ಅಂಕಣ ಸಂಗಾತಿ

ಒಲವ ಧಾರೆ.

ರಮೇಶ ಸಿ ಬನ್ನಿಕೊಪ್ಪ

ಒಲಿಯುವ ಕಾತುರವೇ ಒಲವ ಧಾರೆ.

ಹಣೆಗೆ ಕೈಕೊಟ್ಟು , ಬಾನಿಗೆ ಮುಖ ಮಾಡಿಕೊಂಡು ಅಸೆಗಣ್ಣಿನಿಂದ ಅವನನ್ನೇ ಕಾಯುವ ಹಣ್ಣು ಹಣ್ಣಾದ ವೃದ್ಧರೊಬ್ಬರ ಮನದ ತಳಮಳ ಹೇಳ ತೀರದು….!

ಅವನ ಆಗಮನದಿಂದ ಪ್ರಪುಲ್ ವಾದ ಮನವೊಂದು ಕುಣಿ ಕುಣಿದು ನಲಿಯುತಿದೆ…ಬಾನೆತ್ತರಕ್ಕೆ…!!

ಹೌದು.. ಭೂಮಿ ಬಾಯ್ದೆರೆದು ನೋವಿನಿಂದ ಅಳುವ ಯಾತನೆಯಿಂದಾಗಿ ದನ ಕರು ಪ್ರಾಣಿ ಪಕ್ಷಿಗಳ ಕರುಳ ಹಿಂಡುವ ಬದುಕು. ಬೇಸಿಗೆ ಮುಗಿದು, ತುಂಬು ಮಳೆಗಾಲ ಬಂದರೂ ಹನಿ ನೀರಿಲ್ಲ..!! ಹನಿ ನೀರಿಗಾಗಿ ಪರಿತಪಿಸುತ್ತಿರುವ ಜೀವಿಗಳ ಆಕ್ರಂದನ.

ಈ ನೆಲದ ಬೆವರಿನ ಒಡೆಯನಿಗೆ ಅಷ್ಟೇ ಅಲ್ಲ ಪ್ರತಿಯೊಬ್ಬರಿಗೂ ಬೇಕೇ ಬೇಕು ಮಳೆ. ಮಳೆ ಇದ್ದರೆ ಇಳೆ. ಇಳೆಯು ನಗು ನಗುತಾ ಹಚ್ಚಹಸಿರಿನಿಂದ ಕಂಗೊಳಿಸಿದರೆ ಮಾತ್ರ ಜಗತ್ತು ನಗಬಲ್ಲದು.

ಮಳೆಯಿರದಿದ್ದರೆ…ಎಲ್ಲವೂ ಶೂನ್ಯ. ಮದುವೆಯಾದ ಹೊಸ ಹೆಣ್ಣು ಮಗಳು, ದೂರದಲ್ಲಿ ಕೆಲಸಕ್ಕೆ ಹೋಗಿದ್ದ ಗಂಡನ ಬರುವಿಕೆಗಾಗಿ ಕಾಯುವ ಕಾತುರದ ಮನಸ್ಸನಂತೆ…, ಗಂಡ ಬಾರದೆ ಹೋದರೆ ಆಗುವ ಶೂನ್ಯ ಮನಸ್ಸು, ತಳಮಳ, ಸಂಕಟ, ನೋವು ಅದು ಯಾರಿಗೂ ಅರ್ಥವಾಗುವುದಿಲ್ಲ…! ಅದು ಅವಳಿಗೆ ಮಾತ್ರ ಅರ್ಥವಾಗಬೇಕು…!!

ಹಿಂಡನಗಲಿದ ಗೋವು ತನ್ನ ಕರುವನ್ನು ಬಿಟ್ಟು ಬಂದಾಗ, ಕರುವಿನ ನೆನಪಾಗಿ ಹೂಂಕರಿಸುತ್ತಾ, ಚಂಗನೇ ಜಿಗಿಯುತ್ತ, ಓಡೋಡಿ ಬರುವ ಅವಸರದ ಹಸುವಿನ ಮನದಂತೆ..! ಹಸುವಿನ ಕರು ಕೂಡ ಅಷ್ಟೇ ತಾಯಿಹಸುವಿನ ನೆನಪಾಗಿ ಕಣ್ಣೀರು ಇಡುತ್ತಾ, ಕಾಯುವ ನೋವು.. ಆ ಕರುವಿಗೆ ಮಾತ್ರ ಗೊತ್ತು..!!

