ಅಂಕಣ ಸಂಗಾತಿ

ಹನಿಬಿಂದು

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ

ನಾನು ಮತ್ತು ಸೊಳ್ಳೆ

  ನಾನೊಂದು ಹೊಸ ಬಾಡಿಗೆ ಮನೆಗೆ ಬಂದೆ. ಹೊಸ ಮನೆಯಲ್ಲಿ ನನಗೆ ಗೊತ್ತೇ ಇರಲಿಲ್ಲ ಇಷ್ಟೊಂದು ಸೊಳ್ಳೆಗಳ ಕಾಟವಿದೆ ಎಂದು! ಬಂದ ದಿನವೇ ರಾಕ್ಷಸರು ಮಾನವರ ಮೇಲೆ ದಾಳಿ ಮಾಡಿದ ಹಾಗೆ ಸೊಳ್ಳೆಗಳು ನಮ್ಮ ಮೇಲೆ ಲಗ್ಗೆ ಇಟ್ಟವು! ಇದರ ಬಗ್ಗೆ ಏನೆಂದು ಅರುವಿರದ ನಾನು ಸೊಳ್ಳೆಗಳಿಂದ ಕಚ್ಚಿಸಿಕೊಂಡೆ ಬೆಳಿಗ್ಗೆಯವರೆಗೆ ಸಮಯ ಕಳೆಯಬೇಕಾಯ್ತು.  ಆ ರಾತ್ರಿಯನ್ನು ನಿದ್ದೆ ಇಲ್ಲದೆ ಕಳೆದ ಪರಿಣಾಮವಾಗಿ ಮರುದಿನವೇ ನಾನು ಸೊಳ್ಳೆಯನ್ನು ಸಂಪೂರ್ಣವಾಗಿ ನಾಶ ಮಾಡುವ ಕಾಯಕದತ್ತ ತೊಡಗಿದೆ. ಮೊದಲನೆಯ ವಿಧಾನ ನಾನು ಮಾಡಿದ್ದು ಎಲ್ಲರೂ ಮಾಡುವ ಹಾಗೆ ಒಂದು ಅಂಗಡಿಗೆ ಹೋಗಿ ಸೊಳ್ಳೆಯ ಅಗರಬತ್ತಿಯನ್ನು ತೆಗೆದುಕೊಂಡು ಬಂದೆ. ದೇವರಿಗೆ ಅಗರ ಬತ್ತಿ ಇಟ್ಟು ಒಲಿಸಿಕೊಳ್ಳುವ ಹಾಗೆ ಸೊಳ್ಳೆಗೆ ಅಗರಬತ್ತಿ ಓಡಿಸುವ ಕಲೆಯಲ್ಲಿ ಪ್ರಾಕ್ಟೀಸ್ ಮಾಡಲಾರಂಬಿಸಿದೆ. ಆ ಸೊಳ್ಳೆಗಳ ಸಂಸಾರ ಮತ್ತು ಸಂತಾನ ನನಗಿಂತಲೂ ಹುಷಾರು. ಸೊಳ್ಳೆ ಬರುತ್ತಿರುವಾಗ ಬಿಟ್ಟು ಬೇರೆ ಸಮಯದಲ್ಲಿ ನನಗೆ ಬರಲು ಆರಂಭಿಸಿದವು. ರಾತ್ರಿ ಬೆಳಿಗ್ಗೆ ಮಧ್ಯಾಹ್ನ ಯಾವ ಸಮಯವೆಂದರೆ ಆ ಸಮಯ ನನ್ನ ರೂಮಿನ ಒಳಗೆ ಲಗ್ಗೆ ಇಟ್ಟು ನನಗಾಗಿ ಕಾಯುತ್ತಾ ಕುಳಿತಿದ್ದವು.
          ನನ್ನ ಈ ಸೊಳ್ಳೆ ಬತ್ತಿಯ ಪ್ಲಾನ್ ಹಿಟ್ ಆಗಲಿಲ್ಲ. ಅದಕ್ಕಾಗಿ ನಾನು ಸೊಳ್ಳೆಗಾಗಿ ಇರುವ ಹಿಟ್ಟನ್ನು ಖರೀದಿಸಿದೆ. ಅದನ್ನು ಕೋಣೆಯಲ್ಲಿ ಸಿಂಪಡಿಸಿ ಬಿಟ್ಟರೆ ಮತ್ತೆ ಸೊಳ್ಳೆ ಬರುವುದಿಲ್ಲ ಎಂದು ಜಾಹಿರಾತಿನಲ್ಲಿ ತೋರಿಸುತ್ತಿದ್ದರು. ಆಲ್ಲಿಗೆ ನೂರಾರು ರೂಪಾಯಿಗಳು ಸೊಳ್ಳೆಗಾಗಿ ಈ ವರ್ಷದ ನನ್ನ ಬಜೆಟ್ ನಲ್ಲಿ ಸೇರಿತ್ತು ಮತ್ತು ಖಾಲಿಯೂ ಆಗಿತ್ತು ಎನ್ನಿ! ಹಿಟ್ ಸೊಳ್ಳೆಯನ್ನು ಕೊಲ್ಲುವ ಬದಲು ನಮ್ಮ ಮಕ್ಕಳನ್ನೇ ಕೊಲ್ಲಲು ಸಂಚು ಮಾಡುತ್ತಿತ್ತು. ಅದರ ವಾಸನೆಗೆ ತಿಂದದ್ದೆಲ್ಲ ಆಚೆ ಬರುತ್ತಿತ್ತು. ಇದನ್ನು ಸಿಂಪಡಿಸಿ ಇನ್ನೇನು ಸೈಡ್ ಎಫೆಕ್ಟ್ ಅನಾಹುತ ಆಗುತ್ತೋ ಏನೋ ಅಂತ ಅದರ ಬಾಟಲಿಯನ್ನು ತೆಗೆದು ಕಸದ ಲಾರಿಗೆ ಬಿಸಾಡಿ ಆಯಿತು. ಆದರೆ ಸೊಳ್ಳೆ ಹೋಗಲೇ ಇಲ್ಲ. ಕತ್ತಲಾದ ಕೂಡಲೇ ಗುoಯ್ ಗುಂಯ್ ರಾಗ ಹಾಡಲು ನನ್ನ ಕಿವಿಯ ಬಳಿಯೇ ಬರುತ್ತಿತ್ತು. ಅದೇಕೋ ಸೊಳ್ಳೆಗೆ ನನ್ನ  ಓ ಪಾಸಿಟಿವ್ ಸಿಹಿ ರಕ್ತ ಅನ್ನಿಸಿರಬೇಕು. ಅದಕ್ಕೆ ಅವು ನನ್ನ ಬಿಟ್ಟು ಹೋಗಲಿಲ್ಲ,

