ಕಾವ್ಯ ಸಂಗಾತಿ
ಆತ್ಮ ಸಖ
ಡಾ. ಅರಕಲಗೂಡು ನೀಲಕಂಠ ಮೂರ್ತಿ
ನನ್ನೀ ದೇಹರಂಗ ನಿರಂತರ ತೊರೆಯುವ
ಹುನ್ನಾರದಿಂದ ಹೊರಟು
ತುದಿಗಾಲಲಿ ನಿಂತಿರುವ
ಆತ್ಮ ಸಖನೆ
ಹೋಗುವ ಮುನ್ನ ನಿನ್ನ ಮುಂದಿನ
ದಾರಿಯ ತಿಳಿಸಿ ಹೋಗು
ನೀನೆಲ್ಲಿ ಹೋದರು ನಾನು
ಎಂದೆಂದಿಗು ಖಂಡಿತ ಬರಲಾರೆನು
ಹೇಗೆ ಬರಲಾದೀತು ಹೇಳು
ನನಗೇನು ಇಂದು ಅಂದಿನ ಬಲವೆ?
ಈಗ ನನ್ನ ಸಂಪೂರ್ಣ ದೈಹಿಕ ಅವನತಿ ಅಲ್ಲವೆ
ನೀನು ಹೊರಟು ನಿಲ್ಲಲು ಕಾರಣ
ಹಾಗೆಂದಮೇಲೆ ಹೇಗೆ ನಿನ್ನ ಹಿಂದೆ
ಬರಲಾದೀತು ಯೋಚಿಸಿ ಹೇಳು
ನೀನೆ ಹೋದಮೇಲೆ
ನನಗಂದಿನ ಬಲವಿದ್ದರು ಹೇಗೆ
ಹಿಂಬಾಲಿಸಲಾದೀತು ಹೇಳು
ಬಲಾಬಲಕು ಜೀವಾಮೃತ ನೀನೆ
ರಂಗಕ್ಕೆ ಕತ್ತಲಾವರಿಸಲು
ಇನ್ನೆಲ್ಲಿಯ ಅಂಥ ಸಂಚಲನ!
ಇದೀಗ ನೀನು ನನ್ನ ಈ ಕ್ಷಣದ ಅಥಿತಿ
ಇನ್ನೇನು ನೀನು ಹಾರಿ ಹೋಗುವೆ
ಎಲ್ಲಾದರು ಹೋಗು
ಯಾರನ್ನಾದರು ಎಂಥದ್ದಾದರು
ಹೋಗಿ ಇನ್ನು ಉದ್ಭವಿಸು
ಒಂದೇ ಒಂದು ಸಣ್ಣ ಸುಳಿವು ತಿಳಿವಾಸೆ
ನಿನ್ನ ಮುಂದಿನ ತಂಗುದಾಣದ ಬಗೆಗೆ
ನಶಿಸುವ ಇಂಥ ಹೊತ್ತಿನಲು ಸಣ್ಣ ಆಸೆ
ಮಾನವ ಸಹಜ ಸ್ವಭಾವ ತಾನೆ!
ನೀನು ಮುಂದೆ ಮಾನವನೊ
ಕ್ರೂರ ಮೃಗವೊ ಕುಖ್ಯಾತ ಕೀಟವೊ
ಹಸುವಿನ ಹಸುಳೆಯೊ
ಅಥವ ಇನ್ನೇನೊ
ನನಗದರ ಸಂಬಂಧ ಇನ್ನಿಲ್ಲ
ಹೊರಟು ನಿಂತದ್ದಿ ತುದಿಗಾಲಲಿ
ಹೋಗಿ ಬಾ ಎನ್ನಲಾರೆ
ಹೋಗು
ಎಲ್ಲಾದರು ಹೇಗಾದರು ಇರು
ಅಲ್ಲಿರುವವರೆಗೆ ನೀನೆ ನೀನಾಗಿರು
ನೆಮ್ಮದಿಯಿಂದಿರು
ನಿನಗಿದೊ ನಿರಂತರ ವಿದಾಯ
ಇನ್ನೇನು ಕತ್ತಲೆ ಆವರಿಸುವ
ಈ ನಿನ್ನ ಇದುವರೆಗಿನ ರಂಗದಿಂದ
ಮಣ್ಣಾಗುವ ಮುರುಕು ಮನೆಯಿಂದ!
ಡಾ. ಅರಕಲಗೂಡು ನೀಲಕಂಠ ಮೂರ್ತಿ.
ಅರ್ಥ ಪೂರ್ಣ ವಾಗಿದೆ
ಆತ್ಮ ಸಖನ ಸಂಬೋಧಿಸಿದ ಪರಿ ಸೊಗಸಾಗಿವೆ
Congrats Murthy!
ವೆಂಕಟೇಶ್ ಅವರಿಗೆ ಮತ್ತು ಹೆಸರು ಹೇಳದ ಆ ಇನ್ನೊಬ್ಬರಿಗೂ ನನ್ನ ಹೃದಯ ತುಂಬಿದ ಧನ್ಯವಾದಗಳು
ಅರ್ಥಪೂರ್ಣವಾಗಿದೆ. ಎಂದಿನಂತೆ ಯೋಚನೆಗೆ ಹಚ್ಚುತ್ತದೆ.
Super sir congrats