ಆಷಾಢ ಕಳೆದು ಶ್ರಾವಣ ಬಂತು. ನಾಡಿಗೆಲ್ಲ ದೊಡ್ಡ ಹಬ್ಬ ಪಂಚಮಿ. ಮನೆಯಲ್ಲಿ ಹೆಣ್ಣು ಮಕ್ಕಳ ಸಡಗರ ಹೇಳುತ್ತೀರದು, ಹೊಸದಾಗಿ ಗಂಡನ ಮನೆಗೆ ಹೋಗಿದ್ದ ಹೆಣ್ಣು ಮಗಳು ತವರೂರಿ‌ನವರು ಪಂಚಮಿ ಹಬ್ಬಕ್ಕೆ ಕರೆಯಲಿಕ್ಕೆ ಅಣ್ಣ ಇಲ್ಲವೇ ತಮ್ಮ ಬರುವನೆಂಬ ನಿರೀಕ್ಷೆಯ ಭಾವ, ಕಣ್ಣೀರಾಗಿ ಹೊರಹೊಮ್ಮಿರುವ ಸಂಕಟದ ಕ್ಷಣಗಳು..!

ಎಷ್ಟೋ ದಿವಸಗಳ ನಂತರ ನೆನಪಾದ ಬಾಲ್ಯದ ಸ್ನೇಹಿತನ ಬಗ್ಗೆ ತಿಳಿದ ಗೆಳೆಯ. ಅವನು ಮರಣ ಹೊಂದಿದ ಸುದ್ದಿ ತಿಳಿದ ಮೇಲೆ ಉಂಟಾಗುವ ಅನಾಥ ಪ್ರಜ್ಞೆಯ ಭಾಷ್ಪದ ಭಾವ ತೀರದಂತೆ…ಆ ಯಾತನೆ..!!

ಅರೆ ಏನಿದು..?

ಒಂದು ಜೀವ ಮತ್ತೊಂದು ಜೀವಕ್ಕಾಗಿ ಹಾತೋರೆಯುವ, ಕಾತರಿಸುವ ಆ ಕ್ಷಣಗಳು ಮರೆಯಲಾಗದಂತಹದು. ‘ಬರುವನೆಂಬ ಸಂಭ್ರಮ ಒಂದು ಕಡೆ : ಬರಲಾರನೆಂಬ ನೋವು ಇನ್ನೊಂದು ಕಡೆ’. ಇವೆ ಅಲ್ಲವೇ ಒಲವಿನ ಸಂಕಟಗಳು. ಒಲವೆಂದರೆ ಕಾಯಬೇಕು. ಕಾದು ಕಾದು ಕಾದ ಮೇಲೆ ದಕ್ಕಿದಾಗ ಸಿಗುವ ಸಂಭ್ರಮ, ಉಕ್ಕಿ ಹರಿಯುವ ಸಂತೋಷ ಅದೇ ಒಲವು..!! ಆ ಒಲವು ನಿರಂತರವಾಗಿ ಇರಬೇಕೆಂದರೆ ಕಾಯುವಿಕೆ ಅನಿವಾರ್ಯ. ಕಾಯುವ ಸುಖ ಸಂಕಟಪಡುವ ಕಷ್ಟ ಒಬ್ಬರನ್ನೊಬ್ಬರು ಇಷ್ಟಪಡುವ ಸ್ನೇಹಿತರು, ದಂಪತಿಗಳು, ಪಕ್ಷಿ, ಪ್ರಾಣಿ, ಗಿಡ ಮರ ಬಳ್ಳಿಗಳೂ..ನೈಸರ್ಗಿಕ ಸಮೂಹವೇ ಒಲವಿಗೆ ಶರಣಾಗಿದೆ.

ಒಲವೆಂದರೇ ಶರಣಾಗುವುದು. ಶರಣಾಗುವುದೇ ಒಲವು. ಒಂದು ಇನ್ನೊಂದಕ್ಕೆ ಪೂರಕವಾಗಿ ಶರಣಾಗಬೇಕು. ಶರಣಾಗದೆ ಸೆಟೆದು ನಿಂತರೆ ಅಹಂ ಬಂದಿದೆ ಎಂದೇ ಅರ್ಥ. ಎಲ್ಲಿ ಅಹಂ ಇರುತ್ತದೆಯೋ ಅಲ್ಲಿ ಸಂಬಂಧಗಳಿಗೆ ಅರ್ಥವಿರುವುದಿಲ್ಲ. ಸಂಬಂಧಗಳು ಅರ್ಥವಾಗಿರಬೇಕೆಂದರೆ ಅಹಂ ತೊರೆಯಬೇಕು.

ಸ್ನೇಹ, ಬಾಂಧವ್ಯ, ಸಂಬಂಧಗಳು ಸೊಗಸಾಗಿರಬೇಕಾದರೆ ಸರಿದು ನಿಲ್ಲಬೇಕು..!! ನಾವು ಎಷ್ಟು ಸರಿದು ನಿಲ್ಲಬೇಕೆಂದರೆ ನಮ್ಮ ಸ್ವಾಭಿಮಾನವನ್ನು ಅಡವಿರಬಾರದಷ್ಟು ಮಾತ್ರ. ಸ್ವಾಭಿಮಾನದಲ್ಲಿಯೇ ಸಂಬಂಧಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು. ಸಾಧ್ಯವಾದಷ್ಟು ಇನ್ನೊಬ್ಬರ ಸಂಕಟಗಳಿಗೆ, ನಾವು ಸ್ಪಂದಿಸಬೇಕು. ಅವರ ನೋವುಗಳಿಗೆ ಮುಲಾಮಾಗಬೇಕು.

