ವಸು ವತ್ಸಲೆಯವರ ಕೃತಿ ‘ಹದುಳ ತೆಕ್ಕೆಯಲಿ’ ಅವಲೋಕನ ವರದೇಂದ್ರ ಕೆ ಮಸ್ಕಿ

ಪುಸ್ತಕ ಸಂಗಾತಿ

ವಸು ವತ್ಸಲೆಯವರ ಕೃತಿ ಹದುಳ ತೆಕ್ಕೆಯಲಿ

ಅವಲೋಕನ ವರದೇಂದ್ರ ಕೆ ಮಸ್ಕಿ

ಹದುಳ ತೆಕ್ಕೆಯಲಿ
 (ಕವನ ಸಂಕಲನ)
  ಕೃತಿಕಾರರು – ವಸು ವತ್ಸಲೆ



           ದೊಡ್ಡರಂಗೇಗೌಡರ ಪರಿಪೂರ್ಣ ಮುನ್ನುಡಿ ಪಡೆದು, ವೈದೇಹಿಯವರ ಅರ್ಥಪೂರ್ಣ ಬೆನ್ನುಡಿಯನ್ನು ತಮ್ಮದಾಗಿಸಿಕೊಂಡ; “ವಸು ವತ್ಸಲೆ” ಕಾವ್ಯನಾಮದಿಂದ ಸಾಹಿತ್ಯ ಲೋಕದಲ್ಲಿ ತಮ್ಮನ್ನು ಪ್ರಭಾವಯುತವಾಗಿ ಗುರುತಿಸಿಕೊಂಡ ಶ್ರೀಮತಿ ವತ್ಸಲ ಸುರೇಶ್ ಅವರ ಕಾವ್ಯ ಪ್ರೌಢಿಮೆ ಉನ್ನತವಾಗಿದೆ. ಹೆಣ್ಣಿನ ತಲ್ಲಣಗಳಿಗೆ ಕನ್ನಡಿಯಂತಹ ಈ “ಹದುಳ ತೆಕ್ಕೆಯಲಿ” ಕೃತಿಯ ಕವಿತೆಗಳು ತುಕ್ಕುಗಟ್ಟಿದ ಮನಗಳಿಗೆ ತಕ್ಕ ಪಾಠ ಕಲಿಸುತ್ತವೆ. ಇದರ ಕಾವ್ಯಧಾರೆಯ ಸಾಲುಗಳು ಸಂಪೂರ್ಣವಾಗಿ ವರ್ತಮಾನದ ವಾಸ್ತವತೆಗೆ ಹತ್ತಿರವಾಗಿದ್ದು ಮನಸಿಗೆ ಮುಟ್ಟುತ್ತವೆ, ನಾಟುತ್ತವೆ,  ಅಷ್ಟೇ ಅಲ್ಲದೆ ಹಲವು ಕವಿತೆಗಳು ನಮ್ಮನ್ನು ಮುದಗೊಳಿಸುತ್ತವೆ, ಮನಸನ್ನು ಹದಗೊಳಿಸುತ್ತವೆ.ಹೀಗೆ ನನ್ನ ಮನವನ್ನು ಹದಗೊಳಿಸಿ ಮನಸಲ್ಲಿ ಅಳಿಯದೇ ಉಳಿದ ಕೃತಿಯ ಒಂದಷ್ಟು ಕವಿತೆಗಳ ಸಾಲುಗಳನ್ನು ನಿಮ್ಮ ಭಾವಕ್ಕೆ ನೀಡುತ್ತಿರುವೆ.

           

    “ಬುದ್ಧ” ಎಂದಾಕ್ಷಣ ಬದ್ಧತೆ ನೆನಪಾಗುತ್ತದೆ. ಬುದ್ಧನ ಬದ್ಧತೆಯ ಬೋಧನೆ ನಮಗೆ ಇಂದಿಗೂ ದಾರಿಯಾಗಿದೆ ಎಂಬುದು ಪೂರ್ಣವಿರಾಮ ಇಲ್ಲದ ಸತ್ಯ. ಅಂತಹ ಬುದ್ಧನ ಬೋಧನೆಗಳನ್ನು ಬಿಕರಿಗಿಟ್ಟಿದ್ದೇವೆ ಎಂದು ಮರುಕ ಪಡುವ ಕವಯಿತ್ರಿ, ನಮ್ಮ ನಡುವೆ ಎಲ್ಲೆಲ್ಲಿ ಬುದ್ಧನಿದ್ದಾನೆ ಎಂದು ಹೇಳುತ್ತ..


