ಡಾ.ಸುಮತಿ ಪಿ ಕಾರ್ಕಳ-ಕಥೆ,’ಮುದುಡಿದ ಮನ ಅರಳಿದಾಗ’

ಕಥಾಸಂಗಾತಿ

ಮುದುಡಿದ ಮನ ಅರಳಿದಾಗ

ಡಾ.ಸುಮತಿ ಪಿ ಕಾರ್ಕಳ

ಕಷ್ಟಪ್ಪನದು ಕೂಲಿ ಮಾಡಿ ಬದುಕುವ ಬಡತನದ ಕುಟುಂಬ.ನಾಲ್ಕು ಜನ ಸಣ್ಣ ಸಣ್ಣ ಮಕ್ಕಳು ಹಾಗೂ ಹೆಂಡತಿಯೊಂದಿಗೆ ಅಲ್ಲಿ ಇಲ್ಲಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ.ದೊಡ್ಡ ಮಗಳು ಚಂಪ ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದಳು.ಉಳಿದ ಮೂವರು ಮಕ್ಕಳು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದರು.ಚಂಪನಿಗೆ ಓದಿ ತಾನೊಂದು ಸರಕಾರಿ ಕೆಲಸ ಪಡೆಯಬೇಕೆಂಬ ಆಸೆ. ಹತ್ತನೇ ತರಗತಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಪಿ ಯು ವಿದ್ಯಾಭ್ಯಾಸಕ್ಕೆ ಸೇರಿಸಿದರು.ಆದರೆ ಎರಡು ತಿಂಗಳು ಕಳೆಯುವಷ್ಟರಲ್ಲಿ  ಕೃಷ್ಣಪ್ಪನ ಆರೋಗ್ಯ ಕೈಕೊಟ್ಟಿತು.ಕೆಲಸ ಮಾಡಲಿಕ್ಕಾಗದೆ ಮನೆಯಲ್ಲಿ ವಿಶ್ರಾಂತಿ ಪಡೆಯಬೇಕಾಯಿತು ಕೃಷ್ಣಪ್ಪನ ಹೆಂಡತಿ ಮನೆಕೆಲಸ ಮಾಡಿ ನಾಲ್ಕು ಮಕ್ಕಳನ್ನು ನೋಡಿಕೊಳ್ಳಲು ಕಷ್ಟವಾದಾಗ ಚಂಪಾ ತಾನೂ ಶಾಲೆ ಬಿಟ್ಟು ಕೆಲಸಕ್ಕೆ ಸೇರಬೇಕಾಯಿತು.
ಕೃಷ್ಣಪ್ಪ ಕೆಲಸ ಮಾಡುತ್ತಿದ್ದ ರಂಗಣ್ಣನ ಸೋದರ ಮಾವನ ಮನೆಯಲ್ಲಿ ಅಜ್ಮ ಅಜ್ಜಿ ಇಬ್ಬರೇ ಇದ್ಧು, ಮಕ್ಕಳಿಬ್ಬರೂ ವಿದೇಶದಲ್ಲಿದ್ಧು, ಅವರನ್ನು ನೋಡಿಕೊಳ್ಳಲು ಚಂಪ ಬರುವಳೇ ಎಂದು ಕೇಳಿದಾಗ,ಕೆಲಸ ಹುಡುಕುತ್ತಿದ್ಧ ಚಂಪಾ ಕೆಲಸಕ್ಕೆ ಒಪ್ಪಿಕೊಂಡಳು. ಮನೆಕೆಲಸ,ಅಡುಗೆ ಕೆಲಸ ಮಾಡಿಕೊಂಡು,ಅಜ್ಜ ಅಜ್ಜಿ ಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಳು.ತಿಂಗಳ ಸಂಬಳ ಸಿಕ್ಕಿದಾಗ ಮನೆಗೆ ತಂದು ಕೊಡುತ್ತಿದ್ದಳು.ಐದಾರು ತಿಂಗಳು ಕಳೆಯುವಷ್ಟರಲ್ಲಿ ಚಂಪಳ ಕೆಲಸ ನೋಡಿ ಸಂಬಳ ಸ್ವಲ್ಪ ಜಾಸ್ತಿ ಮಾಡಿದರು.
ಚಂಪಾ ಬುದ್ಧಿವಂತೆ ಮಾತ್ರವಲ್ಲ, ಬಡತನದಲ್ಲಿಯೇ ಹುಟ್ಟಿ ಬೆಳೆದವಳಾದ್ಧರಿಂದ ಕುಟುಂಬ ಜೀವನದ ಕಷ್ಟಸುಖ ಅರಿತವಳು.
