ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬಾಬಾಸಾಹೇಬ ತಾವು ದೇವರಾದರೆ!

इस स्कूल से पढ़ाई शुरु की थी डॉ ...

ಡಿ‌. ಎಮ್.ನದಾಫ್.

ಗುಲಾಮಗಿರಿಯನ್ನು ಬುಡ ಸಮೇತ ಕಿತ್ತು
ಅಜ್ಞಾನ, ಅವಮಾನಗಳನ್ನು ಧೈರ್ಯದಿಂದ ಒದ್ದು
ದಿಕ್ಕಿಲ್ಲದವರಿಗೆ ಧವಳ ಕೀರ್ತಿ ತಂದುಕೊಟ್ಟು
ಮಾನವತೆಯನ್ನು ಮರಳಿ ಸ್ಥಾಪಿಸಿದ
ಅಂಬೇಡ್ಕರ್ ದೇವರಾದಾಗ ನನ್ನೆದೆ ಝಲ್ಲೆನ್ನುತ್ತದೆ.

ಯಜ್ಞ-ಯಾಗ ಪ್ರಯಾಗಗಳನ್ನೆಲ್ಲ
ಪ್ರಜ್ಞೆ, ಕರುಣೆ ಶೀಲದಲ್ಲಿ ಕಂಡವನೇ
ಸ್ವರ್ಗ,ಮುಕ್ತಿ,ಬಂಧನಗಳನ್ನೆಲ್ಲ
ಜ್ಞಾನ,ಸಮಾನತೆ,ಸೇವೆಯಲ್ಲಿ ಮಿಂದವನೇ
ಮತ್ತೆ ನೀ ದೇವರಾದಾಗ
ಬಾಯಿಗೆ ಉಗುಳುಬಟ್ಟಲು,ಬಾರಿಗೆ ನೆನಪಾಗುತ್ತವೆ.

ಶಾಸ್ತ್ರ, ಪುರಾಣ ಆಗಮಗಳಿಗೆ ಬೀಗ ಹಾಕಿ
ಶತಶತಮಾನಗಳ “ಕರ್ಮಫಲ”ಗಳ ನೊಗ ಕಿತ್ತು ಹಾಕಿ
ಪಟ್ಟ ಭದ್ರರಿಗೆ ಬೆಟ್ಟದಂಥ ಸವಾಲಾದವನೇ
ನೀ ದೇವರಾಗಬೇಡ
ನೀ ದೇವರಾದರೆ ಮತ್ತೆ
ಕಿವಿಯಲ್ಲಿ ಕಾದ ಸೀಸ ಹೊಯ್ದಂತೆ
ನಾಲಿಗೆ ಸೀಳಿ ಬಗೆದಂತೆ ಕನಸು ಬೀಳುತ್ತದೆ.

ಅದಕ್ಕಾಗಿ ಅಂಬೇಡ್ಕರ್
ದೇವರಾಗಬೇಡ,ದೊರೆಯಾಗಬೇಡ,
ಗುರುವಾಗು,ಮಾರ್ಗದರ್ಶಿಯಾಗು,ನಮಗೆ
ತತ್ವ ಜ್ಞಾನಿಯಾಗು ಅಂಬೇಡ್ಕರ್

ನೀ ದೇವರಾದಾಗ ನನ್ನೆದೆ ಝಲ್ಲೆನ್ನುತ್ತದೆ.

********

About The Author

2 thoughts on “ಕಾವ್ಯಯಾನ”

