ಮಕ್ಕಳ ವಿಭಾಗ
‘ಭೂಮಿಯ ಕಂದ’-ಮಕ್ಕಳ ಗೀತೆ
ಮೀನಾಕ್ಷಿ ಸೂಡಿ.
ಚಂದಮಾಮ ಓಡಿ ಬಾ
ನನ್ನಾ ಜೊತೆಗೆ ಆಡು ಬಾ
ಕೊಬ್ಬರಿ ಸಕ್ರಿ ಕೊಡ್ತೀನಿ
ಮೆಲ್ಲ ಮೆಲ್ಲನೆ ಜಾರಿ ಬಾ
ಭೂಮಿಯನ್ನು ಸುತ್ತುವೆ
ಇರುಳ ಕಳೆದು ಬೆಳಗುವೆ
ಭೂಮಿ ಚಂದ ಕಾಣುವಂತೆ
ಬೆಳದಿಂಗಳ ಸುರಿಸುವೆ
ದಿನವು ನಿನ್ನ ನೋಡುತಾ
ತುತ್ತು ತಿನ್ನುವೆ ಹಾಡುತಾ
ನಿನ್ನ ಹಾಗೇ ಸುತ್ತುತಾ
ಆಡುವೆ ನಾ ತಕಧಿಮಿತಾ
ನೀನು ಬಹಳ ಚಂದ
ನೋಡಲು ಬಲು ಆನಂದ
ಹುಣ್ಣಿಮೆ ಬೆಳಕು ನಿನ್ನಿಂದ
ಬಾರೋ ಭೂಮಿಯ ಕಂದ
ಬಾರೋ ಮಾಮಾ ಭೂಮಿಗೆ
ಬಾರೋ ನನ್ನ ಶಾಲೆಗೆ
ಅ, ಆ,ಇ, ಈ, ಕಲಿಸುವೆ
ಕನ್ನಡ ಕಸ್ತೂರಿ ಓದಿಸುವೆ
ನಿನ್ನಲಿ ಏನೋ ಸೆಳೆತವಿದೆ
ಅಲೆಯು ಕೂಡ ಕುಣಿಯುತಿದೆ
ಭೂಮಿ ಸುತ್ತೋ ನಿನ್ನಾಟ
ನಮಗೂ ಕೂಡ ಒಂದು ಪಾಠ
ಮೀನಾಕ್ಷಿ ಸೂಡಿ.