“ಅರೆಗಣ್ಣ ತೆರೆದು ಜಗವ ನೋಡುತ
ನಗುತಾ, ತನ್ನ ಬೋಧನೆಗಳ ಬಿಕರಿಗಿಟ್ಟ
ನಮ್ಮ ನಡುವೆ ಬುದ್ಧನಿದ್ದಾನೆ ನಿಶ್ಯಬ್ಧ..”

ಮನದ ಮಲ ಕಲ್ಮಷ ಶುದ್ಧಿಸದೆ ನಾವು
ಅವನನ್ನು ತುಕುಡೆ ಹಳೆಯ ಬಟ್ಟೆಯಲ್ಲೊರಸಿ
ಬಣ್ಣಗಳೆಯದಂತೆ ಕಾಪಿಟ್ಟಿದ್ದೇವೆ..


      ಇವುಗಳನ್ನೆಲ್ಲ ಒಳಗಣ್ಣಿನಿಂದ ನೋಡಿ ಬಿಕ್ಕಳಿಸಿ ಬುದ್ಧ ನಕ್ಕಿದ್ದಾನೆ, ಮೂಕ ವೇದನೆಯಿಂದ ನರಳಿದ್ದಾನೆ ಎಂದು, ನಾವೆಷ್ಟು ಬದಲಾಗಿದ್ದೇವೆ, ಬುದ್ಧನ ಅಷ್ಟೂ ತತ್ವಗಳನ್ನು ಕಪಾಟಿನಲ್ಲಿಟ್ಟು ಸ್ವೇಚ್ಛಾಚಾರಕ್ಕೆ, ತುಚ್ಛ ಕಾರ್ಯದಲ್ಲಿ ತೊಡಗಿದ್ದೇವೆ ಎಂದು ಸಹೋದರಿ ವಸು ವತ್ಸಲೆ ಅವರು ಮಾರ್ಮಿಕವಾಗಿ ಅರ್ಥಪೂರ್ಣವಾಗಿ ತಿಳಿಸಿದ್ದಾರೆ.

*     ಕೃತಿಯಲ್ಲಿ ಅತ್ಯಂತ ಹೆಚ್ಚು ಪ್ರಭಾವ ಬೀರುವ ಕವಿತೆ “ಜಾರಿಣಿಯಲ್ಲ ತಾಯಿ”. ಕಾಮುಕ ಪುರುಷ ಲಿಂಗಗಳ ದೌರ್ಜನ್ಯ ಒಂದೆಡೆಯಾದರೆ, ತಾಯಿ ವಾತ್ಸಲ್ಯ, ಅವಳ ಕರ್ತವ್ಯ, ಹಸಿವ ಇಂಗಿಸಿಕೊಳ್ಳುವ ದರ್ದು ಮತ್ತೊಂದು ಕಡೆ. ಇವುಗಳ ಮಧ್ಯೆ ಸಿಕ್ಕ ಹೆಣ್ಣಿನ ಇಕ್ಕಟ್ಟಿನ ಪರಿಸ್ಥಿತಿ ಓದುಗನನ್ನು ಅರ್ದ್ರವಾಗಿಸುತ್ತದೆ.


“ಕುಬ್ಬಸವೆಲ್ಲ ನೆನೆಯುತಿದೆ ಕಟ್ಟಿದೆದೆಯ ಹಾಲು
ತುಂತುಂಬಿ, ಮುಟ್ಟಿ ಹಿಸುಕಿ ಕಣ್ಣೀರಾದಳು
ಕರುಳ ಕುಡಿಯ ನೆನೆಯುತಿಹಳು”


