ನೀನಿಲ್ಲದ ಈ ಹೊತ್ತು
ಬಿದಲೋಟಿ ರಂಗನಾಥ್
ದೇಶ ಸುಡುವ ಕಣ್ಣುಗಳ ನಡುವೆ
ನಿನ್ನ ಹೆಜ್ಜೆಗಳ ಸವಾರಿ
ಹೋಗುತ್ತಲೇ ಇದೆ ಬಿಸಿಲು ಬೇಗೆಗೆ ಸೊಪ್ಪಾಕದೆ
ಬರೆದ ಸಂವಿಧಾನ ಕರುಳು ನೋಯುತ್ತಿದೆ
ಸೂಜಿಗೆ ದಾರ ಸೇರಿಸಿ ನಾಟಾಕುವ
ಕೈಗಳಿಗೆ ಹೆದರಿ
ನಿನ್ನುಸಿರನು ಸೇರಿಸಿ ಬರೆದ
ಬೇರು ಸಂವಿಧಾನದಲಿ
ನಿನ್ನ ನಿನ್ನವರ ಕನಸುಗಳು
ಆಯಾಸವಿಲ್ಲದೆ ಆಡುತ್ತಿದ್ದವು
ಆದರೇ
ಕತ್ತರಿ ತೋರಿಸುತ್ತಲೇ ಇವೆ
ಹಿಡಿಗಾತ್ರದ ಮನಸುಗಳು
ಬರೆದ ಸಂವಿಧಾನದ ಪುಟಗಳ ಚೂರು ಮಾಡಲು
ಬೆವರಲೇ ಬೆಂದ
ನಿನ್ನ ಜನರ ಆಶಾಗೋಪುರಕೆ
ನೀನೆ ಬೇಲುದಾರ
ಸುಡುವ ಮನಸುಗಳ ದಾರಿಯ ಮೇಲೆ
ನಿನ್ನೆಜ್ಜೆಗಳ ಸಾಂತ್ವಾನದ ಉಸಿರಾಟ
ಬೆವರ ಬಿಕ್ಕಳಿಕೆಯಲಿ
ನಿನ್ನುಟ್ಟೆ ಜೀವ ಜಲ
ನೀನಿಲ್ಲದೇ ಹೋಗಿದ್ದರೆ
ಮೌಢ್ಯತೆಯ ಬೆಂಕಿ ಉರಿದು
ಎಷ್ಟೊಂದು ಮುಗ್ಧ ಮನಸುಗಳ
ಆಹುತಿಗೆ ಬಲಿಯಾಗುತ್ತಿದ್ದವೋ
ಆದರೇ
ನಿನ್ನ ಹೆಜ್ಜೆಗಳ ಮೇಲೆ ನಡೆದ
ಜಾತಿ ಸುಟ್ಟ ಮನಸುಳಿಗೂ
ಬೆನ್ನು ನೋವು
ನೀನಿಲ್ಲದ ಈ ಹೊತ್ತು
********