ಬಾಗೇಪಲ್ಲಿ… ಗಜಲ್

ಕಾವ್ಯ ಸಂಗಾತಿ

ಬಾಗೇಪಲ್ಲಿ

ಗಜಲ್

ಗಜಲ್
(ಸಂಪೂರ್ಣ ಮತ್ಲಾ ಗಜಲ್)

ಜೀವನ ಯೌವನ ಉತ್ತುಂಗದಿ ಎನ್ನ ಬದಕಲಿ ನೀ ಬಂದೆ ಮನದನ್ನೆ
ಮುಪ್ಪಾವರಿಸಿ ಸಂಗಾತಿಯ ಅಗತ್ಯವಿರೆ ಈಗ ನೀ ಹೋದೆ ಮನದನ್ನೆ

ಜೀವನ ಸಂಪೂರ್ಣ ನನ್ನೊಡನೆ ಎನ್ನಬಲವಾಗಿ ನೀ ನಿಂದೆ ಮನದನ್ನೆ
ಹುಸಿಮಾತು ವಾದ ವಿವಾದ ಜಗಳಗಳಲಿ ಸದಾ ನೀ ಹಿಂದೆ ಮನದನ್ನೆ

ಬದಕ ಸವೆಸಲು ಎರಡು ತುತ್ತು ಅನ್ನ ಸಾಕೆಂದು ನೀ ಅಂದೆ ಮನದನ್ನೆ
ನಮ್ಮ ಬದುಕಿನ ಪ್ರತಿ ವಿಷಯದಲೂ ಎತ್ತರದಲೇ ನೀ ನಿಂದೆ ಮನದನ್ನೆ

ಚಾಪೆಯಷ್ಟು ಕಾಲುಚಾಚು ಎಂಬ ಸೂತ್ರದಿ ನಾನು ನೀ ಒಂದೆ ಮನದನ್ನೆ
ಮೊಗದಲಿ ಸದಾ ನಗುವ ತೋರುತ ಮನದೊಳು ನೀ ನೊಂದೆ ಮನದನ್ನೆ

ನಾ ಹುಟ್ಟಿದ ವಂಶಕೆ ಸಕಲ ಕೀರ್ತಿಯನು ಒಗ್ಗೂಡಿಸಿ ನೀ ತಂದೆ ಮನದನ್ನೆ
ಕೃಷ್ಣಾ! ಹೇಗೆ ಸಾಗೀತೋ ಉಳಿದ ಜೀವನ ಇಲ್ಲದೆ ನೀ ಮುಂದೆ ಮನದನ್ನೆ

(ತುಂಬು ಪ್ರೀತಿಯ ವೃದ್ಧ ದಂಪತಿಗಳಲಿ ಪತ್ನೀ ವಿಯೋಗ ಸಂದರ್ಭ)


ಬಾಗೇಪಲ್ಲಿ.

Leave a Reply

Back To Top