       ಎಂದು ಓದುಗನ ಹೃದಯದಲ್ಲಿ ಕಣ್ಣೀರು ತರಿಸುತ್ತಾರೆ.ಇಂತಹ ಅಮೃತ ತುಂಬಿದ ತಾಯ ಎದೆಯ ಮೇಲೆ ಕಳ್ಳ ಮೇಸ್ತ್ರಿಯ ಕಣ್ಣು ನೆಟ್ಟು ಅವಳನ್ನು ಬಲಾತ್ಕರಿಸುವ ಸಾಲುಗಳು ಕವಯಿತ್ರಿಯಂತೆ ಓದುಗನಲ್ಲೂ ಆಕ್ರೋಶ ತುಂಬುತ್ತವೆ. ಆದರೆ ಇದಕ್ಕೂ ಹೆಚ್ಚಿನ ಆಕ್ರೋಶ ಆ ಹೆಣ್ಣಿನ ಕುಡುಕ ನಿಷ್ಪ್ರಯೋಜಕ ಗಂಡನ ಮೇಲಾಗುತ್ತದೆ. ಈ ಕವಿತೆ ಮತ್ತೆ ಮತ್ತೆ ಓದಿಸಿಕೊಂಡು ಮನಸನ್ನು ಮ್ಲಾನಗೊಳಿಸುತ್ತದೆ.

*     ಹೆಣ್ಣು ಸಿಡಿಮಿಡಿಗೊಂಡು ನಾಲ್ಕು ಕ್ರೋಧದ, ನೋವಿನ ಮಾತುಗಳನ್ನು ಆಗಾಗ ಹೊರಹಾಕುತ್ತಲೇ ಇರುತ್ತಾಳೆ ಎಂಬುದನ್ನು ಸಹೋದರಿ ವಸು ವತ್ಸಲೆ ಅವರು  ಸಾಸಿವೆ ಎಣ್ಣೆಯಲಿ ಚಟಪಟ ಸಿಡಿದಂತೆ, ಕರಿಬೇವು ಪಟಪಟ ಸದ್ದು ಮಾಡಿ ಸುಟ್ಟು ಸೆಟೆದ ಹಾಗೆ ಎಂದು ಹೋಲಿಸುತ್ತಾರೆ. ಆದರೆ ಸಾಸಿವೆಗೆ, ಕರಿಬೇವಿಗೆ ಇರುವ ಸಿಡಿಯುವ, ಸೆಟೆಯುವ ಸ್ವಾತಂತ್ರ್ಯವೂ ನನಗಿಲ್ಲ,


“ಸಾಸಿವೆಯಂತೆ ನಾನೂ ಆಗಾಗ ಸಿಡಿಯುವೆ
ಸದ್ದು ಬರದ ಹಾಗೆ, ಗುರುತು ಉಳಿಯದ ಹಾಗೆ..
ಮೆಲ್ಲಗೆ ಅದೃಶ್ಯವಾಗುವ ಹೊಗೆಯ ಹಾಗೆ”


         ಎಂದು ಅನಾದಿಕಾಲದಿಂದ ವರ್ತಮಾನದ ವರೆಗೆ ಬದಲಾಗದ ಪರಿಸ್ಥಿತಿಯ ಬಗೆಗೆ ಸಿಡಿಮಿಡಿಗೊಳ್ಳುತ್ತಾರೆ. ಕೊನೆಗೂ ನನ್ನ ಗುರುತು ಉಳಿಯದ ಹಾಗೆ ಇರಬೇಕಾಗಿದೆ ಎಂಬ ಪರಿಸ್ಥಿಯ ಅನಾವರಣದ ಭಾವ ಓದುಗನ ಮನವನ್ನು ಸಾಸಿವೆಯಷ್ಟೇ ಕುಗ್ಗಿಸುತ್ತದೆ.

*    ಕಾವ್ಯ ಕಟ್ಟುವಿಕೆ ಮತ್ತು ಕಾವ್ಯಕ್ಕೆ ಆಯ್ದುಕೊಂಡ ವಿಷಯ ಇವು ಎರಡೂ ಕವಿಯನ್ನು ಗಟ್ಟಿಗೊಳಿಸುತ್ತವೆ. ಬದುಕಿಗೆ ಹತ್ತಿರವಾದಂತಹ ಮತ್ತು ತಾರ್ಕಿಕ ಚರ್ಚೆಗೆ ಆಸ್ಪದ ಕೊಡುವಂತಹ ವಿಷಯವನ್ನು ಆಯ್ದು ಕಟ್ಟಿದ ಕವಿತೆಗಳು ಬಹುತೇಕ ಜನಮನ್ನಣೆ ಗಳಿಸುತ್ತವೆ. ಕವಯಿತ್ರಿ ವಸು ವತ್ಸಲೆ ಅವರು “ಅಮಾನತ್ತು” ಎಂಬ ಶೀರ್ಷಿಕೆಯಡಿ ಓದುಗನನ್ನು ಚಿಂತನೆಗೆ ಹಚ್ಚುವ ಇಂತಹ ಕವಿತೆಯನ್ನು ಕಟ್ಟಿ ಕೊಟ್ಟಿದ್ದಾರೆ. ಮುಟ್ಟಿನ ಕುರಿತಾಗಿ ಅನೇಕರು ಅನೇಕ ರೀತಿಯಲ್ಲಿ ತಮ್ಮ ಭಾವ ವ್ಯಕ್ತಪಡಿಸಿದ್ದರೂ ಈ “ಅಮಾನತ್ತು” ಕವಿತೆ ವಿಶೇಷವಾಗಿದೆ. ನಾಲ್ಕು ದಿನದ ಮಟ್ಟಿಗೆ “ಅಮಾನತ್ತು”ಗೊಂಡಿರುವ ಹೆಣ್ಣಿನ ಮನಸ್ಥಿತಿಯ ಪ್ರತಿಬಿಂಬದ ಕವಿತೆಯಲ್ಲಿ,


