ರೇಷ್ಮಾ ಕಂದಕೂರ ಕವಿತೆ-ಬೆಲೆ ಕಳೆದುಕೊಳ್ಳುತ್ತಿದೆ.

ಕಾವ್ಯ ಸಂಗಾತಿ

ರೇಷ್ಮಾ ಕಂದಕೂರ ಕವಿತೆ-

ಬೆಲೆ ಕಳೆದುಕೊಳ್ಳುತ್ತಿದೆ.

ಬೆಲೆ ಕಳೆದುಕೊಳ್ಳುತ್ತಿವೆ
ಸಂಬಂಧ ಈಗೀಗ
ಸ್ವತ್ತಿನ ಆಡಂಬರದ ಎದೆಗೆ
ಗತ್ತಿನ ನಡಾವಳಿಯಲಿ.

ಮೊದಲಿನಂತಿಲ್ಲ ಈಗೀಗ
ಬಿರಿದ ಮನೆ ಮನದೊಳು
ಕಾರು ಬಾರಿನ ನಶೆಯಲಿ
ಸೇರುವುದನೆ ಮರೆತಂತೆ.

ಗರಿಗೆದರಿವೆ ಬಯಕೆ
ಸರಿದಾರಿಯ ತೊರೆದು
ಅತಂತ್ರದ ಸ್ಥಿತಿಯಲಿ
ಹೊಯ್ದಾಟದ ಕವಲು.

ಸ್ವೆಚ್ಛಾಚಾರದ ಆಟಕೆ
ನಟನೆಯ ಪಾರುಪತ್ಯ
ಸತ್ಯಾಸತ್ಯತೆ ಮರೆಮಾಚಿ
ಮಿಥ್ಯತೆಗೆ ಓಗೊಟ್ಟು.

ಆಮಿಶೆಗೆ ಮನಸೋತು
ಕರುಳ ಸಂಬಂಧ ಸರಳು ಬಿಗಿದು
ನೆರಳು ಭೀಕರವಾಗಿ
ಬೆರಳು ಹಿಡಿವರೆ ಹೊಸಕಿ ಹಾಕಿ.

ಬೆಲೆ ಕಳೆದುಕೊಳ್ಳುತ್ತಿವೆ
ನೆಲೆ ಬಿರುಕುಗೊಂಡಿದೆ
ಸರಕಿನಂತೆ ಅತ್ತಿತ್ತ
ಬತ್ತಿದ ಕೊಳದಂತೆ.


ರೇಷ್ಮಾ ಕಂದಕೂರ

Leave a Reply

Back To Top