ಅಮ್ಮು ರತನ್ ಶೆಟ್ಟಿ ಕವಿತೆ-ಮಗುವಿನ ನೋವು

ಕಾವ್ಯ ಸಂಗಾತಿ

ಮಗುವಿನ ನೋವು

ಅಮ್ಮು ರತನ್ ಶೆಟ್ಟಿ

ಪಂಜರದ ಗಿಣಿಯಂತೆಯೇ
ಕೃತಕ ಬದುಕು ನನ್ನದು
ನೋವು ಭಾದೆಗಳೇನೆಂದು
ಹೆತ್ತವರಿಗೆ ತಿಳಿಯದು

ರವಿಯು ಮೂಡುವ ಮುನ್ನವೇ
ನಿದಿರೆಗೊಡದೆ ಎಬ್ಬಿಸುವರು
ರಮಿಸಿಯೋ , ಬೆದರಿಸಿಯೋ ಶಾಲೆಗೆಂದು ಹೊರಡಿಸುವರು
ನಿದಿರೆಯ ಮಂಪರಿನಲ್ಲಿ ತಿಂದ
ತಿಂಡಿಯ ರುಚಿಯೇನೆಂದೂ ನಾನರಿಯೇ

ತಿಂಗಳಿಗೋ ವರುಷಕೋ
ಫೀಸಿನ ನೆಪದಲ್ಲಿ ಒಂದಿಷ್ಟು ಹಣ ಸುರಿದು
ಯಾರೋ ಅಪರಿಚಿತರ ಆಸರೆಯಲಿ
ಬಿಟ್ಟು ತೆರಳುವರು ನನ್ನ

ಬೆಳಗಿನ ಕೆಲಸಗಳ ಅವಸರದಿ
ಅಮ್ಮ ನನ್ನೆಡೆಗೆ ಗಮನಹರಿಸುವಳೇ ,
ಅವಳಿಗಾದರೂ ಬಿಡುವು ಎಲ್ಲಿದೆ
ದಿನವೆಲ್ಲಾ ಕಛೇರಿಯಲ್ಲೇ ಕಳೆವ ಅಪ್ಪನಿಗೆ
ಮುದ್ದಾಡಲು ಸಮಯವಿರುವುದೇ ವಾರಕ್ಕೊಮ್ಮೆ

ಅದೆಷ್ಟು ದುಬಾರಿ ಆಟಿಕೆಗಳ ಕೊಡಿಸಿ,
ಚಿಕ್ಕ ಪುಟ್ಟ ಆಸೆಗಳೇನೆಂದು ಆಲಿಸದೇ ಹೋದಿರೇತಕೇ ,
ಜೊತೆ ಕೂತು ಸಮಯ ಕಳೆಯದೇ
ಮನೆಯಾಚೆಗೆ ಹೋಗಲು ಸ್ವಾತಂತ್ರ್ಯ ನೀಡದೇ ,
ಅತಿಯಾದ ಕಾಳಜಿ ತೋರಿ
ಹೆತ್ತವರ ಪ್ರೀತಿಯಿಂದಲೇ ವಂಚಿತನಾಗುವಂತೆ ಮಾಡಿಬಿಟ್ಟರು


ಅಮ್ಮು ರತನ್ ಶೆಟ್ಟಿ

One thought on “ಅಮ್ಮು ರತನ್ ಶೆಟ್ಟಿ ಕವಿತೆ-ಮಗುವಿನ ನೋವು

Leave a Reply

Back To Top