“ಲೋಟ, ಚೆಂಬು, ದಿಂಬು ಹಾಸಿಗೆ
ಅಣಕಿಸುತಿವೆ ಸೃಷ್ಟಿಯ ಪರಮಾರ್ಥವನು”

       ದೂರ ಮಾಡಿ ಕೂಡಿಸಿದಾಗಲೇ ಏಕೋ,


“ಎಂದಿಗಿಂತ ಹೆಚ್ಚೇ ಚಳಿ, ಸ್ವಾತಂತ್ರ್ಯದ ಹಪಾಹಪಿ
ಏಕಾಂಗಿಯೆಂಬ ಚಿಂತೆಯ ಚಡಪಡಿಕೆ”


        ಎನ್ನುತ್ತ ವರ್ತಮಾನದ ವೈಜ್ಞಾನಿಕ ಯುಗದಲ್ಲೂ ಇದು ಬೇಕೇ ಎನ್ನುವ ಕವಯಿತ್ರಿಯವರು, ಮುಂದೆ


“ಅನುಕಂಪದಲಿ ಒಳ ಕರೆದರೆ
ಶಿವ ಶಿವ ನಾ ಹೋದೇನೆ?
ಧರ್ಮ ಶಾಸ್ತ್ರಗಳಿಗೆ ತಲೆಕೊಟ್ಟು
ಶತಮಾನಗಳುರುಳಿವೆ, ಆ ಕಟ್ಟುಪಾಡುಗಳು
ನನಗೂ ವ್ಯಸನವಾಗಿವೆ..”


       ಎಂದು ಅದಕ್ಕೇ ಒಗ್ಗಿಕೊಂಡು ಬಿಟ್ಟಿದ್ದೇವೆ, ಇನ್ನು ಬದಲಾಗಲು ಮನ ಒಪ್ಪದು ಎನ್ನುತ್ತಾರೆ.
       ಮುಂದುವರೆದು,


“ಮುಟ್ಟೇ ಹುಟ್ಟಿನ ಗುಟ್ಟಾದರೂ
ಮುಟ್ಟೇ ಆಗದ ಅದೆಷ್ಟೋ ಹೆಣ್ಣುಗಳ
ಬದುಕೇ ಅಮಾನತ್ತಿನಲ್ಲಿದೆ..”


      ಮುಟ್ಟಾದರೂ, ಆಗದಿದ್ದರೂ ಈ ಅಮಾನತ್ತು ಬದುಕಿನಲ್ಲಿ ಹಾಸುಹೊಕ್ಕಂತಾಗಿದೆ ಎಂದು ಮನದ ಖೇದವನ್ನು ಹೊರಹಾಕಿ ಓದುಗನಿಗೆ ವಾಸ್ತವದ ಅರಿವನ್ನು ಮೂಡಿಸುತ್ತಾರೆ.