ತನಗೆ ಸಿಕ್ಕಿದ ಹೆಚ್ಚುವರಿ ಸಂಬಳವನ್ನು ಹಾಗೆ ಉಳಿಸಿಟ್ಟಳು.ಒಂದು ದಿನ ಅಜ್ಜ ಬ್ಯಾಂಕಿನಿಂದ ಹಣ ತರಲೆಂದು ಹೋಗುವಾಗ,ಚಂಪಾ ತಾನು ಉಳಿಸಿಟ್ಟ ಹಣವನ್ನು ನೀಡಿ ,ಬ್ಯಾಂಕ್ನಲ್ಲಿ ಇಡಬೇಕೆಂದು ಹೇಳಿದಳು.ಅಜ್ಜನಿಗೆ ಚಂಪಳ ಉಳಿತಾಯ ಬುದ್ಧಿ ನೋಡಿ ತುಂಬಾ ಖುಷಿಯಾಯಿತು. ಅದೇ ದಿನ ಅವಳನ್ನೂ ಕೂಡ ಕರೆದುಕೊಂಡು ಹೋಗಿ,ಅವಳಿಗೆ ಹದಿನೆಂಟು ವರ್ಷ ದಾಟಿದ್ಧರಿಂದ ಅವಳ ಹೆಸರಿನಲ್ಲೇ ಉಳಿತಾಯ ಖಾತೆ ತೆರೆದು ಹಣವನ್ನು  ಜಮೆ ಮಾಡಿದರು.ಅಂದಿನಿಂದ ಪ್ರತಿ ತಿಂಗಳು ಚಂಪಾ ಸ್ವಲ್ಪ ಸ್ವಲ್ಪ ಉಳಿತಾಯ ಮಾಡಿದಳು.
ಚಂಪಾಳಿಗೆ ಮನೆಯ ಹತ್ತಿರದಿಂದ ಮಕ್ಕಳು ಶಾಲೆಗೆ ಹೋಗುವಾಗ ತುಂಬಾ ನೋವಾಗುತ್ತಿತ್ತು.ತಾನೂ ಸ್ಥಿತಿವಂತಳಾಗಿರುತ್ತಿದ್ಧರೆ,ಅವರ ಹಾಗೆ ಕಾಲೇಜಿಗೆ ಹೋಗಿ ಚೆನ್ನಾಗಿ ಕಲಿಯಬಹುದಿತ್ತು ಎಂದು ಮನಸಿನೊಳಗೆ ಅಂದುಕೊಳ್ಳುತ್ತಿದ್ದಳು.ಹತ್ತಿರದ ಮನೆಯ ಮಕ್ಕಳು ಶಾಲೆಗೆ ಹೋಗುವಾಗ ಅವರಲ್ಲಿ ಮಾತನಾಡುತ್ತಾ ಗೆಳೆತನ ಬೆಳೆಸಿಕೊಂಡಿದ್ದಳು.ಅವರ ಮನೆಯಿಂದ ಎರಡು ಕಿ.ಮೀ ಅಂತರದಲ್ಲಿ ಕಾಲೇಜಿತ್ತು.
 ಒಂದು ದಿನ ಗೆಳತಿಯರಲ್ಲಿ  ಮಾತನಾಡುತ್ತಾ ,ಚಂಪಾ ತನಗೂ ಓದಬೇಕೆಂಬ ಆಸೆಯಿತ್ತು.ತನ್ನ ಮನೆಯ ಪರಿಸ್ಥಿತಿಯಿಂದಾಗಿ ಮಧ್ಯದಲ್ಲಿಯೇ ಶಾಲೆಬಿಡುವಂತಾಯಿತು ಎಂದು ಬೇಸರಪಟ್ಟು ಹೇಳಿದಾಗ,ಅವಳ ಗೆಳತಿಯರು ನೀನು ಖಾಸಗಿಯಾಗಿ ಪರೀಕ್ಷೆ ಬರೆಯಬಹುದು.ಮನೆಯಲ್ಲಿಯೇ ಓದಿ ಬರೆಯುವ ಅವಕಾಶವಿದೆ.ಪೀಸ್ ಕೂಡ ತುಂಬಾ ಕಡಿಮೆ.ನಾವು ನಿನಗೆ ನಮ್ಮ ನೋಟ್ಸ್ ಕೊಡುತ್ತೇವೆ.ನೀನು ನಿನ್ನ ಕೆಲಸ ಮುಗಿಸಿ ಬರೆದುಕೊಂಡು ಓದು,ನಮ್ಮ ಜೊತೆಗೆ ಪರೀಕ್ಷೆ ಬರೆ ಎಂದು ಸೂಚಿಸಿದಾಗ,ಚಂಪಳ  ಮುದುಡಿದ ಮನದಲ್ಲಿ ಕನಸು ಚಿಗುರಿತು.ಯಾವುದಕ್ಕೂ ತಾನು ಕೆಲಸ ಮಾಡುತ್ತಿದ್ದ ಅಜ್ಜನನ್ನು ಕೇಳಬೇಕು ಎಂದುಕೊಂಡಳು.ಆದರೆ ಏನೂ ಹೇಳುವರೋ ಎಂಬ ಭಯ ಬೇರೆ.
ಒಂದು ದಿನ ಅಜ್ಜ ಅಜ್ಜಿ ಇಬ್ಬರೂ ಕುಳಿತಿರುವಾಗ ಧೈರ್ಯ ಮಾಡಿ “ನಾನು ದ್ವಿತೀಯ ಪಿಯುಸಿ ಪರೀಕ್ಷೆ ಖಾಸಗಿಯಾಗಿ ಮನೆಯಲ್ಲಿಯೇ ಓದಿ ಕಟ್ಟಬಹುದೇ ಪೀಸಿಗೆ ನಾನು ಉಳಿತಾಯ ಮಾಡಿದ   ಹಣ ಇದೆ”ಎಂದಳು.
ಚಂಪಳ ಆಸೆಯನ್ನು ಆಲಿಸಿದ ಅಜ್ಜ ಅಜ್ಜಿ ಬೇಡ ಹೇಳಲಿಲ್ಲ‌.ಅವಳನ್ನು ತನ್ನ ಮೊಮ್ಮಗಳಂತೆಯೇ ಕಾಣುತ್ತಿದ್ದರು ಅಲ್ಲದೇ ಅವಳಲ್ಲಿದ್ಧ ಓದಬೇಕೆಂಬ ತುಡಿತಕ್ಕೆ ಮೆಚ್ಚುಗೆಯಾಗಿ ,ಒಪ್ಪಿಕೊಂಡರು.

