ಜಯಶ್ರೀ ಎಸ್ ಪಾಟೀಲ ಕವಿತೆ-“ಗುಬ್ಬಿ ವ್ಯಥೆ”

ಕಾವ್ಯ ಸಂಗಾತಿ

ಜಯಶ್ರೀ ಎಸ್ ಪಾಟೀಲ ಕವಿತೆ-

“ಗುಬ್ಬಿ ವ್ಯಥೆ”

ಗುಬ್ಬಿಮರಿಯೊಂದು ಗೂಡಿನಲ್ಲಿ ಜನ್ಮ ತಾಳಿತು
ತಾಯಿಯ ಆರೈಕೆಯಲಿ ತುತ್ತನ್ನುಂಡು ಬೆಳೆಯಿತು
ಜಗವನೋಡಲೆಂಬ ಆಸೆ ಮನದಿ ಮೂಡಿತು
ಶಕ್ತಿಯಿಂದ ರೆಕ್ಕೆ ಬಡಿದು ಗಗನದೆಡೆಗೆ ಹಾರಿತು

ಮೇಲಿನಿಂದ ಜಗವ ನೋಡಿ ಅಚ್ಚರಿಪಟ್ಟಿತು
ಗಾಳಿಯಲ್ಲಿ ತೇಲಿ ನಲಿದು ನಕ್ಕು ಹಿಗ್ಗಿತು
ಸಂಜೆ ಮರಳಿದಾಗ ಗೂಡು ಕಾಣದಾಯಿತು
ತಾನಿದ್ದ ಮರವು ಬಿದ್ದಿದ್ದರಿಂದ ಆಘಾತವಾಯಿತು

ಸುರಿವ ಮಳೆಗೆ ಗುಬ್ಬಿ ತೋಯ್ದು ತತ್ತರಿಸಿತು
ಬೀಸುವ ಗಾಳಿ ಜೋರಾಗಿ ನಡುಕ ಹತ್ತಿತು
ತಾಯಿ ಇಲ್ಲದೆ ತಬ್ಬಲಿಯಾಗಿ ರೋಧಿಸಿತು
ಬೆಚ್ಚನೆಯ ಗೂಡಿಲ್ಲದೆ ಚಡಪಡಿಸಿತು

ಯಾರಿಗೆ ಹೇಳಬೇಕು ಗುಬ್ಬಿ ತನ್ನ ಕಥೆ
ಯಾರು ಅರಿಯುವರು ಗುಬ್ಬಿಯ ವ್ಯಥೆ
ಗೊತ್ತು ಗುರಿಗಳಿಲ್ಲದ ಬದುಕು ಅಸ್ಥಿರ
ದೂರ ನೋಡಿದಷ್ಟು ಕವಿದ ಅಂಧಕಾರ

ಗಿಡಗಳ ಕಡಿವ ಮಾನವನ ನೀಚ ಕೃತ್ಯಕೆ
ಪ್ರಾಣಿ ಪಕ್ಷಿಗಳಿಗಿಲ್ಲ ಮನೆಗಳು ವಾಸಿಸುವುದಕೆ
ಕಟ್ಟಡಗಳ ನಿರ್ಮಾಣ, ರಸ್ತೆಗಳ ಅಗಲೀಕರಣಕೆ
ನಕ್ಕು ನಲಿದಾಡಿದ ನಗರದ ನವೀಕರಣಕೆ

ಮಾನವ,ಇನ್ನಾದರೂ ಜಾಗೃತವಾಗುತಲಿ
ಗುಬ್ಬಿಯ ವ್ಯಥೆಯನು ತಿಳಿಯುತಲಿ
ಗಿಡ ಮರಗಳನು ಉಳಿಸಿ ಬೆಳೆಸಲು ಕಲಿ
ಸುಖ ಸಮೃದ್ಧಿಯ ಬದುಕಿನಲ್ಲಿ ನಲಿ


ಜಯಶ್ರೀ ಎಸ್ ಪಾಟೀಲ


Leave a Reply

Back To Top