*      ಕರೋನ ಮಾಹಾ ಮಾರಿ ಮಾಡಿದ ಅಪಾಯಗಳನ್ನು ನೆನೆದರೆ ಇವತ್ತಿಗೂ ಮನಸು ಮುದುಡುತ್ತದೆ, ಕಳೆದುಕೊಂಡವರ ನೆನಪು ಮೂಡಿ ಕಣ್ಣು ತೇವವಾಗುತ್ತವೆ. ಗಂಡ ಹೆಂಡತಿಯನ್ನು, ಹೆಂಡತಿ ಗಂಡನನ್ನು ಕಳೆದುಕೊಂಡು ಪಡುತ್ತಿರುವ ಯಾತನೆ ನರಕ ತೋರಿಸುತ್ತಿದೆ. ಇನ್ನು ತಂದೆ ತಾಯಿ ವಯಸ್ಸಿಗೆ ಬಂದ ಮಕ್ಕಳನ್ನು ಕಳೆದುಕೊಂಡು ಅನಾಥ ಭಾವದಿಂದ ತತ್ತರಿಸುತ್ತಿದ್ದಾರೆ. ಅಂದು ಆ ದುರಿತ ಕಾಲದಲ್ಲೂ ಕರ್ತವ್ಯ ಪ್ರಜ್ಞೆ ಮೆರೆದು ನಮ್ಮನ್ನೆಲ್ಲ ಕಾಪಾಡಿದ ವೈದ್ಯರು ಅದೇ ಪಿಡುಗಿಗೆ ಬಲಿಯಾದ ಉದಾಹರಣೆಗಳಿಗೇನು ಕಮ್ಮಿ ಇಲ್ಲ. ಮಳೆ, ಬಿಸಿಲು, ಗಾಳಿ, ಚಳಿಯಲ್ಲಿ ಜನರ ಸುರಕ್ಷತೆಗೆ  ನಿಂತ ಆರಕ್ಷರಕರ ಪಾಡು ನೆನೆದರೂ ಒಂದು ಕ್ಷಣ ಹೃದಯ ಸ್ತಬ್ಧವಾಗುತ್ತದೆ. ಅಂತಹ ದುಸ್ಥಿತಿಯ ಕುರಿತಾಗಿ ಮತ್ತು ಜನರ ನಿರ್ಲಕ್ಷ್ಯದ ಕುರಿತಾಗಿ, ವೈದ್ಯರ, ಆರಕ್ಷರ ಸೇವೆಯ ಕುರಿತಾಗಿ ಮೇಲಿನ ಮಾತುಗಳಂತೆ ಸಹೋದರಿ ವಸು ವತ್ಸಲೆ ಅವರು “ಕರೋನ ಕರಿ ನೆರಳು” ಶೀರ್ಷಿಕೆಯಲ್ಲಿ ತಮ್ಮ ಭಾವ ಹರಿಬಿಟ್ಟಿದ್ದಾರೆ. ವೈದ್ಯರು, ಆರಕ್ಷಕರಿಗೂ ಒಂದು ಬದುಕಿದೆ, ನಾವು


“ಒಂದಷ್ಟು ತಾಳ್ಮೆ ವಹಿಸೋಣ
ನಮ್ಮನ್ನು ನಾವು ಸುಧಾರಿಸಿಕೊಳ್ಳೋಣ
ನಮ್ಮ ವೈದ್ಯರ ಉಳಿಸಿಕೊಳ್ಳೋಣ..
ಪೊಲೀಸರಿಗೆ ಸಹಕರಿಸೋಣ..
ಕರೋನ ಮುಕ್ತ ದೇಶವಾಗಿಸೋಣ
ನಿಯಮ ಪಾಲಿಸುತಾ ಜವಾಬ್ದಾರಿ ವಹಿಸೋಣ”


