ಕಾವ್ಯ ಸಂಗಾತಿ
ಅರ್ಚನಾ ಯಳಬೇರು
ಗಜಲ್
ಅರ್ಚನೆ’ಯಾಗದ ಪುಷ್ಪದ ಅಳಲು ಹೆಪ್ಪುಗಟ್ಟಿಹುದು ಅದರ ಒಡಲೊಳಗೆ
ಚಿಪ್ಪಿನಲಿ ಜನಿಸಿಹ ಮುತ್ತುಗಳ ಹೊಳಪು ಭೋರ್ಗೆರೆಯುವ ಕಡಲೊಳಗೆ
ಹಸಿದೊಡಲಿನ ಆರ್ತನಾದ ಆಲಿಪ ಕರ್ಣಗಳಿಗೆ ಘನ ಘೋರ ದುರಂತ
ಬಾಳಲಿ ಒತ್ತರಿಸುವ ವೇದನೆಯ ಉದಂತ ನಗುವ ತಿರುಕನ ಕಂಗಳೊಳಗೆ
ಅಂಗನೆಯ ಅಂದವನು ಸವಿವ ಅಕ್ಷಿಗಳಲಿ ಅಡಗದಿರಲಿ ಕಾಮ ಪಿಪಾಸು
ಅರಸೊತ್ತಿಗೆಯಲಿ ಮೆರೆವ ಮನುಜನ ಅಟ್ಟಹಾಸ ಬಡವನ ಬದುಕೊಳಗೆ
ನಲುಗದಿರಲಿ ಘನತೆವೆತ್ತ ಗಂಡಿನ ಅಸುವು ಹೆಣ್ಣು ಮಣ್ಣಿನ ವಾಂಛೆಯಲಿ
ಜೀವನ ಜೋಕಾಲಿ ಜೀಕುವ ಜೀವದ ಶ್ರೇಷ್ಠತೆ ನೋವುಗಳ ಸಂತೆಯೊಳಗೆ
ಘಮವ ಸೂಸುತ ಧಾಷ್ಟ್ಯ ಮೆರೆಯುತಿವೆ ಉದುರುವ ಪುಷ್ಪದ ಪಕಳೆಗಳು
ಚಿಂತನೆಯ ಛೇಡಿಸುತ ಧಗಧಗಿಸಿ ಉರಿಯುತಿದೆ ಚಿಂತೆಯು ಚಿತ್ತದೊಳಗೆ
(ಮತ್ಲಾದಲ್ಲಿ ತಖಲ್ಲುಸನಾಮ ಬಳಸಿ ಬರೆದ ಗಜಲ್.. ಈ ತಖಲ್ಲುಸನಾಮ ವನ್ನು ೧೪ ನೇ ಶತಮಾನದ ಪರ್ಷಿಯನ್ ಗಜಲ್ ಕಾರ ಹಾಫೀಜ್ ರವರು ಪ್ರಥಮವಾಗಿ ಬಳಸಿದರೆಂದು ಹೇಳಲಾಗುತ್ತದೆ. ಆಕರ ಗ್ರಂಥ ಗಾಲಿಬ್ ಸ್ಮೃತಿ)
ಅರ್ಚನಾ ಯಳಬೇರು