ಮರುದಿನ ಚಂಪಾ ಬೇಗನೆ ಎದ್ದು ಎಲ್ಲಾ ಕೆಲಸ ಮುಗಿಸಿ,ಗೆಳತಿಯರ ಜೊತೆ ಕಾಲೇಜಿಗೆ ಹೋಗಿ ಪರೀಕ್ಷೆ ಕಟ್ಟಲು ಅರ್ಜಿ ಹಾಕಿ ಬಂದಳು.ಚಂಪಾಳಿಗೆ ಈಗ ಅಜ್ಜ ಅಜ್ಜಿಯ ಬಗ್ಗೆ  ಗೌರವ ಹೆಚ್ಚಿತು.ಅವರಿಗೆ ಆರೈಕೆಯಲ್ಲಿ ಯಾವುದೇ ಕೊರತೆಯಾಗದಂತೆ ನೋಡಿಕೊಂಡು ಮನೆಯಲ್ಲಿಯೇ ಓದಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಳು.

 ಆ ದಿನ ದ್ವಿತೀಯ ಪಿಯುಸಿ ಫಲಿತಾಂಶ ಬರುವುದಾಗಿತ್ತು. ಚಂಪಾಳಿಗೆ ಏನಾಗುವುದೋ ಎಂಬ ಕುತೂಹಲ ಜೊತೆಗೆ ಭಯ. ಮೊದಲಿನ ರಾತ್ರಿ ನಿದ್ದೆ ಬಾರದೆ ಬೇಗ ಎದ್ದು ಎಲ್ಲಾ ಕೆಲಸ ಮಾಡಿ ಮುಗಿಸಿದಳು.ಫಲಿತಾಂಶ ನೋಡಲು ಹೋದವಳು ನಗುನಗುತ್ತಾ ಬಂದಳು.ಖಾಸಗಿಯಾಗಿ ಪರೀಕ್ಷೆ ಕಟ್ಟಿದರೂ ಆ ಕಾಲೇಜಿಗೆ ಪ್ರಥಮ ಸ್ಥಾನಿಯಾಗಿ ಉತ್ತಮ ಅಂಕಗಳೊಂದಿಗೆ ಪಾಸಾಗಿದ್ದಳು.ಅಜ್ಜ ಅಜ್ಜಿಗೆ ಖುಷಿಯೋ ಖುಷಿ.ಅಮೇರಿಕದಿಂದ ಮಗ ಪೋನ್ ಮಾಡಿದಾಗ ವಿಷಯ ತಿಳಿಸಿ ಸಂತಸಪಟ್ಟರು.ಅವರ ಮಗ ಮತ್ತು ಸೊಸೆ ಚಂಪಾ ಮನೆಕೆಲಸ ಮುಗಿಸಿ, ಕಾಲೇಜು ಹತ್ತಿರವಿರುವುದರಿಂದ ಕಲಿಯುವುದಾದರೆ ಕಲಿಯಲಿ ಎಂದು ಖರ್ಚಿಗೆ ಹಣವನ್ನೂ ಕಳಿಸಿದರು.ಚಂಪಳ ಮೊಳಕೆಯೊಡೆದ ಕನಸಿಗೆ ಚಿಗುರೆಲೆ ಮೂಡಲು ಪ್ರಾರಂಭವಾಯಿತು.
