ಕಾವ್ಯ ಸಂಗಾತಿ
ಗಜಲ್
ಹಮೀದಾ ಬೇಗಂ ದೇಸಾಯಿ
ಚಂದ್ರನ ಕಿರಣಗಳು ಮೆಲ್ಲಗೆ ಧರೆಗಿಳಿಯುತ ನನ್ನ ನೋಡಿ ನಗುತಿರುವುದು ಸಾಕಿ
ಜೇನುಗೂಡಿನೊಳಗಿನ ಮಧುವು ಹೊರಗ ಇಣುಕಿ ಅಣಕಿಸುತಿರುವುದು ಸಾಕಿ
ಬೆಳದಿಂಗಳ ಬಿಳಿಧಾರೆಯು ಇಳೆಗಿಳಿದಿದೆ ನೊರೆಹಾಲಿನಂತಲ್ಲವೇ
ತರು ಮರದ ಹೂ ಮೊಗ್ಗು ಚಂದ್ರಿಕೆಯಲಿ ಮಿಂದು ಅಮಲೇರಿರುವುದು ಸಾಕಿ
ಶಶಿಬಿಂಬದ ಬೆಣ್ಣೆ ಮುದ್ದೆ ತೇಲುತಿದೆ ಚಂದದಿ ನೀರ ಕೊಳದಲಿ
ನಭದಿ ತಾರೆಗಳು ಹಂದರ ಹಾಕಿ ಮಿನುಗುತಿರುವುದು ಸಾಕಿ
ಶುಭ್ರಶ್ವೇತ ದುಕೂಲ ಧರಿಸಿ ನಾಚುತಿಹಳು ವಸುಧೆ ಮೆಲ್ಲಗೆ
ಮೌನರಾಗದಿ ಗಗನ ಪ್ರಣಯಗೀತೆ ಲಯದಲಿ ಗುನುಗುನಿಸಿರುವುದು ಸಾಕಿ
ಜಗದ ನಿದ್ರೆಯೊಳಗಿಂದು ರಂಗಿನ ಮಧುರ ಕನಸುಗಳು ತುಂಬಿವೆ
ಬೇಗಂಳ ಹೃದಯವು ನಿನ್ನ ವಿರಹದುರಿಯಲಿ ಬೆಂದು ಹೋಗಿರುವುದು ಸಾಕಿ.
ಹಮೀದಾ ಬೇಗಂ ದೇಸಾಯಿ