ಮೂಕ ನಾಯಕ
ಬಸವರಾಜ ಕಾಸೆ
ಎತ್ತ ನೋಡಿದರತ್ತ
ಅಸಮಾನತೆ ಅಸಹಕಾರ
ಶೋಷಣೆ ಅಸ್ಪೃಶ್ಯತೆಗಳ
ಮೆಟ್ಟಿದವನೊಬ್ಬನು ನೇತಾರ
ಪ್ರತಿ ಹೆಜ್ಜೆಗಳ ಗುರುತು
ಎಷ್ಟೋ ಹೊಣೆಗಳ ಹೆಗಲು
ಎಲ್ಲವೂ ಎಲ್ಲರಿಗಾಗಿ
ಆದರೂ ನಾಳೆಗಳ ಹೊನಲು
ಕುಡಿಯಲು ಕೊಡದ
ತೊಟ್ಟು ನೀರು
ಹುಟ್ಟು ಹಾಕಿದ
ಛಲವು ಜೋರು
ಲಗ್ಗೆ ಹಾಕದೆ ಬಿಡಲಿಲ್ಲ
ನಿಷೇಧಿತ ಕೆರೆ ಕಟ್ಟೆಗಳಿಗೆ
ಹಕ್ಕುಗಳ ಜಾಗೃತಿ
ಮೊಳಗಿಸಿದರು ಮುಗಿಲಿಗೆ
ಗುಡಿ ಗುಂಡಾರಗಳಿಗೆ
ಪ್ರವೇಶಿಸಿ ಚಳುವಳಿ
ಹುರಿದುಂಬಿಸಿ ತುಂಬಿದ
ಆತ್ಮವಿಶ್ವಾಸವೇ ಬಳುವಳಿ
ಶ್ರೇಣಿ ಪದ್ಧತಿಗಳ ಜಾತಿ
ಸ್ತ್ರೀ ಧಮನಗಳ ನೀತಿ
ಹುಟ್ಟಡಗಿಸಿದ ರೀತಿ
ಅದುವೇ ಜೀವನ ಪ್ರೀತಿ
ಬಂದರೂ ಬಹಳ
ಬಾಳು ತುಂಬಾ ಕಷ್ಟ
ಎದುರಿಸುತ್ತಲೇ ನಿಂತರು
ಸಹನೆಯಿಂದ ಶಿಷ್ಟ
ಕಂಡ ಕನಸುಗಳ ಸಾಕಾರ
ಸಂವಿಧಾನದ ಕಾಯಕ
ಬಹಿಷ್ಕೃತ ಭಾರತದ
ಮೂಕ ನಾಯಕ
ಶಿಕ್ಷಣವೊಂದೇ ಪ್ರಖರ ಮಾಧ್ಯಮ
ಎಲ್ಲಾ ಸಮಸ್ಯೆಗಳಿಗೂ ಗುದ್ದು
ಬಡವರೆಲ್ಲರ ಬೆಳವಣಿಗೆಗೆ
ಆದರೂ ಹೋರಾಡಿ ಮದ್ದು
ಎಲ್ಲಾ ಎಲ್ಲೆಗಳ ಮೀರಿ
ಶ್ರಮಿಸಿದ ಸಮಾಜ ಪ್ರವರ್ತಕ
ಭೀಮರಾವ್ ಅಂಬೇಡ್ಕರರಾದರು
ಆಧುನಿಕ ಭಾರತದ ನಿರ್ಮಾಪಕ
****