ಕಾವ್ಯ ಸಂಗಾತಿ
ಡಾ. ಅರಕಲಗೂಡು ನೀಲಕಂಠಮೂರ್ತಿ
ಕಾನನದರಸ
ಒಂದೊಮ್ಮೆ ಒಡ್ಡೋಲಗದ ಗಂಭೀರ
ನಡಿಗೆಯಲಿ ದಟ್ಟಕಾನನವಿಡಿ
ತನ್ನೊಡೆತನದಲಿ ಮೆರೆದಿದ್ದ
ಸಿಂಹ ಗರ್ಜನೆ ಗುಡುಗುಡುಗಿದ್ದ
ಈ ರಾಜಾಧಿರಾಜ
ಉಕ್ಕನ್ನು ಜಗಿಜಗಿವಂಥ ಘಟ್ಟಿ
ಸ್ನಾಯು ಶಕ್ತಿಯ ಕಾನನದ ಜಟ್ಟಿ
ಹಸಿದಂದು ಮಿಂಚಂತೆ ಹರಿದೋಡಿ
ಬಲಿ ಬಡಿದು ಅಮರುತಿದ್ದ ಪರಿ
ಇನ್ನಾವ ವನ್ಯಸಾಹಸಿಗು ಇರದಿದ್ದ ಸಿರಿ!
ಮಲಗೆದ್ದು ಮೈಕೊಡವಿ ಘೀಳಿಟ್ಟರೆ
ಪ್ರತಿಧ್ವನಿಗೆ ಕಾಡಿನಡ್ಡಗಲಕು ನಡುಕ
ಅಗಣಿತ ಜೀವಿಗಳ ಬಲಿಬಡಿದು ಸಿಗಿದು
ತಿಂದು ತೇಗಿದ್ದ ಬಲಿಷ್ಠ ಹಲ್ಲುಗಳು
ಇಂದು ವಯಸು ಮಾಗಿ
ಅಂದಿನ ಬಲಗರ್ವವಳಿದು
ಖಾಲಿ ಜಠರದಲಿ ಕೊರೆಯುವ
ಬರಿದೆ ಆಮ್ಲದೊಸರು!
ಎಂಥ ಬಲಿಷ್ಠ ಗರ್ವದ ಬದಕು
ಎಂಥ ಕೊನೆಯ ಕ್ರೂರ ದಿನಗಳು
ಖಂಡ ಖಂಡವೆಲ್ಲ ಹಸಿದು ನಶಿಸಿ
ಒಂದೊಮ್ಮೆಯ ಮೇಲೆಗರಿ ಕತ್ತು
ಹಿಡಿದ ಥಾಕತ್ತು ನಿಧಾನ ಅಳಿದು
ಕೂತಲ್ಲೆ ಖಾಲಿ ಹೊಟ್ಟೆಯಲಿ ಮಲಗಿ
ಮೈ ಕರಗಿ ಜಂಘಾಬಲಕಿಲ್ಲ ಈಗ ತಾಕತ್ತು.
ಹಸಿದಂದು ಎಂಥ ಪ್ರಾಣಿಯಾದರೇನು
ಒಮ್ಮೆ ಜಿಂಕೆ ಇನ್ನೊಮ್ಮೆ ಕಡವೆ
ಹಸು ಎಮ್ಮೆ ಕಾಡುಕಿರುಬವು ಸೈ ಕೊನೆಗೆ
ಅಂಥ ಒಣ ಸಿಮೆಂಟಿನಂಥ ಘಟ್ಟಿ ದೇಹ
ಇಂದು ಅಂದು ಹರಿದು ತಿಂದಿದ್ದ
ಅದೆ ಕಾಡು ಕಿರುಬಗಳ ಸಜೀವ ಆಹಾರ!
ಸಿಂಹಕ್ಕೆ ಹುಟ್ಟಿನಿಂದಲೆ
ಮೆಟ್ಟಿನಿಲ್ಲುವ ಪ್ರಕೃತಿಯ ಕೊಡುಗೆ
ಎಲ್ಲ ಮೃಗಗಳ ಹುಟ್ಟೆ ಹಾಗೆ
ಪ್ರಾಣಿಗಳು ಪ್ರಾಣಿಗಳಿಂದಲೆ ಕಗ್ಗೊಲೆ!
ಎಂಥ ಬದುಕಾದರೇನು
ಬಲವಿದ್ದಾಗ ನೆಲದ ಮೇಲೆ ನಿಲ್ಲಬೇಕು
ಮನುಷ್ಯನ ಸರಹದ್ದು ಕಾನನವಲ್ಲ
ಊರೂರಲಿ ಸೂರುಗಳೊಳಗೆ
ಬದುಕು ಅಪ್ಪಟ ಮಾನವ ಬದುಕಾಗಿರಲಿ!
ಎದೆ ಕರುಣೆಯ ಬತ್ತದ ಬಾವಿಯಾಗಿರಲಿ!
.———————————————–
ಡಾ. ಅರಕಲಗೂಡು ನೀಲಕಂಠ ಮೂರ್ತಿ.
ಮನುಷ್ಯ ಕಾನನದ ಒಳಗಲ್ಲ, ಊರೊಳಗಿರಲಿ. ಮಾನವನಾಗೇ ಇರಲಿ.ಎಂಥ ಉದಾತ್ತ ವಿಚಾರಗಳು!
Congrats Murthy!
ಧನ್ಯವಾದ ನಿಮಗೆ ಪ್ರಿಯ ವೆಂಕಟೇಶ್
Congratulations Neela
Thanks very much, Prasanna