             ಎಂದು ಅಂದು ಅಸಡ್ಡೆ ತೋರಿ, ಬೇಕಾ ಬಿಟ್ಟಿ ಅಲೆದಾಡುತ್ತಿದ್ದ ಜನರಿಗೆ ತಿಳಿಹೇಳುತ್ತಾರೆ. ಅಂದಿನ ವರ್ತಮಾನ ಪರಿಸ್ಥಿತಿಯಲ್ಲಿ ಈ ಕವಿತೆ ಓದಿದವರು ಖಂಡಿತ ಬದಲಾಗಿರುತ್ತಾರೆ, ಜಾಗೃತರಾಗಿತ್ತಾರೆಂಬುದು ನನ್ನ ಅನಿಸಿಕೆ. ಮುಂದವರೆದು ಮತ್ತೊಂದು ಕವಿತೆಯಲ್ಲಿ ಕರೋನಾ ಒಂದು “ಲಾಭದ ಸರಕು”, ಆಗಿದೆ ಎನ್ನುವ ಕವಯಿತ್ರಿ ಆ ದುರಿತ ಕಾಲದಲ್ಲೂ ಮಾನವತೆ ಮರೆತು ದುಡಿದುಕೊಂಡವರಿದ್ದಾರೆ ಎಂದು ವ್ಯಂಗ್ಯವಾಗಿ ಚಿತ್ರಿಸಿದ್ದಾರೆ. ಮತ್ತೆ “ಲಾಕ್ ಡೌನ್” ಕವಿತೆಯಲ್ಲಿ ಸ್ಮಶಾನ ಮೌನ ಆವರಿಸಿದ ಪರಿ ಹೇಳುತ್ತ
“ಒಂದೊಮ್ಮೆಲೆ ದೂರಲ್ಲೆಲ್ಲೊ ಅಂಬುಲೆನ್ಸಿನ ಆಕ್ರಂದನ”
        ಎಂದು ಹೇಳಿ ಜನರ ಮನದ ನೋವೇ ಆ ಅಂಬುಲೆನ್ಸಿನ ಶಬ್ದ ಎಂದು ಓದುಗನೆದೆಯಲ್ಲಿ ಅನುಕಂಪವನ್ನು ಹುಟ್ಟಿಸುತ್ತಾರೆ.
     ಮುಂದೆ “ಸತ್ಯದ ತೆರೆಗಳು” ಕವಿತೆಯಲ್ಲೂ ಕರೋನಾದಿಂದ ಅಸುನಿಗಿದ ಶವದ ಕುರಿತಾಗಿ, ಆ ಕ್ಷಣದಲ್ಲಿ …


“ಎಲ್ಲಿ ಹೋದರು ನಿನ್ನ ನೆಂಟರು, ಯಾರೋ ಹೊತ್ತರು, ಯಾರೋ ಸುಟ್ಟರು,
ಉಳಿದದ್ದು ಹೋದವನ ಪುಣ್ಯದ ಬಾಪ್ತು ಮಾತ್ರ”.


     ಈ ಸಮಯದಲ್ಲೇ ಸಂಬಂಧಗಳ “ಸತ್ಯದ ತೆರೆಗಳು” ಬಯಲಾದವು, ಇಷ್ಟೇ ಇಲ್ಲಿನ ಬದುಕು ಎಂದ್ಹೇಳಿ, ಕಪಟವಿಲ್ಲದೆ ಇದ್ದಷ್ಟು ದಿನ ಬದುಕಿ ಎನ್ನುತ್ತಾರೆ.

*   ಭಾರತಕ್ಕೆ ಸ್ವಾತಂತ್ರ್ಯ ದಕ್ಕಿದ್ದರ ಹಿಂದೆ ಸಾವಿರ ಸಾವಿರ ಜೀವಗಳ ಬಲಿದಾನವಿದೆ, ಇದನ್ನು ಮರೆತು ಸ್ವಾತಂತ್ರ್ಯವನ್ನು ಸ್ವೇಚ್ಛಾಚಾರವಾಗಿ ಬಳಸಿಕೊಳ್ಳುತ್ತಿರುವವರ ಕುರಿತು ಕವಯಿತ್ರಿ ವತ್ಸಲೆ ತುಂಬಾ ಬೇಸರ ವ್ಯಕ್ತಪಡಿಸುತ್ತಾ, ಸನ್ಮಾರ್ಗ ಬಿಟ್ಟು,  


“ನಾವೇಕೆ ಹೀಗೆ ಮೈಮರೆತು ಹುಚ್ಚರಾಗಿದ್ದೇವೆ?
ನಮ್ಮದೇ ಆಸ್ತಿಗಳನ್ನು ಸುಟ್ಟು ಕುಣಿಯುತ್ತೇವೆ”

“ಜಾತಿ ಧರ್ಮಗಳ ಮುಸುಕಿನ ಗುದ್ದಾಟದಲ್ಲಿ
ಬೆನ್ನಿಗೆ ನಾವೇ ಚೂರಿ ಇರಿದುಕೊಳ್ಳುತ್ತಿದ್ದೇವೆ
ನಮ್ಮದೇ ಹೆಣ್ಣುಮಗಳೊಬ್ಬಳ ಬೆತ್ತಲು ಮಾಡಿ
ರಾತ್ರೋ ರಾತ್ರಿ ಸುಟ್ಟು ಬಿಡುತ್ತೇವೆ”