ಕಾಲೇಜಿಗೆ ಸೇರಿ, ಪದವಿ ಶಿಕ್ಷಣ,ನಂತರ ಶಿಕ್ಷಕ ತರಬೇತಿ ಪಡೆದು,ಉತ್ತಮ ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣಗೊಂಡದ್ದರಿಂದ ಕೂಡಲೇ ಸರ್ಕಾರಿ ಉದ್ಯೋಗನೂ ಸಿಕ್ಕಿತು.ಅಜ್ಜ ಅಜ್ಜಿಗೆ ಚಂಪಾ ಮನೆಯ ಮೊಮ್ಮಗಳೇ ಆದಳು.
    ಚಂಪಾ ತನ್ನ ಮೂವರು ತಮ್ಮಂದಿರಿಗೂ ಚೆನ್ನಾಗಿ ಓದಿಸಿದಳು.ಅವರೂ   ಕೆಲಸಕ್ಕೆ ಸೇರಿಕೊಂಡರು.
ಚಂಪಳ ಮನಸ್ಸಿಗೆ ತಕ್ಕಮಟ್ಟಿಗೆ ತೃಪ್ತಿ ಸಿಕ್ಕಿತು.
 ಒಂದು ದಿನ ಅಜ್ಜನ ಮಗ ಅಮೇರಿಕಾದಿಂದ ಬಂದರು.ಬರುವಾಗ ಅವರ ಗೆಳೆಯ ರಾಜೇಶ್ ಕೂಡಾ ಬಂದಿದ್ದರು.ಅವರ ತಂದೆ ತಾಯಿ ಇಬ್ಬರೂ ಎಕ್ಸಿಡೆಂಟಲ್ಲಿ ತೀರಿದ್ದು,ಊರಲ್ಲಿ ಅಣ್ಣ ಒಬ್ಬಂಟಿಯಾಗಿ ಇದ್ದ.ಅಣ್ಣನಿಗೆ ಮದುವೆಯಾಗಬೇಕೆಂಬ ಮನಸ್ಸಿದ್ದರೂ ಹುಡುಗಿ ಸಿಗದೆ ತಡವಾಗುತ್ತಿದೆ ಎಂದು ರಾಜೇಶ್ ಹೇಳಿದಾಗ.ಅಜ್ಜ” ನಮ್ಮ ಚಂಪಾ ಆಗಬಹುದೇ?”ನಕ್ಕು ಹೇಳಿದರು.ರಾಜೇಶ್ ಆ ವಿಚಾರ ಗಂಭೀರವಾಗಿ ಪರಿಗಣಿಸಿ ಅಣ್ಣ ರಮೇಶ್ ನನ್ನು ಕರೆಸಿ,ಚಂಪಳನ್ನು ತೋರಿಸಿದ.ಇಬ್ಬರಿಗೂ ಒಪ್ಪಿಗೆಯಾಗಿ ಮದುವೆಯೂ ಆಯಿತು.ಮನೆಮಕ್ಕಳಂತೆ ಅದೇ ಮನೆಯಲ್ಲಿ ಅಜ್ಜ ಅಜ್ಜಿಗೆ ಆಸರೆಯಾಗಿದ್ದರು.ಚಂಪಳ ಮುದುಡಿದ ಮನವು ಅರಳಿದಾಗ ಸಂತಸ ಸಂಭ್ರಮದ ಸೌರಭ ಸೂಸಿತು.


ಡಾ.ಸುಮತಿ ಪಿ ಕಾರ್ಕಳ

Leave a Reply

Back To Top