ಎ.ಎನ್.ರಮೇಶ್.ಗುಬ್ಬಿ-ಮುಖ ಪುಸ್ತಕದ ಹನಿಗಳು…….

ಕಾವ್ಯ ಸಂಗಾತಿ

ಮುಖ ಪುಸ್ತಕದ ಹನಿಗಳು…….

ಎ.ಎನ್.ರಮೇಶ್.ಗುಬ್ಬಿ

  1. ಗೋಡೆ ಕಥೆ.!

ಕೆಲವರ ಗೋಡೆಯಲಿ
ಬರೀ ಆತ್ಮರತಿಯ ಅಬ್ಬರ.!
ಕೆಲವರ ಗೋಡೆಯಲಿ
ಕೆಸರೆರಚಾಟದ ಗೊಬ್ಬರ.!


  1. FB ಭಾವಾರ್ಥಗಳು..!

ಲೈಕು ಮಾಡಿದ್ದಾರೆಂದರೆ..
ಮೆಚ್ಚಿದ್ದಾರೆಂದಲ್ಲ ಅರ್ಥ
ನೋಡಿದ್ದಾರೆಂದು ಅರ್ಥ
ಕಾಮೆಂಟಿಸಿದ್ದಾರೆಂದರೆ..
ಬೆನ್ತಟ್ಟುತ್ತಿದ್ದಾರೆಂದಲ್ಲ ಅರ್ಥ
ಮಗನೆ ನೀನು ಹಾಕಿದ್ದನ್ನು
ನಾನು ನಿತ್ಯ ಓದುತ್ತಿದ್ದೇನೆ
ನಾನು ಹಾಕುವುದನ್ನೂ ನೀನು
ಓದಿ ಪ್ರತಿಕ್ರಯಿಸು ಎಂದರ್ಥ.!


  1. ಮರ್ಮ..!

ಮುಖಪುಸ್ತಕದಿ ಬಹಳಷ್ಟು ಮಂದಿ
ತಮ್ಮ ಮುಖಚಿತ್ರ ಹಾಕಿಲ್ಲವೆಂದರೆ..
ಸ್ಫುರದ್ರೂಪಕೆ ದೃಷ್ಟಿಯಾದೀತೆಂಬ
ಅಂಕೆ ಶಂಕೆ ಭೀತಿಗಳಲ್ಲ ಪ್ರೇರಣ
ಏಕೆ ಅಂಗೈ ತೋರಿಸಿ ಅವಲಕ್ಷಣ
ಅನಿಸಿಕೊಳ್ಳಬೇಕೆಂಬುದೇ ಕಾರಣ..!


  1. FB ಫಸಲು.!

ಇಲ್ಲಿ ಕೆಲವರು ಸಾಧನೆ ತೋರುವುದಕಿಂತ
ನಿತ್ಯವೂ ವೇದನೆ ಕಾರಿಕೊಳ್ಳುವುದೇ ಹೆಚ್ಚು.!
ಪ್ರತಿಭೆ ಪರಿಶ್ರಮದ ಕಂಪು ಬೀರುವುದಕಿಂತ
ಪರಿತಪಿಸಿ ಅನುಕಂಪ ಗಿಟ್ಟಿಸಿಕೊಳ್ಳುವ ಹುಚ್ಚು.!


  1. ಗುಪ್ತಾಭಿಮಾನ..!

ಬರಹಕ್ಕಿಂತಲೂ ಬರೆವವರು
ಚೆಂದವಿದ್ದರೆ ಲೈಕು ಹೆಚ್ಚೆಚ್ಚು
ಹೆಣ್ಮಕ್ಕಳಾದರಂತು ಅಚ್ಚುಮೆಚ್ಚು
ಬರಹಕೆ ಕಾಮೆಂಟಿಸುವುದಕಿಂತ
ಇನ್ಬಾಕ್ಸಿನಲಿ ಹೋಗಿ ಹೋಗಿ..
ಕುಶಲೋಪರಿ ಕೇಳುವರೆ ಹೆಚ್ಚು
ಅಬ್ಬಾ ಅದೇನು ಕಾಳಜಿ ಹುಚ್ಚು.!


  1. ಮನಮನ ಕಥೆ.!

ಮುಖಪುಸ್ತಕ ಜಾಲತಾಣವೆಂದರೆ
ಕೆಲವರಿಗೆ ನಂಜುಕಾರುವ ವೇದಿಕೆ
ಕೆಲವರಿಗೆ ಭಟ್ಟಂಗಿತನದ ಭೂಮಿಕೆ
ಹಲವರಿಗೆ ಕಾಲಹರಣ ಕೈ-ಗಾರಿಕೆ
ಬೆರಳೆಣಿಕೆಯವರಿಗಷ್ಟೆ ಕಲೆ ಸಾಹಿತ್ಯ
ಚಿಂತನೆಗಳ ಕ್ರಿಯಾಶೀಲ ಪೀಠಿಕೆ.!


ಎ.ಎನ್.ರಮೇಶ್.ಗುಬ್ಬಿ.

Leave a Reply

Back To Top