ಕಾವ್ಯ ಸಂಗಾತಿ
ಮಾಲಾ ಚೆಲುವನಹಳ್ಳಿ
ಗಜಲ್
ಸೋಲಲು ಬಿಡದೆ ಒಲವ ಆಸರೆ ನೀಡುತ ನಡೆದೆಯಲ್ಲ ನೀನು
ಗೆಲುವಿನ ಹಾದಿಗೆ ಕೈಮರವಾಗಿ
ದಿಕ್ಕೆಡದಂತೆ ತಡೆದೆಯಲ್ಲ ನೀನು
ಡೋಲಾಯಮಾನ ಸ್ಥಿತಿ ತಲುಪಿದ್ದ
ಬಾಳ ನಾವೆಗೆ ಸ್ಥಿರತೆ ತಂದೆ
ಬೋಳಾದ ಮನದ ಮಾಮರದಿ ಕೋಗಿಲೆಯಾಗಿ
ಗಾನ ಪಾಡಿದೆಯಲ್ಲ ನೀನು
ಎದೆಕೊಳವ ಕಲಕಿ ರಾಡಿಗೊಳಿಸಿತ್ತು
ದುರುಳರ ಸಂಘದ ಬಾಳಿದು
ವಿಧಿಯೂ ಬೆರಗಾಗುವಂತೆ ಶಿಲೆಯನ್ನು
ಮೂರ್ತಿಯಾಗಿ ಕಡೆದೆಯಲ್ಲ ನೀನು
ಎತ್ತ ಹೊರಳಿದರೂ ಸುತ್ತ ವಿಷಜಂತುಗಳದೇ
ದರ್ಬಾರು ಕಂಡು ನಲುಗಿದ್ದೆ
ಕುತ್ತು ಎರಗುವ ಮುನ್ನ ರಕ್ಷಣೆಗೈದು
ಹೃದಯದಿ ಸ್ಥಾನ ಪಡೆದೆಯಲ್ಲ ನೀನು
ಕಲ್ಮಶವಿರದ ಭಾವನೆಗಳಿಗೆ ಪ್ರತಿಸ್ಪಂದನೆಯಿರದೆ
ಸೋಗು ಹಾಕಿದವರನೇ ಕಂಡಿದ್ದೆ
ಶಾಲ್ಮಲೆಯ ಅಮೃತ ಧಾರೆಯಿದೆ ಮಾಲಾ
ಎಂದು ನುಡಿದೆಯಲ್ಲ ನೀನು