‘ಅಮುಗೆ ರಾಯಮ್ಮನ ವಚನ’ ವಿಶ್ಲೇಷಣೆ-ಪ್ರೊ. ಜಿ, ತಿಗಡಿ (ಸೌದತ್ತಿ)

ವಚನ ವಿಶ್ಲೇಷಣೆ

ಪ್ರೊ. ಜಿ, ತಿಗಡಿ (ಸೌದತ್ತಿ)

ಅಮುಗೆ ರಾಯಮ್ಮನ ವಚನ

ವೇಷವ ತೊಟ್ಟು ಗ್ರಾಸಕ್ಕೆ ತಿರುಗುವ
ವೇಷಧಾರಿಗಳ ಕಂಡಡೆ ನಾಚಿತ್ತೆನ್ನ ಮನ.
ಲಿಂಗವನರಿಯದೆ ಲಿಂಗೈಕ್ಯರೆಂಬ
ಅಂಗವಿಕಾರಿಗಳ ಕಂಡಡೆ ಹೊದ್ದದು
ಎನ್ನ ಮನ,
ಅರಿದು ಆಚರಿಸಿದೆನೆಂಬ ಅಜ್ಞಾನಿಗಳ ಕಂಡಡೆ
ಮೃಡನ ಶರಣರು ಮೆಚ್ಚುವರೆ ಅಮುಗೇಶ್ವರಾ?
ಲಿಂಗವನರಿಯದಿರ್ದಡೆ
ಎಂತು ಲಿಂಗೈಕ್ಯರೆಂಬೆನಯ್ಯಾ?

ನಿತ್ಯದ ಹೊಟ್ಟೆಹೊರೆಯಲು ನಾನಾ ವೇಷವ ತೊಟ್ಟು ತಿರುಗುವವರನ್ನು ಕಂಡರೆ ನನಗೆ ನಾಚಿಕೆಯಾಗುತ್ತದೆ ಎನ್ನುತ್ತಾಳೆ ಅಮುಗೆ ರಾಯಮ್ಮ.   ಅದೇ ರೀತಿ ಅಂಗದ ಮೇಲೆ  ಧರಿಸಿಕೊಂಡ ಲಿಂಗದ ಸ್ವರೂಪವನ್ನು ಅರಿಯಲಾರದವರು ಮಡಿದಾಗ, ಅವರನ್ನು ಲಿಂಗೈಕ್ಯರಾದರೆನ್ನುವವರನ್ನು ಅಂಗವಿಕಾರಿಗಳೆಂದು  ನಿಂದಿಸುತ್ತಾಳೆ.  ಇಂತಹ ಬುದ್ಧಿಗೇಡಿಗಳನ್ನು ನನ್ನ ಮನವೆಂದಿಗೂ ಒಪ್ಪಲಾರದೆನ್ನುತ್ತಾಳೆ.   ನಾನೆಲ್ಲವನ್ನೂ ತಿಳಿದಿರುವೆ ಎನ್ನುತ್ತಾ ಅಜ್ಞಾನದ ಆಚರಣೆಗಳಲ್ಲಿಯೇ ಮುಳುಗಿದವರನ್ನು  ಅಮುಗೇಶ್ವರನೆಂದಿಗೂ ಮೆಚ್ಚಲಾರನೆನ್ನುತ್ತಾಳೆ.   ಹೀಗಿರುವಾಗ ಲಿಂಗದ ಅರಿವಿಲ್ಲದಿರುವವರು ಲಿಂಗೈಕ್ಯರಾದರೆಂದು ಹೇಳುವಲ್ಲಿ ಯಾವ ಅರ್ಥವೂ ಇರುವುದಿಲ್ಲವೆಂದು ರಾಯಮ್ಮ ಖಾರವಾಗಿ ಪ್ರತಿಕ್ರಿಯಿಸುತ್ತಾಳೆ.