         ಮತ್ತೆ ನನ್ನ ಸೊಳ್ಳೆ ಹಂಟ್ ಕೆಲಸ ಮುಂದುವರಿದಿತ್ತು. ನಾನು ಸೊಳ್ಳೆಗೆ ಊದುಬತ್ತಿ ತಂದೆ. ದೇವರಿಗೆ ಎಂದೂ ಊದುಬತ್ತಿ ಹಚ್ಚಿಯೇ ಇಡದ ನಾನು ಮೊದಲ ಬಾರಿಗೆ ಅಂಗಡಿಯಲ್ಲಿ ಸೊಳ್ಳಿಗಾಗಿ ಅಗರಬತ್ತಿ ಖರೀದಿಸಲು ಹೋಗಿದ್ದು ಕಂಡು ನನಗೆ ನನ್ನ ಮೇಲೆಯೇ ಒಳಗೊಳಗೇ ನಗು ಬರುತ್ತಿತ್ತು! ಅಂತೂ ಉದ್ದದ ಅಗರಬತ್ತಿ ಮನೆಯೊಳಗೆ ಬಂತು. ಅದನ್ನು ಹಚ್ಚಿಡಲು ಒಂದು ಸಣ್ಣ ಪ್ಲೇಟ್ . ಅದನ್ನು ಹಚ್ಚಲು ಒಂದು ಲೈಟರ್ ಕೂಡ ಕೊಂಡು ತಂದಾಯ್ತು. ಆ ಮೇಲೆ ಅದರ  ಗಾಳಿಗೆ ಕೆಮ್ಮು  ಬಂದು, ವಾಂತಿ ಬಂದ ಹಾಗೆ ಆಗಿ,  ಸೊಳ್ಳೆ ಹೋಯ್ತಾ ಇಲ್ವಾ ಗೊತ್ತಿಲ್ಲ, ನಾನೇ ಮನೆಯಿಂದ ಹೊರಗೆ ಓಡಿ ಬಂದೆ.


