ಎಂ. ಆರ್. ಅನಸೂಯ ಕವಿತೆ-ಜಗಲಿ ಕಟ್ಟೆ

ಕಾವ್ಯ ಸಂಗಾತಿ

ಎಂ. ಆರ್. ಅನಸೂಯ

ಜಗಲಿ ಕಟ್ಟೆ

ನಾವು ಗೆಳತಿಯರು
ಟೀ- ಕಾಫಿಗಾಗಿ
ಸೇರುವ ಕಟ್ಟೆಯಷ್ಟೆ ಅಲ್ಲ
ಅದು
ಮುಖ್ಯ ಅಮುಖ್ಯರಿಲ್ಲದ ಸರಿಸಮಾನರ ಕೂಟ
ಮೌನದ ಬೇಲಿ ದಾಟಿದ ಮಾತುಗಳ ತಾವು
ಘೋಷಿತವಾಗುತ್ತಿತ್ತು ಸಂಭ್ರಮದ ಠರಾವು
ಹಿತವಾದ ತಂಪಾದ ಪುಟ್ಟ ಪುಟ್ಟ ಖುಷಿಗಳಿಗೆ
ಎಳೆ ಬಿಸಿಲಿನಂಥ ಬೆಚ್ಚಗಿನ ಟೀ ಮೂಕ ಸಾಕ್ಷಿ
ಇದ್ದಿರಬಹುದು
ಸಣ್ಣ ಪುಟ್ಟ ಮುನಿಸಿನ ಇರುಸು ಮುರುಸು
ಪೈಪೋಟಿಯ ಮೇಲಾಟದ ರಾಜಕೀಯ
ನೋವುಗಳ ಭಾರವಾದ ನಿಟ್ಟುಸಿರು
ಸಂಸಾರದ ನೋವು ನಲಿವಿನ ಕಥೆಗಳು
ಬೇಡವೆನಿಸಿದರೂ
ಬಿಡಲೊಲ್ಲದು ಜಗಲಿ ಕಟ್ಟೆಯ ಸೆಳೆತ
ಇದ್ದರೂ ಕ್ಯಾತೆ
ಭಿನ್ನತೆಯಲ್ಲೂ ಏಕತೆ
ಕಾಣಲು ವಿದ್ಯಾರ್ಥಿಗಳ ಯಶೋಗಾಥೆ
ಅವಿರತ ಒಮ್ಮತದ ಸಹಮತ
ನವರಸಭರಿತ ಸರಸ ಸಲ್ಲಾಪದಲಿ
ಆರೋಪ ಪ್ರತ್ಯಾರೋಪಗಳ ಸಮಪಾಲು
ಸರಸ ವಿರಸಗಳ ಸಮಬಾಳು
ಸಿಹಿ ಕಹಿಯ ಸಹ ಬಾಳ್ವೆ !


ಎಂ. ಆರ್. ಅನಸೂಯ

Leave a Reply

Back To Top