ಪ್ರಮೋದ ಜೋಶಿ ಕವಿತೆ-ಹುಟ್ಟದೇ ಸಾಯುತಿವೆ

ಕಾವ್ಯ ಸಂಗಾತಿ

ಪ್ರಮೋದ ಜೋಶಿ

ಹುಟ್ಟದೇ ಸಾಯುತಿವೆ

ಎದೆ ಬಿಗಿದು ಭಾರವಾಗಿ
ಕಣ್ಣಾಲಿಯಲಿ ನೀರು ಬಂದಾಗ
ಮಾತಿನ ಮನೆಗೆ
ಮೌನದ ಬೀಗ

ನಿರುತ್ತರ ಪ್ರಶ್ನೆಗಳು
ದೈನಿಕ ಚಟುವಟಿಕೆಯೊಳಗೆ
ಬದುಕಲಾರದೇ ಸತ್ತು
ಸಮಾಧಿಯಾಗಿ ಇಲ್ಲದ ಮಸಣವಾಗಿದೆ

ನೋವಿನೊಳ ನಗುವು ಅಣಿಕಿಸಿದರೂ
ನಿರ್ಲಕ್ಷಿಸಿದ ದು:ಖ ಒತ್ತಾಯದಿ ಸರಿದು
ಬದುಕಲು ಅನುವು ಮಾಡಿ
ಸಮಾಧಿ ನಡುವೆಯೇ ದಾರಿ ಮಾಡಿದೆ

ಬದುಕಿನ ಅನಿವಾರ್ಯತೆ
ಪ್ರಾಸಂಗಿಕತೆಯನ್ನೆ ಊರುಗೋಲಾಗಿಸಿ
ಸೂತ್ರದಗೊಂಬೆಯಂತೆ ನಡೆಯುತಿರಲು
ಜೀವನವೇ ಬದುಕಿಗೆ ಪ್ರಶ್ನೆಯಾಗಿದೆ

ಉತ್ತರಾನ್ವೇಷಣೆಗೆ ವ್ಯವಧಾನವಿಲ್ಲದೆ
ಯಾಂತ್ರಿಕತೆ ಚಾಲನೆಗೆ ಸಿಲುಕಿ
ಸಾಂದರ್ಭೀಕ ಲಾಭದ ಮೋಹದಿಂದ
ಭಾವನೆಗಳೆ ಮಾರಾಟವಾಗುತಿವೆ

ಅರಿವಿನ ಬೀಗದ ಕೈಯ
ಹುಡುಕಾಟದ ನಾಟಕಕ್ಕೆ
ಹೌಹಾರಿದ ಪ್ರಶ್ನೆಗಳು ಆತ್ಮಹತ್ಯೆಗೈದರೆ
ಹಲವು ಹುಟ್ಟದೇ ಸಾಯುತಿವೆ


ಪ್ರಮೋದ ಜೋಶಿ

Leave a Reply

Back To Top