ಇದು ಆಗಲಿಕ್ಕಿಲ್ಲ ಎಂದು ಹೇಳಿ ನಾನು ಮತ್ತೊಂದು ವಿಧಾನಕ್ಕೆ ಕೈ ಹಾಕಿದೆ. ಅದು ಆನ್ ಲೈನಲ್ಲಿ ಬಂದ ಹೊಸದಾದ ಒಂದು ಮಶೀನ್ ಬಂದಿತ್ತು. ಅದು ಕ್ರೀಂ ಅಂತ ಸದ್ದು ಮಾಡುತ್ತಿತ್ತು. ಉತ್ಪಾದಕರ ಜಾಹೀರಾತಿನ ಪ್ರಕಾರ ಅದು ಹೊರಡಿಸುವ ಶಬ್ದ ತರಂಗ ಸೊಳ್ಳೆ ನಮ್ಮ ಕಿವಿಯಲ್ಲಿ ಗುಂಯ್ ಗುಟ್ಟುವ ಶಬ್ದಕ್ಕಿಂತ ಹೆಚ್ಚಾಗಿದ್ದು ಅದು ಸೊಳ್ಳೆಗೆ ಕಿರಿಕಿರಿ ಅನ್ನಿಸಿ ಅದು ಬರುವುದೇ ಇಲ್ಲ. ಅವರು ಹೇಳುವ ಪ್ರಕಾರ ಸೊಳ್ಳೆ ಮಾತ್ರ ಅಲ್ಲ, ಎಲ್ಲಾ ಕೀಟಗಳೂ ಬರುವುದೇ ಇಲ್ಲ. ಆಯ್ತು ಅದನ್ನು ತಂದು ಸ್ವಿಚ್ ಹಾಕಿ ಬಿಟ್ಟೆ. ಅದರ ಕ್ರೀಂ ಶಬ್ದ ಸೊಳ್ಳೆಗೆ ಇಷ್ಟ ಆಯ್ತೋ ಇಲ್ಲವೋ, ನನಗೆ ತುಂಬಾ ಕಿರಿಕಿರಿ ಅನ್ನಿಸತೊಡಗಿತು. ನಾನು ಅದನ್ನು ಹಾಕಿದ ಕೋಣೆಗೆ ಹೋಗಲು ತುಂಬಾ ಹೆದರಿದ ಹಾಗೆ ಕಾಣುತ್ತಿದ್ದೆ. ಅದನ್ನು ತೆಗೆಯಲು ಹೋದ ನನ್ನ ಮಗಳು ಅದನ್ನು ಕೆಳಗೆ ಬೀಳಿಸಿ,ಅದು ಎರಡು ತುಂಡಾಗಿ ಶಬ್ದ ಹೊರಡಿಸುವುದನ್ನೆ ಮರೆತಿತ್ತು!

