ಮೀನಾಕ್ಷಿ ಸೂಡಿ- ಹ್ರದಿನಿ ನರ್ತನ

ಕಾವ್ಯ ಸಂಗಾತಿ

ಮೀನಾಕ್ಷಿ ಸೂಡಿ

ಹ್ರದಿನಿ ನರ್ತನ

ನಿದು ???
ನೀಲಾಕಾಶಕೆ ತೂತು ಬಿದ್ದಂತೆ !
ಮೋಡಗಳಿಗೆ ನಿಲ್ಲದ ಬಿಕ್ಕಳಿಕೆ
ಕನಸು ತೋಯಿಸುವ ಮಳೆಗೆ
ಶರಣಾಗುತ್ತಿದ್ದಾಳೆ ಭೂತಾಯಿ !
ಯಮಕಿಂಕರರೇ ಹನಿ ಹನಿಯಾಗಿ ಧರೆಗಿಳಿದಿರುವರೊ,
ಪಾಪದ ಲೆಕ್ಕ ಚುಕ್ತಾ ಮಾಡಲು !
ಕಾದ ಹಂಚಿನ ಮೇಲೆ
ಕುಳಿತಂತ ಬದುಕು …..
ಸುರುಳಿಯಾಗಿ ಸುತ್ತಿ ಸಾಯುತ್ತಿದೆ
ಗಂಗೆ ತುಂಗೆಯಾದಿಯಾಗಿ
ಪ್ರವಾಹದ ಬಾಯ್ದೆರೆದು
ಸಾವಿನ ಜೋಗಳ ಹಾಡುತ್ತಿವೆ!

ಭಾವ ಬದುಕಿನ ರಂಗದೊಕುಳಿಗೆ
ಭಯ ಒಂದು ತಾಳ ಹಾಕುತ್ತಿದೆ
ಪ್ರವಾಹಕ್ಕೆ ಆಹ್ವಾನ
ಬದುಕು ಮುನ್ನುಡಿಗೆ ಫುಲ್ ಸ್ಟಾಪ್…

ಭೂಮಿ ಬಟ್ಟಲಿನ
ಎದೆಯ ಪಿಸುಮಾತಿಗೆ
ಪ್ರವಾಹದ ಪಾಂಚಜನ್ಯ ಮುತ್ತಿಕ್ಕುತ್ತಿದೆ
ಇದು ಹ್ರದಿನಿ ನರ್ತನವೋ!
ರುದ್ರತಾಂಡವವೋ !
ಇದರ ಸೊಲ್ಲಿನ ಝಲಕ್ಕೊಂದು
ನಮ್ಮ ಕಾಲನ್ನೇ ನೆಕ್ಕುತ್ತಿದೆ!
ಸಾವಿನ ಮುನ್ಸೂಚನೆ ….
ಮನ ವಿಹ್ವಲಗೊಳಿಸುವ ಭಯ
ಸುಮ್ಮನೆ ಅನುಭವಿಸಬೇಕು ಅಷ್ಟೇ…
ಮಾಡಿದ್ದುಣ್ಣೋ ಮಹಾರಾಯ!
ತರಗೆಲೆಗಳಂತೆ ಶವಗಳು
ಮುಗಿಲ ರೋದನ !!!
ಬೊಬ್ಬಿರಿಯುತಿವೆ ನದಿಗಳು
ಗರ್ಭದ ಪಿಂಡ ಖಾಲಿಯಾಗುವಂತೆ!!

ಮೋಡ ಮುಚ್ಚಿದ ತರಣಿ
ಉಸಿರುಗಟ್ಟಿ ಸತ್ತನೋ
ಎಂಬ ಹಪಹಪಿಯಲ್ಲಿ
ನೀರೋಳಗಿನ ಸಸ್ಯಗಳು ಬಿಕ್ಕಳಿಸುತಿವೆ!

ಆಳುವವರಿಗಿಲ್ಲ
ಮೊರೆ ಕೇಳುವ ತಾಳ್ಮೆ
ಭೀಕರತೆಯ ಬಾಗಿಲಲ್ಲಿ
ಭಯದ ಮೌನಗೀತೆ
ಕರುಣೆ ಇಲ್ಲದ ವರುಣ
ಸಾವಿನ ಕರೆಯೋಲೆ ಹಂಚುತ್ತಿದ್ದಾನೆ !!!
ಇಂದು ಈ ಊರು ಮುಂದೆ ಇನ್ನೊಂದು ಕೊನೆಗೆ ರಣಹದ್ದುಗಳ
ಕೇಕೆಯ ಶಂಖನಾದ!!!!

ಹ್ರದಿನಿ = ನದಿ


ಮೀನಾಕ್ಷಿ ಸೂಡಿ


6 thoughts on “ಮೀನಾಕ್ಷಿ ಸೂಡಿ- ಹ್ರದಿನಿ ನರ್ತನ

  1. ವಾಸ್ತವಕ್ಕೆ ಕೈಗನ್ನಡಿ ಈ’ ಹ್ರದಿನಿ ನರ್ತನ ‘ ಕವಿತೆ !! ಸಂವೇದನೆ ಸೊಗಸಾಗಿದೆ.
    – ಕುಬ

  2. ಹ್ರದಿನಿ ನರ್ತನ ಸತ್ಯದ ಸಾಕ್ಷಾತ್ಕಾರ ತೋರಿಸಿಕೊಟ್ಟಿದೆ ಅತ್ಯುತ್ತಮ ಕವಿತೆ

Leave a Reply

Back To Top