ರಜಿನಿ ಗೌಡ ಮಂಡ್ಯ ಕವಿತೆ-ಮಾನವ ಪ್ರಕೃತಿ

ಕಾವ್ಯ ಸಂಗಾತಿ

ಮಾನವ ಪ್ರಕೃತಿ

ರಜಿನಿ ಗೌಡ ಮಂಡ್ಯ

ಬಿಡಿ, ಯಾರದೋ ಭಾವನಾ ಲೋಕಕ್ಕೆ
ಬಣ್ಣವ ಬಳಿದು ಮನವ ಚಿತ್ರಿಸಬೇಡಿ
ಕತ್ತಲು ತುಂಬಿದಲಿ ಬೆಳಕ ಚೆಲ್ಲದಿದ್ದರೂ ಸರಿ
ಸಣ್ಣ ಕಾಂತಿಗೂ ಮಸಿಯ ಬಳಿಯದಿರಿ ಸಾಕು

ಏತಕೆ? ಅನುಮಾನದ ಸರಮಾಲೆ ಮಾಡಿ
ನೋಡುವವರ ಕುತ್ತಿಗೆಗೆ ಅಲಂಕರಿಸುವಿರಿ
ಓ! ನಿಮ್ಮಲ್ಲಿ ಅದೇ ಸಂಸ್ಕಾರವೇ? ಸತ್ಕಾರವೇ?
ಅಬ್ಬಾ! ಎಂತಹ ಜನುಮ? ಅರಿಯನು ಹರನೆ!

ಪರರ ಕ್ಷಣಿಕ ಸಂಭ್ರಮ ಸಹಿಸದೆ
ನಿನ್ನ ಸಂತೋಷವ ಪಣಕಿಟ್ಟು ಕೆಡವುವೆಯಾ?
ಮನುಜ, ಇದುವೇ ಜಗದ ನಿಯಮವೇ?
ತಿಳಿಸು, ಕಲಿಯುವುದಕ್ಕಲ್ಲ, ಎಚ್ಚರಿಸಿಕೊಳ್ಳುವುದಕ್ಕಷ್ಟೇ!

ಎಲ್ಲರ ಯೋಗ್ಯತೆಯ ಮುಖದಿಂದ ಅಳೆಯುವೆಯಾ?
ಗುಣವ ಗೊಣಗಿ ದೂಷಿಸುವೆಯಾ? ತಿಳಿ
ಮುಖದ ಕಾಂತಿ ಉಳಿಯಲ್ಲ! ಗುಣವು ಅಳಿಯಲ್ಲ!
ಎಚ್ಚರಿಸಿಕೊ ಮನುಜ ಕೆಡುವ ಮುನ್ನ, ಮನವ

ನೋವಿನ ಜೀವ ನಲಿವ ಬೆರೆಯುವಾಗ
ಸುಮ್ಮನಿದ್ದರೆ ಅವಮಾನವೇ ನಿನ್ನ ಜನುಮಕ್ಕೆ?
ಏತಕೆ? ಈ ಪರಿ ಆತುರ ಶಾಂತಿಯ ಸಂಹಾರಕ್ಕೆ?
ಬೇಡ ಬೇಡುವೆನು ನಿನ್ನ ಛಾಯೆ ಜಗದ ಪ್ರತಿಬಿಂಬಕ್ಕೆ!


ರಜಿನಿ ಗೌಡ ಮಂಡ್ಯ

Leave a Reply

Back To Top