ಹೀಗೆ ನನ್ನ ಮತ್ತು ಸೊಳ್ಳೆಯ ಅನುಬಂಧ ಅನ್ಯೋನ್ಯವಾಗಿ ಅದು ನನ್ನ ಬಿಡದೆ, ನಾನು ಅದರ ಜೊತೆ ಬಾಳಲು ಆಗದೆ, ಡೈವೋರ್ಸ್ ಸಿಗದೆ, ಡೈವೋರ್ಸ್ ಗೆ ಅಪ್ಲೈ ಮಾಡಿದ ಜೋಡಿಯ ಹಾಗೆ ಆಗಿತ್ತು. ಕೊನೆಗೆ ಸಿಕ್ಕಿತು ನೋಡಿ ಬ್ಯಾಟು! ಭರ್ಜರಿ ಬ್ಯಾಟಿಂಗ್ ಮಾಡಿದೆ. ಆದರೂ ಸಂತಾನಹರಣ ಚಿಕಿತ್ಸೆ ಅದಕ್ಕೆ ಇಲ್ಲ ತಾನೆ? ಮತ್ತೆ ಮತ್ತೆ ಹುಟ್ಟಿ ಬರುತ್ತಿತ್ತು! ಇನ್ನೂ ನಾನು ಸಫಲತೆ ಪಡೆಯದ ಕಾರಣ ನಾನು ಮತ್ತೊಂದು ಹೆಜ್ಜೆ ಮುಂದೆ ಬಂದು ನಾನು ನನ್ನ ಇಡೀ ಮನೆಯ ಕಿಟಕಿಗೆ ತಂತಿಯ ಪರದೆಗಳನ್ನು ಹಾಕಿಸಿ, ಕೊನೆಗೆ ಮಲಗುವ ಮಂಚದ ಮೇಲೆ ಕೂಡಾ ನೆಟ್ ಹಾಕಿಸಿ ಬಿಟ್ಟೆ. ಹೆಚ್ಚು ಕಡಿಮೆ ಆರು ಸಾವಿರ ಖರ್ಚು ಮಾಡಿದೆ. ಸೊಳ್ಳೆ ಸಣ್ಣದು. ಅದರ ಉಪಟಳಕ್ಕೆ ನಾನು ಮಾಡಿದ ಖರ್ಚು ದೊಡ್ಡದೇ ಅಲ್ಲವೇ? ಅಂತೂ ಇಂತೂ ಸೊಳ್ಳೆಯಿಂದ ಪಾರಾದೆ. ನೀವೇನಂತೀರಿ?

————————————————

ಹನಿಬಿಂದು

ಹೆಸರು- ಪ್ರೇಮಾ ಆರ್ ಶೆಟ್ಟಿ ಕಾವ್ಯನಾಮ- ಹನಿ ಬಿಂದುನೂರಕ್ಕೂ ಅಧಿಕ ರಾಷ್ಟ್ರ, ರಾಜ್ಯ, ಅಂತರರಾಜ್ಯ, ಜಿಲ್ಲಾ ಮಟ್ಟದ ಕವಿಗೋಷ್ಠಿಗಳಲ್ಲಿ ಅಧ್ಯಕ್ಷರಾಗಿ, ಕವಿಯಾಗಿ, ಭಾಗವಹಿಸಿದ ಅನುಭವ.ವಿದ್ಯಾರ್ಹತೆ – ಕನ್ನಡ ಮತ್ತು ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಬಿಎಡ್.ವೃತ್ತಿ – ಪದವೀಧರ ಆಂಗ್ಲ ಭಾಷಾ ಶಿಕ್ಷಕರು ಪ್ರವೃತ್ತಿ – ಫ್ಯಾಷನ್ ಡಿಸೈನಿಂಗ್, ಲೇಖಕಿ, ಕವಯತ್ರಿ, (ಕನ್ನಡ, ತುಳು, ಇಂಗ್ಲಿಷ್ ವಿಷಯಗಳಲ್ಲಿ) ಅಂಕಣಗಾರ್ತಿ (ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ) , ಚಿಂತಕಿ,ಸ್ಪೋಕನ್ ಇಂಗ್ಲಿಷ್ ಬೋಧಕಿ. ಮೋಟಿವೇಟರ್,, ಲಿಟರೇಚರ್ ಆಫ್ ಹನಿಬಿಂದು ಇದು ಇವರ ಬ್ಲಾಗ್. , ತುಳು ಕಲ್ಪುಗ ಚಾನೆಲ್ ನ ಫೇಸ್ಬುಕ್, ಇನ್ಸ್ಟಾ ಗ್ರಾಂ, ಯೂ ಟ್ಯೂಬ್ ನಿರ್ವಾಹಕಿ. ಕಲಿಕಾರ್ಥಿ, ವಿದ್ಯಾರ್ಥಿ ಪ್ರೇರಕಿ.ಪ್ರಕಟಿತ ಕೃತಿ – ಭಾವ ಜೀವದ ಯಾನ (ಕವನ ಸಂಕಲನ)ಪ್ರತಿಲಿಪಿಯಲ್ಲಿ ಬರಹಗಾರ್ತಿ – ಮೂವತ್ತಾರು ಸಾವಿರಕ್ಕೂ ಹೆಚ್ಚು ಜನರಿಂದ ಓದಲ್ಪಟ್ಟಿರುವರು.

Leave a Reply

Back To Top