ಹಮೀದಾ ಬೇಗಂ ದೇಸಾಯಿ ಕವಿತೆ-ಹೇಳುವೆಯಾ…?

ಕಾವ್ಯ ಸಂಗಾತಿ

ಹೇಳುವೆಯಾ…?

ಹಮೀದಾ ಬೇಗಂ ದೇಸಾಯಿ

ಹೇಳಲಾರದ ಮಾತುಗಳು
ತಾಳಲಾರದ ವೇದನೆಗಳು
ಒಳಗೊಳಗೇ ಕುದಿದು
ಬೆಂದು ಉಸಿರುಗಟ್ಟುತಿವೆ…

ಬಯಕೆಯ ಚೆಲು ಮೊಗ್ಗುಗಳು
ಚಿಗುರಿದಾಸೆಯ ಕನಸುಗಳು
ಸ್ವಚ್ಛಂದದ ನಗುಗಳು
ಮನದ ಮೂಟೆಯಲಿ ಬಿಗಿದು ಕಟ್ಟಿವೆ…

ಬದಲಿಸುವ ಮುಖವಾಡಗಳು
ಗಿರಕಿ ಹೊಡೆಯುವ ಹದ್ದುಗಳು
ಎರಗಲು ಹೂಡುವ ಹುನ್ನಾರಗಳು
ಜೀವಂತ ದಫನ್ ಗಾಗಿ ಗೋರಿಗಳು ಕಾಯುತಿವೆ…

ಕತ್ತಲೆಯ ಬೆತ್ತಲೆ ಬೈರಾಗಿಗಳು
ಹಗಲಿನಲಿ ಕಣ್ತೆರೆಯದ ವಿರಕ್ತರು
ಕಪಟ ಗೋಮುಖ ವ್ಯಾಘ್ರಗಳು
ಕಂದಮ್ಮಗಳ ಮುಕ್ಕಿ ತಿನ್ನಲು ಹೊಂಚು ಹಾಕಿವೆ…

ಓ ದೇವರೇ ಎಲ್ಲಿರುವೆ ನೀನು
ಕಂಡೂ ಕಾಣದಂತಿಹ ಜಾಣಕುರುಡ…
ನೀನೇ ರೂಪಿಸಿದ ಹೆಣ್ಣಿಗೇಕೆ ಈ ಸ್ಥಿತಿಯು..
ಇನ್ನೂ ಯಾವ ಅವತಾರ ಎತ್ತಿ ಬರಬೇಕಿದೆ ನಿನಗೆ…?
ಹೇಳುವೆಯಾ…????


Leave a Reply

Back To Top