ಕಾವ್ಯಯಾನ

ಬೋನ್ಸಾಯ್.

green plant on pot

ಶಶಿಕಲಾ ವೀ ಹುಡೇದ.

ಈ ಮಣ್ಣ ಕಣಕಣದ
ಶಕ್ತಿಯೆಲ್ಲವೂ ನನ್ನ ಒಡಲಾಳದಲಿ

ಮೈಮನಗಳಲಿ
ವಸಂತನ ಪ್ರೀತಿಯ
ಗಾಯದ ಗುರುತುಗಳು

ಒನಪಿಲ್ಲದ ವೈಯ್ಯಾರದಲಿ
ಒಡ್ಡು ಮುರಿಯುವ ಗಿಡ್ಡ ಮೈ

ನೆತ್ತರೆಲ್ಲವೂ ಹರಿತ್ತಾಗಿ
ಎಲೆಎಲೆಯೂ ಮಿಂಚು

green tree and two men figurines

ಚಳಿಗಾಳಿಗೆ ಅದರುವ ಮೈ
ನಾನು ಬದುಕಿರುವೆನೆಂಬುದಕೆ ಪುರಾವೆ

ಬುಡದಡಿಯಲಿ ತಟ್ಟೆಯಲಿ
ನಾಕೇ ನಾಕಿಂಚಿನ ನೆಲವೇ ಸಾಕ್ಷಿ
ನಿಡುಸುಯ್ಯುವ ನನ್ನ ಪ್ರತಿ ಉಸುರಿಗೆ
ನನ್ನ ಸುತ್ತಲೂ ಹೆಣೆದಿರುವ
ನನ್ನದೇ ಬೇರುಗಳು
ಶೋಕಿಸುವ ಬಿಳಲುಗಳು
ಎಂಟ್ಹತ್ತು ಎಲೆಗಳು

ಬೋನ್ಸಾಯ್ ಹೆಸರಲಿ
ಕುಬ್ಜ ಬದುಕು

ವರುಷಗಳುರುಳಿದರೂ
ಬೆಳೆಯಲಾರೆ ಬೀಗಲಾರೆ
ತೂಗಲಾರೆ ತೊನೆಯಲಾರೆ

ಹೂತು ಹಣ್ಣಾಗಬೇಕೆಂದವಳು
ಚಾಚಿ ನೆರಳಾಗಬೇಕೆಂದವಳು
ಇಂತು ನಿಂತಿದ್ದೇನೆ ವಾಮನಳಾಗಿ
ಸುಡುವ ದೈತ್ಯ ನೆರಳುಗಳ ನಡುವೆ

ಇದೆಂಥ ಬದುಕ ಕೊಟ್ಟಿರಿ ನನಗೆ
ಓ ನೆತ್ತರು ನೀರಾದವರೆ!

ಇನ್ನಿರಲಾರೆ ಕುಲಾವಿ ಕಟ್ಟಿಕೊಂಡು
ಸಾವಿನ ಈ ತೊಟ್ಟಿಲಲಿ

ಹಸಿರಾದರೂ ಹೊನ್ನಲ್ಲ
ನೆರಳಿಲ್ಲ ಗೂಡಿಲ್ಲ

ಸರ್ಕಸ್ಸಿನ ಜೋಕರನಂತೆ
ನನ್ನ ಮೈಯ ಪೆಟ್ಟುಗಳೆಲ್ಲ
ನಿಮ್ಮ ಮೋಜಿನ ಸರಕು
ಮೈ ಚಾಚಿ ಮಲಗಲೂ ಮರ್ಜಿ ಕಾಯಬೇಕು

ಪುರುಷ ಹುನ್ನಾರಗಳಿಗೆಂದು
ಪ್ರಕೃತಿಯೆಷ್ಟು ಬಲಿಯಾಗಬೇಕೊ ಇನ್ನೂ

ಓ ನೆತ್ತರು ನೀರಾದವರೆ
ಇನ್ನಾದರೂ ಕರಗಿ ಹರಿಯಿರಿ
ನಮ್ಮಂತೆ ಉಸುರಿ ಹಸುರಿ
ನೆರಳಾಗಲು ಕಲಿಯಿರಿ

ನಿಂತ ನೆಲವನು
ಯಾರೂ ಕಸಿಯಲಾಗದು
ಅದೋ ನೋಡಿ!
ಬೀಳುತಿದೆ ನನ್ನ ಬೀಜ

ಈ ನೆಲದಲಿ ಬಿದ್ದು
ಮೊಳತೇ ತೀರುವುದು

ಮುಗಿಲಗಲ ಮಿಗೆಯಗಲ
ಇನ್ನು ನಿಮ್ಮ ಕಣ್ಣಿಗೆ ಬೀಳದ
ಅಂತರಿಕ್ಷದ ಒಂದು ಚುಕ್ಕೆ ಮಾತ್ರ ನಾನು.

*******

Leave a Reply

Back To Top