 "ಉದರ ನಿಮಿತ್ಯಂ ಬಹುಕೃತವೇಶಂ" ಎಂಬಂತೆ ನಾವಿಂದು ಹೊಟ್ಟೆ ಹೊರೆಯಲು ನಾನಾ ವೇಷಗಳನ್ನು   ಹಾಕುತ್ತೇವೆ.   ಇದರ ಜೊತೆಗೆ ಸಮಯ ಸಂದರ್ಭ ಸನ್ನಿವೇಶಗಳಿಗನುಗುಣವಾಗಿ ಊಸರವಳ್ಳಿಯಂತೆ ಬಣ್ಣ ಬದಲಿಸುತ್ತಿರುತ್ತೇವೆ.  ಸುಳ್ಳಂತೂ ನಾಲಿಗೆಯ ಮೇಲೆಯೇ ನರ್ತಿಸುತ್ತಿರುತ್ತದೆ.    ಕಾವಿ ಕಾಷಾಯ ವೇಷಧಾರಿಗಳಾಗಿ ಬಹಿರಂಗದಲ್ಲಿ ಲಾಂಛನಗಳನ್ನು ಧರಿಸಿ  ಮಹಾನ್ ಶರಣರಂತೆ ಪೋಸ್ ಕೊಡುತ್ತಾ,  ಅಂತರಂಗದಲ್ಲಿ ಮಸಲತ್ತು ಮಾಡುತ್ತಿರುತ್ತಾರೆ  ಇಂಥವರನ್ನು ನೋಡಿಯೇ ದಾಸರು, " ಎಲ್ಲಾರೂ ಮಾಡೋದು ಗೇಣು  ಹೊಟ್ಟೆಗಾಗಿ,  ತುಂಡು ಬಟ್ಟೆಗಾಗಿ " ಎಂದು  ಛೇಡಿಸಿದ್ದಾರೆ .  ಅದೇ ರೀತಿ ಲಿಂಗದ ಸ್ವರೂಪ ಮತ್ತು ಮಹತ್ವವನ್ನು ಅರಿಯದೆ ದೇಹದ ಮೇಲೆ ಧರಿಸಿಕೊಂಡು ತಿರುಗುವ ಡೋಂಗಿ ಭಕ್ತರನ್ನು ರಾಯಮ್ಮ ಅಂಗವಿಕಾರಿಗಳೆಂದು ಟೀಕಿಸುತ್ತಾಳೆ.  ನಾನೆಲ್ಲವನ್ನೂ ತಿಳಿದ ಮಹಾಜ್ಞಾನಿ ಎಂದು ಸಮಾಜದಲ್ಲಿ ದೊಡ್ಡಸ್ತಿಕೆಯನ್ನು ತೋರಿಸುತ್ತಾ, ಅಜ್ಞಾನದ ಆಚರಣೆಗಳನ್ನು ಮಾಡುತ್ತಾ ಇತರರಿಗೂ ಮಾಡುವಂತೆ ಬೋಧಿಸುವ ಡಂಬಾಚಾರಿಗಳನ್ನು ದೇವರು ಎಂದಿಗೂ ಮೆಚ್ಚಲಾರನೆನ್ನುತ್ತಾಳೆ ರಾಯಮ್ಮ.   ಅoಗದ  ಮೇಲೆ ಲಿಂಗ ಕಟ್ಟಿಕೊಂಡವರನ್ನು ಲಿಂಗಕ್ಯರೆಂದು  ಹೇಳುವಲ್ಲಿ ಯಾವ ಅರ್ಥವೂ ಇಲ್ಲ.  ಯಾಕೆಂದರೆ ಲಿಂಗದ ಅರಿವೇ ಇಲ್ಲದವರು ಲಿಂಗೈಕ್ಯರಾಗುವ ಬಗೆಯಂತು?  ಎಂದು ಸ್ಪಷ್ಟವಾಗಿ ನುಡಿಯುತ್ತಾ ಇಂತಹವರ ಬಹುಕ್ರತ ನಾನಾವೇಶಗಳನ್ನು ಕಳಚಿ ಬೆತ್ತಲೆಗೊಳಿಸುತ್ತಾಳೆ.

   ರಾಯಮ್ಮನ ದೃಷ್ಟಿಯಲ್ಲಿ ಲಿಂಗ ಧರಿಸಿದವರಿಗೆ ಲಿಂಗದ ಕುರಿತಾಗಿ ಜ್ಞಾನವಿರಬೇಕು.  ಗುರುಮುಖೇನ ಅದನ್ನು ಚೆನ್ನಾಗಿ ಅರಿತಿರಬೇಕು.   ಜ್ಞಾನ ಮತ್ತು  ಆಚಾರದ ಸಂಕೇತವಾದ ಲಿಂಗವು ಕರಸ್ಥಲಕ್ಕೆ ಬಂದಮೇಲೆ ನಮ್ಮ  ಅಂತರಂಗ ಬಹಿರಂಗಗಳು ಪರಿಶುದ್ಧಗೊಳ್ಳಬೇಕು.  ಒಮ್ಮನದಿಂದ ಪೂಜಿಸಿದಲ್ಲಿ ಪರಮಾತ್ಮನ ಕೃಪೆ ಖಂಡಿತವಾಗಿ ಆಗುತ್ತದೆ ಎಂಬುದು ರಾಯಮ್ಮನ ನಿಲುವಾಗಿದೆ.
-----------------------

ಪ್ರೊ. ಜಿ, ತಿಗಡಿ (ಸೌದತ್ತಿ)

Leave a Reply

Back To Top