ವಿಮಾಲಾರುಣ ಪಡ್ಡoಬೈಲು ಕವಿತೆ-ಭರವಸೆ

ಕಾವ್ಯ ಸಂಗಾತಿ

ಭರವಸೆ

ವಿಮಾಲಾರುಣ ಪಡ್ಡoಬೈಲು

ನಿನ್ನ ಒಲವ ದನಿಗೆ
ಎದೆ ಬಯಲ ತುಂಬಿ ಹರಿದ ಹೊಳಹು
ಮೂಕಾದ ಮನದ ಭರವಸೆಯ
ಮುಸುಕು ನೀ ಎಳೆದಾಗ
ತುಟಿಯಂಚಿಂದ ಬಿರಿದಿತ್ತು ಮುಗುಳ್ನಗು

ಬದುಕಿನ ಭ್ರಮೆಗೆ ತೊಳಲಿದ ಮನಸು
ಬಚ್ಚಿಟ್ಟ ಕನಸಿಗೆ ಮೋಡವು ಮುಸುಕಿ
ನೀರಸ ಮೈದೆಳೆದು ಬವಣಿಸಿದಾಹೊತ್ತು
ಭಾರದ ಹೃದಯ ದಿಕ್ಕರಿಯದಾಗ
ಕೈಹಿಡಿದೆನ್ನ ಹೂವಾಗಿಸಿದೆ ಮನವ.

ಬದುಕೊಳಗೆ ಬಿರುಗಾಳಿ ಸುಳಿದಾಡಲು
ಕೃತಕತೆಯ ಸುಳಿ ತಿರುತಿರುಗಿ
ಬೆನ್ನಹಿಂದೆಯೆ ಛಾಯೆ ಮೂಡಿ
ಕೂಪ ಬಾಯ್ತೆರೆದು ದಿಟ್ಟಿಸಲು
ಅರಿಯಲಾಗದ ಹೊತ್ತು ಅರಿವ ಮೂಡಿಸಿದೆ.

ಪ್ರೀತಿಯ ತುತ್ತ ಉಣಬಡಿಸದೆ
ಅಣಕಿಸಿದ ಮನಗಳ ನಡುವಲ್ಲಿ
ನೋವಿನ ಮಿಲನದಿ ಬಸವಳಿದು
ಬಲೆಯೊಳಗೆ ಸಿಲುಕಿರಲು
ಬಲೆಯ ಸರಿಸಿ ನೀ ಭರವಸೆಯಾದೆ

ಬಾಳ ಹೊತ್ತಿಗೆಯ ಪುಟದಲಿ
ಭ್ರಮ ಬಂಧನ ಕಳಚಿ
ಸತ್ಯ ಮಿಥ್ಯದ ಆಳ ಅರಿತು
ಕರಾಳ ಬದುಕ ಬೆಳಕಿನೆಡೆಗೆ ನಡೆಸಿ
ನಾನಾದೆ ನಿನ್ನ ಭರವಸೆಯ ಬೆಳಕು..


ವಿಮಾಲಾರುಣ ಪಡ್ಡoಬೈಲು

One thought on “ವಿಮಾಲಾರುಣ ಪಡ್ಡoಬೈಲು ಕವಿತೆ-ಭರವಸೆ

Leave a Reply

Back To Top