ಲಲಿತಾ ಪ್ರಭು ಅಂಗಡಿ ಮುಂಬಯಿ-ಸ್ಮೃತಿ ಪಟಲದ ಬುಡ್ಡಿ ಚೀಲ

ಕಾವ್ಯ ಸಂಗಾತಿ

ಸ್ಮೃತಿ ಪಟಲದ ಬುಡ್ಡಿ ಚೀಲ

ಲಲಿತಾ ಪ್ರಭು ಅಂಗಡಿ ಮುಂಬಯಿ

ನನಗೆ ನನ್ನಜ್ಜಿಯ ಬುಡ್ಡಿಚೀಲದ
ನೆನಪೆ ಸ್ಮೃತಿ ಪಟಲದಲಿ ತೇಲಾಡತಾ ಇರುತ್ತೆ
ಯಾಕೆಂದರೆ ಆ ಚೀಲದಲ್ಲಿ ಏಲಕ್ಕಿ ಲವಂಗ
ಅಜೀವಾನ ಬಡೆಸೋಪು ಒಂದು ಪದರಿನಲಿ
ಅಡಿಕೆ ಎಲೆ ರೊಕ್ಕ ಮತ್ತೊಂದು ಪದರಿನಲಿ
ವೈದ್ಯ ಲೋಕದ ಆ ಬುಡ್ಡಿ ಚೀಲ ಇಂದು
ಮತ್ತೆ ಮತ್ತೆ ನೆನಪಾಗಿ ಕಾಡುತ್ತೆ
ಕೆಮ್ಮು ಸೀನಿದರೆ ನೆಗಡಿಯೆಂದು
ಲವಂಗ ಅಜಿವಾನ ತಿನ್ನಿಸುವ ಅಜ್ಜಿಯ ಅಮ್ರೃತದ ಹಸ್ತ
ಇಂದದು ಕೊರೊನಾಕ್ಕೂ ಕೂಡ ಸಿದ್ಧಹಸ್ತ
ಅಜ್ಜಿ ಆಚೀಲದಲಿ ಕೈಹಾಕಿ ಆಡಿಕೆ
ತೆಗೆಯುವಾಗ ನಾಲ್ಕಾಣೆ ಕೊಟ್ಟರೆ
ಓಡೋಡಿ ಹೋಗಿ ಶುಂಠಿಪೆಪ್ಪರಮೆಂಟ್ ತಂದು ತಿಂದು ಕುಣಿದಾಡಿದ ಖುಷಿಯ ಆ ನೆನಪು
ಇಂದಿನ ಪಿಜ್ಜಾ ಬರ್ಗರ್ ವೆಪರ್ಸ
ತಿನ್ನುವ ಮಕ್ಕಳಲ್ಲಿ ನಾಕಾಣೆ
ಅಜ್ಜಿಯ ಆ ಅರಿವಿನ ಚೀಲ ಹಳೆಯದಾದರೂ
ಎಷ್ಟು ಅಮ್ರೃತದ ಸಿಂಚನ ಇಂದಿಗೂ ಸಹ
ಉಪ್ಪು ಮಾರಿ ರೊಕ್ಕ ಉಳಿಸಿ ಮಡಚಿಟ್ಟು ಆ ಚೀಲ
ಇಂದಿನ ಎಲ್ಐಸಿ ಪಾಲಿಸಿಯಂತೆ
ತೊಂಬತ್ತರ ಹರೆಯದಲ್ಲೂ ಸೂಜಿಗೆ ದಾರ
ಪೋಣಿಸಿ ಚಿತ್ತಾರದಿ ಕೌದಿ ಹೊಲೆದ
ನನ್ನಜ್ಜಿಯ ಆರೋಗ್ಯದ ಮುಂದೆ
ಇಂದು ನಾ ಚಸ್ಮಾ‌ ಹಾಕಿಕೊಂಡು ಓದುವಾಗ
ಮತ್ತೆ ಮತ್ತೆ ನನ್ನಜ್ಜಿಯ ಆ ಆರೋಗ್ಯ
ನನ್ನ ಸ್ಮೃತಿ ಪಟಲದಲಿ ಕಾಡ್ತಾ ಇದೆ
ಮೈ ಮುರಿದು ದುಡಿದುಂಡ ಪುಷ್ಠಿಯ
ಅಜ್ಜಿಯ ಆ ಕಾಲಕ್ಕೂ
ಇಂದಿನ ಫಾಸ್ಟ್ ಫುಡ್ಡಿನ ನಮ್ಮ ಆರೋಗ್ಯಕ್ಕೂ
ಇರುವ ಅಜಗಜಾಂತರ ಅಂತರ ಕಂಡು
ಸೋಜಿಗವೆನಿಸುತ್ತೆ
ಮತ್ತೆ ಮತ್ತೆ ಅಜ್ಜಿಯ ಅರಿವಿನ ಆ ಚೀಲ
ನನ್ನ ಸ್ಮೃತಿ ಪಟಲದಲಿ ಸದಾ ಮೆಲುಕು ಹಾಕುತ್ತೆ.


ಲಲಿತಾ ಪ್ರಭು ಅಂಗಡಿ

Leave a Reply

Back To Top