ಭಾವ ತುಂಬಿದ ಬದುಕು ನಮ್ಮದಾದಾಗ ಒಲವು ಒಲಿಯುವುದು ಎಂಬ ಭರವಸೆ ಮೂಡುತ್ತದೆ. ಬದುಕಿನುದ್ದಕ್ಕೂ ಒಲವು ಒಲಿಯುವ ಕಾತುರವೇ ಒಲವಧಾರೆ. ಗುಡ್ಡಬೆಟ್ಟ, ಅರಣ್ಯಗಳಿಗೆ ಸುರಿಯುವ ಮಳೆ ಹನಿಗಳು ಪುನಃ ಈ ಭೂಮಿಗೆ ತೊರೆ ತೊರೆಯಾಗಿ ಧಾರೆಯಾಗಿ ಹರಿಯುವಂತೆ ವಿವಿಧ ಸಂಬಂಧಗಳಿಂದ ಅರಿಯುವ ವಾತ್ಸಲ್ಯದ ದಾರಿಯು, ನಮ್ಮ ಸಂತೋಷವನ್ನು ಹಿಮ್ಮಡಿಗೊಳಿಸುತ್ತದೆ. ಒಲವಿನ ಅಂತಿಮ ಹಂತವೇ ಸಂತೋಷ. ಒಲವಿನ ಕೊನೆಯ ಫಲವೇ ಇನ್ನೊಬ್ಬರ ಸಂತೋಷ. ಒಲವೆಂದರೆ ತ್ಯಾಗ. ತ್ಯಾಗವನ್ನು ನಮ್ಮೆದೆಯೊಳಗೆ ಇಳಿಸಿಕೊಂಡರೆ ಒಲವು ತಾನಾಗಿ ಉಳಿಯಬಲ್ಲದು.

ದೇಶ, ಭಾಷೆ, ಗಡಿ ಎಲ್ಲವನ್ನು ಮೀರಿದ್ದು ಮನುಷ್ಯ ಸಂಬಂಧಕ್ಕಾಗಿ ಒಲಿಯುವ ಕಾತರದಿಂದ ಕಾಯುತ್ತಿರೋಣ. ಎಲ್ಲರೆದೆಯು ಹಚ್ಚಹಸಿರಾಗುವ ಮನುಷ್ಯತ್ವವನ್ನು ಉಳಿಸಿಕೊಳ್ಳೋಣ.

ರೈತ ಮಳೆಗೆ ಕಾಯುವ ಕಾತುರ… ಮದುವೆಯಾದ ಹೊಸ ಹೆಣ್ಣುಮಗಳು ಗಂಡನ ಬರುವಿಕೆಗಾಗಿ ಕಾಯುವ ಅತುರ… ಕಳೆದುಕೊಂಡ ಸ್ನೇಹಿತನನ್ನು ನೆನಪಿಸಿಕೊಳ್ಳುವ ಸಂಕಟ… ಇವೆಲ್ಲವೂ ಒಲವಿನ ನೆಲೆಯೊಳಗೆ ನಲುಗದೆ ಅವು ಪ್ರತಿಯೊಬ್ಬರಿಗೂ ದಕ್ಕುವಂತಾಗಲಿ. ಪ್ರತಿಯೊಬ್ಬರಿಗೂ ದಕ್ಕುವ ಪ್ರೀತಿಯನು ನಾವು ಹಂಚೋಣವೆಂದು ಆಶಿಸೋಣ.


ರಮೇಶ ಸಿ ಬನ್ನಿ ಕೊಪ್ಪ ಹಲಗೇರಿ

ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ
ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ
ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು
(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)
ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಪ್ರಕಟವಾಗಿವೆ.

One thought on “

  1. ಬಾಳ ಚೆಂದ ಬರೆದೀರಿ ರಮೇಶ್. ಭಾವತುಂಬಿದ ಬದುಕು ನಮ್ಮದಾದಾಗ ಒಲವು ಒಲಿಯುವುದು ಎಂದು ಭರವಸೆ ಮೂಡುವುದು ಎಂದು ಮನಸ್ಸನ್ನು ತಟ್ಟುವಂತೆ ಹೇಳಿರುವಿರಿ. ತುಂಬಾ ಇಷ್ಟವಾಯಿತು. ತುಂಬು ಹೃದಯದ ಅಭಿನಂದನೆಗಳು.

Leave a Reply

Back To Top