  1. VENKATESH MANU

    ಡಾ. ಅಂಬೇಡ್ಕರ್ ಅವರನ್ನು ದೇವಮಾನವನನ್ನಾಗಿ ಮಾಡುವ ಶೂದ್ರರು (ಮೇಲ್ಜಾತಿಯೊಂದನ್ನು ಹೊರತು ಪಡಿಸಿ ಎಲ್ಲರೂ ಶೂದ್ರರೇ) ಆತ್ಮಾವಲೋಕನ ಮಾಡಿಕೊಳ್ಳಲು ಈಗಲೂ ಕಾಲ ಮಿಂಚಿಲ್ಲ. ಆತನ ಸಂಘಟನೆ-ಹೋರಾಟ-ಶಿಕ್ಷಣ-ಸಿದ್ಧಾಂತ ಮುಂತಾದವುಗಳ ಬಗ್ಗೆ ಗಂಭೀರವಾಗಿ ಅಧ್ಯಯನ ಮಾಡುತ್ತಲೇ ಈ ಎಲ್ಲವನ್ನೂ ಬದುಕಿನ ಭಾಗವಾಗಿಸಿಕೊಂಡರೆ ಮಾತ್ರ ಡಾ. ಅಂಬೇಡ್ಕರರ ಚಿಂತನೆಗಳಿಗೆ ಮತ್ತಷ್ಟು ಜೀವ ತುಂಬಿದಂತೆ. ತಪ್ಪಿದರೆ, ಚಿಂತನೆಗಳು ಸತ್ತಂತೆ. ಆಗ ಅಂಬೇಡ್ಕರರ ಭಾವಚಿತ್ರವು ಗೋಡೆಗೆ ತೂಗು ಹಾಕಲು ಮಾತ್ರ ಯೋಗ್ಯವಾಗುತ್ತದೆ. ಇದೇ ರೀತಿ ನಾವು ಎಷ್ಟೋ ದೇವರ ಭಾವಚಿತ್ರವನ್ನು ಗೋಡೆಗೆ ಹಾಕಿ ಪೂಜಿಸಿದ್ದೇವಲ್ಲವೆ? ಇದರಿಂದ ದಲಿತರ ಅಸ್ಪೃಶ್ಯತೆ ದೂರವಾಗಿದೆಯೇ?, ಅಂಬೇಡ್ಕರ್‍ ಹೋರಾಟದಿಂದ ಸ್ವಲ್ಪರ ಮಟ್ಟಿಗೆ ರಾಜಕೀಯ ಹಾಗೂ ಆರ್ಥಿಕ ಸ್ವಾತಂತ್ಯ್ರ ದೊರಕಿದಂತೆ ಕಂಡರೂ ಸಾಮಾಜಿಕವಾಗಿ ಶೂದ್ರರು ಅಸ್ಪೃಶ್ಯರಾಗೇ ಉಳಿದಿದ್ದಾರೆ ಎನ್ನುವುದನ್ನು ಗಮನಿಸಬೇಕು. ಈ ವ್ಯತ್ಯಾಸವನ್ನು ತಿಳಿಯದೇ ಹೋದರೆ ಆತನ ಜಯಂತಿಗೆ, ಪರಿನಿರ್ವಾಣಕ್ಕೆ ಅರ್ಥವೇ ಇಲ್ಲ. ಅಂಬೇಡ್ಕರ್ ಅವರನ್ನು ದೇವರಾಗಿಸುವ ಮನುಷ್ಯರು ಆತನ ಚಿಂತನೆಗಳ ಸಮಾಧಿ ಮಾಡುತ್ತಲೇ ಇರುತ್ತಾರೆ. ಈ ಹಿನ್ನೆಲೆಯಲ್ಲಿ ಕವಿ ಡಿ.ಎಂ. ನದಾಫ್ ಅವರಷ್ಟೇ ಅಲ್ಲ; ಮಾನವೀಯ ಕಳಕಳಿಯ ಯಾರಿಗೇ ಆಗಲಿ ಎದೆ ಝಲ್ಲೆನ್ನುತ್ತದೆ. ಅಂಬೇಡ್ಕರ ಅವರನ್ನು ದೇವರಾಗಿಸಿದರೆ ದೇವರ ಪೂಜಾರಿಯಂತಹ ಮೂಲಭೂತವಾದಿಗಳಿಗೇ ಲಾಭ. ಮನುಷ್ಯ ರೂಪವಿದ್ದರೂ ಮನುಷ್ಯರೆಂದು ಕರೆಯಿಸಿಕೊಳ್ಳಲಾರದ ಅಂದಿನ ದಿನಮಾನಗಳಿಗೆ ಮತ್ತೆ ನಾವು ನಮ್ಮಷ್ಟಕ್ಕೆ ನಾವೇ ದೂಡಿಕೊಳ್ಳಬಾರದು. ಇದು ಅಂಬೇಡ್ಕರ್‍ ಅವರ ಆಶಯವೂ ಆಗಿತ್ತು. ಕವಿಯು ಅಂಬೇಡ್ಕರ್‍ ಅವರನ್ನು ದೇವರಾಗದೇ ಇರಲು ಕೇಳಿಕೊಳ್ಳುತ್ತಿದ್ದಾರೆ. ಆದರ ಬದಲು ನಾವು ಅಂಬೇಡ್ಕರ್‍ ಅವರನ್ನು ದೇವರಾಗಿಸುವುದು ಬೇಡವೇ ಬೇಡ.

    1. ಡಿ.ಎಮ್.ನದಾಫ್

      ಕವಿಯ ಆಶಯವರಿತು ಸಮಂಜಸ ವಿಮರ್ಶಾಟಿಪ್ಪಣಿ ಬರೆದ ಮಾನು ವೆಂಕಟೇಶ್ ಅವರಿಗೆ ಕೃತಜ್ಞತೆಗಳು
      ಡಿ. ಎಮ್. ನದಾಫ್.

Leave a Reply

You cannot copy content of this page

Scroll to Top