ಆತ ಬಹಳ ಸುಂದರ ಮನೆ ಕಟ್ಟಿಸಿದ್ದಾನೆ.ಇವು ನೆಮ್ಮದಿ ಕೆಡಿಸುತ್ತವೆ.ನೀವು ಮಾರ್ಕೆಟ್ ಗೆ ಹೋಗಿ ನೋಡಿ.ಜನರ ಗದ್ದಲ ನೋಡಿ ತಲೆನೋವು ಪ್ರಾರಂಭವಾಗಿ,ಯಾಕಾದರೂ ಬಂದೆ ಅನಿಸುತ್ತದೆ.ಹೀಗಾಗಿ ನೆಮ್ಮದಿ ಮರೀಚಿಕೆಯಾಗಿಬಿಟ್ಟಿದೆ.

     ಹಾಗಾದರೆ ನೆಮ್ಮದಿ ಹೇಗೆ ಕಂಡುಕೊಳ್ಳುವುದು.ಸುಮ್ಮನೆ ನಮ್ಮಷ್ಟಕ್ಕೆ ನಾವು ಇದ್ದುಬಿಡುವುದು.ದಿನಕ್ಕೆ ಹತ್ತು ನಿಮಿಷ ನಮಗಾಗಿ ಮೀಸಲಿಡುವುದು.ಯಾರಿಗೂ ಬುದ್ದಿವಾದ ಹೇಳಲು ಹೋಗುವುದು ಬೇಡ.ಏನಾದರು ಸಲಹೆ ಕೇಳಿದರೆ ತಿಳಿದಷ್ಟು ಹೇಳುವುದು.ಏನೂ ಕೇಳದೆ ನಾವೇ ಮೂಗುತೂರಿಸಿ ಹೇಳುವುದು ಬೇಡ.ಯಾವುದಕ್ಕೂ ಅವಸರ ಮಾಡುವುದು ಒಳ್ಳೆಯದಲ್ಲ.ಉರಿ ನುಂಗುವುದೋ ಹೊಗಿ ನುಂಗುವುದೋ ಎಂದು ತಡಬಡಿಸುವುದು ಸರಿಯಲ್ಲ.ಅವನು ಮುಂದೆ ಹೋದ,ನಾನು ಹಿಂದೆ ಬಿದ್ದೆ.ಅವನು ಶ್ರೀಮಂತನಾದ,ನಾನು ಆಗಲಿಲ್ಲ ಎಲ್ಲ ಯೋಚನೆಯನ್ನು ಬಿಡಬೇಕು.ಬರುವುದು ಬರುವ ಕಾಲಕ್ಕೆ ಬಂದೇ ಬರುವುದು;ಹೋಗುವುದು ಹೋಗುತ್ತದೆ ಎಂದು ತಿಳಿದರೆ ಸಾಕು.ಎಲ್ಲದರಲ್ಲಿ ನಾನೇ ಮುಂದಿರಬೇಕು ಎಂಬ ಬ್ರಮೆಯಿಂದ ಹೊರಬಂದಾಗ ನೆಮ್ಮದಿ ತಾನಗಿಯೇ ದೊರಕುತ್ತದೆ.ಮತ್ಸರ,ಅಸಹಿಷ್ಟುತೆ ಹಾಗೂ ಭವಿಷ್ಯದ ಬಗ್ಗೆ ಅನವಶ್ಯಕ ಚಿಂತೆಗಳನ್ನು ಬಿಡಬೇಕು.ಮಕ್ಕಳು ಏನಾಗಬಯಸುತ್ತಾರೋ ಅದನ್ನು ಪ್ರೋತ್ಸಾಹಿಸಿ.ಮಾರ್ಗದರ್ಶನ ಮಾಡಿ.ನಿಮ್ಮ ನನಸಾಗದ ಕನಸುಗಳನ್ನು ಮಕ್ಕಳ ಮೇಲೆ ಹೇರಬೇಡಿ.ಅವರಿಗೆ ಅವರದೇ ಆದ ಕನಸುಗಳಿರುತ್ತವೆ.ದುಷ್ಟರನ್ನು ಕಂಡರೆ ದೂರವಿರಿ.ಗಂಡ ಅಥವಾ ಹೆಂಡತಿ ನಿಮ್ಮ ಮಾತು ಕೇಳುತ್ತಿಲ್ಲವೆಂದರೆ ಅವರ ಪಾಡಿಗೆ ಅವರನ್ನು ಬಿಡಿ.ಅತಿಯಾದ ಮೊಂಡುತನ ಇರುವವರು ದೇವರೇ ಬಂದು ಹೇಳಿದರೂ ಕೇಳುವುದಿಲ್ಲ.ನೀವು ಯಾವ ಲೆಕ್ಕ.ನಕಾರಾತ್ಮಕ ಯೋಚನೆ ಮಾಡುವವರ ಸ್ನೇಹ ಮಾಡಬೇಡಿ.ಬದುಕು ಹೇಗೆ ಬರುತ್ತೋ ಹಾಗೆ ಸ್ವೀಕರಿಸಿ.ಅತೀ ನೀರೀಕ್ಷೆಗಳನ್ನು ಇಟ್ಟುಕೊಳ್ಳಬೇಡಿ.ಯಾರ ಮೇಲೂ ಅವಲಂಬನೆ ಆಗಬೇಡಿ.ನಿಮ್ಮ ಕಷ್ಟಗಳನ್ನು ಬೇರೆಯವರ ಮುಂದೆ ಹೇಳುವುದಕ್ಕಿಂತಲೂ ದೇವರ ಮುಂದೆ ಹೇಳಿಕೊಳ್ಳಿ.
ಆಗ ನೆಮ್ಮದಿ ಸಿಕ್ಕು ಸಮಾಧಾನವೆನಿಸುತ್ತದೆ.


ಪ್ರೊ. ಸಿದ್ದು ಸಾವಳಸಂಗ,ತಾಜಪುರ

Leave a Reply

Back To Top