ಕಾವ್ಯ ಸಂಗಾತಿ
ಎ. ಹೇಮಗಂಗಾ
ಆಧುನಿಕ ವಚನಗಳು.
ವಚನ ಬರಿಯ ಮಾತಲ್ಲ
ಮಥಿಸಿ ತೆಗೆದ ಅಮೃತವದು
ಅನುಭವದ ಕಡಲಾಳವನು
ವಚನ ಬರಿಯ ಸಂದೇಶವಲ್ಲ
ಹದಗೊಂಡ ಚಿನ್ನವದು
ಜ್ಞಾನದ ಮೂಸೆಯಲಿ
ಚಿಂತನ – ಮಂಥನವೇ ಜ್ಞಾನದ ಹುಟ್ಟು
ಸಿಡಿಲು ಮಲ್ಲಿಕಾರ್ಜುನ
ಬಾಳಿಗೊಂದು ಗುರಿ ಇರಲು
ಗುರಿ ಮುಟ್ಟುವ ಛಲವಿರಲು
ಸಾಧನೆಯ ಗಿರಿಶಿಖರ ದೂರವೆಂತು ?
ಇದೆ ಸಾಧಕ ಬಾಧಕಗಳ
ಅರಿವು ನಿಜ ಸಾಧಕನಿಗೆ
ಸಾಗುವ ಹಾದಿ ಕಡಿದಾದಷ್ಟೂ
ಭಯವೆಲ್ಲಿದೆ ಎತ್ತರಕ್ಕೇರಲು ?
ಸಿಡಿಲು ಮಲ್ಲಿಕಾರ್ಜುನ
---
‘ ಮುಟ್ಟುವೆನೋ ಇಲ್ಲವೋ ‘
ತೊರೆದು ನೀ ಅನುಮಾನವ
ಚಲಿಸುತಿರು ನಿನ್ನ ಗುರಿಯತ್ತ
ದೃಢತೆ ಇರಲಿ ಚಿತ್ತಕೆ
ಸ್ಪಷ್ಟತೆ ಇರಲಿ ದೃಷ್ಟಿಗೆ
ಅವಿಶ್ವಾಸ ಬೇಡ ಮನದೊಳಗೆ
ಪ್ರಯತ್ನ ನಿನ್ನದು ಪ್ರತಿಫಲ ಅವನದು
ಸಿಡಿಲು ಮಲ್ಲಿಕಾರ್ಜುನ
---
ನೀಡುವವನು ಅವನೇ
ಹಿಂಪಡೆವವನೂ ಅವನೇ
ನಗಿಸುವವನು ಅವನೇ
ಅಳಿಸುವವನೂ ಅವನೇ
ಬೆಳಕ ಹರಿಸುವವನೂ ಅವನೇ
ತಮವ ತುಂಬುವವನೂ ಅವನೇ
ಸಕಲವೂ ಅವನ ಅಧೀನದಲ್ಲಿ
ಸಿಡಿಲು ಮಲ್ಲಿಕಾರ್ಜುನ
---
ಕಲಿತಿಲ್ಲ ವಿಹಗ ಯಾರಿಂದಲೂ
ಎತ್ತರಕೆತ್ತರಕೆ ಹಾರುವುದನ್ನು
ಕಲಿತಿಲ್ಲ ಮತ್ಸ್ಯ ಯಾರಿಂದಲೂ
ನೀರಿನೊಳಗೆ ಈಜುವುದನ್ನು
ಕಲಿಸಲಾರರು ಯಾರೂ ನಿನಗೆ
ಬದುಕಿನ ರೀತಿ ನೀತಿಯನ್ನು
ರೂಪಿಸಿಕೋ ನಿನ್ನ ಬಾಳ ನೀನೇ
ಸಿಡಿಲು ಮಲ್ಲಿಕಾರ್ಜುನ
---
ಬಿತ್ತಿದ ಬೀಜಗಳೆಲ್ಲವೂ
ಮೊಳಕೆ ಒಡೆಯುವುದಿಲ್ಲ
ಉತ್ತಿದ ಭೂಮಿಯೆಲ್ಲವೂ
ಹಸಿರು ಹೊದೆಯುವುದಿಲ್ಲ
ಹಿಡಿದ ಕಾರ್ಯವೆಲ್ಲವೂ
ಸುಗಮವಾಗಿ ಸಿದ್ಧಿಸುವುದಿಲ್ಲ
ವಾಸ್ತವದ ಅರಿವಲಿ ನಡೆ ನೀ
ಸಿಡಿಲು ಮಲ್ಲಿಕಾರ್ಜುನ
----
ಸರ್ವಸಂಗ ಪರಿತ್ಯಾಗಿಗೆ
ಲೋಲುಪತೆ ಬೇಕೇಕೆ
ಕಾವಿಯ ಧರಿಸಿದವಗೆ
ಕಾಮದ ಸೆಳೆತವೇಕೆ
ಪಾಪಪ್ರಜ್ಞೆ ಇಲ್ಲದ ನಡೆ
ಮಾದರಿಯೆಂತು ಅನ್ಯರಿಗೆ
ಮುಖವಾಡದ ಬಾಳು ಹೆಚ್ಚು ಕಾಲ ಸಾಗದು
ಸಿಡಿಲು ಮಲ್ಲಿಕಾರ್ಜುನ
----
ನಿನ್ನನ್ನೇ ಅರಸಿ ಬರುವ
ಅವಕಾಶವ ತಳ್ಳಿ ಹಾಕದಿರು
ಒಮ್ಮೆ ಬಂದ ಸದವಕಾಶ
ಮತ್ತೆ ಬಾರದೇ ಇರಬಹುದು
ಸದ್ಬಳಕೆ ಮಾಡಿಕೋ ಸರಿವ
ಕಾಲದ ಪ್ರತಿಕ್ಷಣವನೂ
ವಿವೇಚನೆ ನಿನ್ನೊಳಗಿನ ದಿಕ್ಸೂಚಿ
ಸಿಡಿಲು ಮಲ್ಲಿಕಾರ್ಜುನ
----
ತಪ್ಪದು ಸತ್ಕಾರ್ಯಕೂ
ಅಪಮಾನ ಅಪವಾದಗಳು
ತಪ್ಪದು ಸಚ್ಚಾರಿತ್ರ್ಯಕೂ
ಕಳಂಕ ನಿಂದನೆಗಳು
ಕಲಿತು ಸಾಗು ಕಿವಿಗಳನು
ಕಿವುಡಾಗಿಸುವ ಕಲೆಯ
ಬೆಂಕಿಯಲ್ಲಿ ಬೆಂದ ಮಡಕೆ ನೀನಾಗು
ಸಿಡಿಲು ಮಲ್ಲಿಕಾರ್ಜುನ
----
ಕೂರದಿರು ಸೋತಾಗ ಕೈ ಚೆಲ್ಲಿ
ಎಲ್ಲ ದೇವರ ಆಟವೆಂದು
ದೂರದಿರು ದೂಷಿಸಿ ಅವನ
ದುರಿತಕೆ ಕಾರಣನೆಂದು
ಉಣ್ಣಲೇಬೇಕು ನೀ
ಪೂರ್ವಜನ್ಮದ ಕರ್ಮಫಲವ
ಪಲಾಯನವಾದಿ ಆಗದಿರು ಎಂದೂ
ಸಿಡಿಲು ಮಲ್ಲಿಕಾರ್ಜುನ
--------------------------------------
ಎ. ಹೇಮಗಂಗಾ
Amazing