         ಎಂದು ನಾವೆಲ್ಲ ದುರ್ಮಾರ್ಗಿಗಳಾಗಿ, ಅತ್ಯಾಚಾರಿಗಳಾಗಿ, ದೇಶದ್ರೋಹಿಗಳಾಗಿ, ಲಂಚಕೋರರಾಗಿ ಮುಂದುವರೆಯುವುದು ಸ್ವಾತಂತ್ರ್ಯದ ಸ್ವೇಚ್ಛಾರವಾಗುತ್ತದೆ,


“ಸ್ವಾತಂತ್ರ್ಯ ಅಗ್ಗದ ಸ್ವರ್ಣ ಕರಡಿಗೆಯಲ್ಲ
ಹಲವರ ಜೀವದಾನದ ಭಿಕ್ಷೆ”


           ಎಂದು ಎಚ್ಚರಿಸುತ್ತಾ, ಓದುಗರ ಮೈ ಮನದಲ್ಲಿ ಸುಮನಸ್ಥಿತಿ ತುಂಬಲು ಹವಣಿಸಿದ್ದಾರೆ.

*     ಸತ್ಯ ಎಂದರೆ ಗಾಂಧಿ ತಾತ ಎಂಬುದು ನಮಗೆಲ್ಲರಿಗೂ ತಿಳಿದ ವಿಚಾರ. ಆದರೆ ಪ್ರಸ್ತುತವಾಗಿ ಆ ಮಹಾತ್ಮನ ನಡೆಯನ್ನೇ ಪ್ರಶ್ನಿಸುವ, ಆ ಶಾಂತಿವಾದಿಯನ್ನೇ ದೂಷಿಸುವ ಕಾರ್ಯ ಅವ್ಯಾಹತವಾಗಿ ನಡೆಯುತ್ತಿದೆ. ಇದರಿಂದ ಖಿನ್ನ ಗೊಂಡ ಮನದಿಂದ ಕವಯಿತ್ರಿ ವತ್ಸಲೆ ಅವರು “ಸತ್ಯದ ಹಾದಿ” ಕವಿತೆಯಲ್ಲಿ


” ತುಂಡುಡುಗೆಯ ನೇಯ್ದುಕೊಂಡುಟ್ಟ
ಸಂಯಮಿ ಆತ, ಇಂದು ಕೊಂಡುಡಲೂ
ಸಹನೆ ಇಲ್ಲದ ಮನ್ಮಥರು ನಾವು
ಮಾತನಾಡುತ್ತಲೇ ಧೀರ ಶೂರರಾಗಿಹೆವು”


           ಎಂದು ಇಂದಿನ ನಮ್ಮ ವಾಚಾಳಿತನ, ನಿಷ್ಪ್ರಯೋಜಕ ಬದುಕಿನ ಕುರಿತು ವಿಡಂಬನೆ ಮಾಡುತ್ತಾರೆ. ತುಂಡುಡುಗೆಯಲ್ಲಿಯೇ ಇದ್ದು ನಮಗೆಲ್ಲ ಸ್ವಾತಂತ್ರ್ಯದ ಬಾವುಟ ಕೊಟ್ಟ ಮಹಾತ್ಮನ ಕುರಿತಾಗಿ ಋಣಾತ್ಮಕವಾಗಿ ಆಡಿಕೊಳ್ಳುವ ದುರ್ಬುದ್ಧಿಯಿಂದ ಪಡೆಯುವುದಾದರೂ ಏನು? ಎಂದು ಪ್ರಶ್ನಿಸಿ,


“ಎಲ್ಲರೊಳಗೂ ತಪ್ಪುಗಳೆಣಿಸಿ ಗುಣಿಸುತ್ತಿದ್ದರೆ
ಮುಂದಿನ ಪೀಳಿಗೆಗೆ ಮಾದರಿಯಾಗಿ
ತೋರುವುದಾದರೂ ಯಾರನ್ನ???”


        ಎಂದು ಮುಂದಿನ ಪೀಳಿಗೆ ಯಾವ ಮಟ್ಟಿಗೆ ಹಾದಿ ತಪ್ಪಬಹುದು? ಇರುವ ಬೆರಳೆಣಿಕೆಯ ಮಾದರಿ ಪುರುಷರ ಕುರಿತಾಗಿಯೇ ತಪ್ಪು ಭಾವ ಬಿತ್ತುತ್ತಿದ್ದರೆ ಹೇಗೆ? ಗಾಂಧಿಯ ಶಾಂತಿ, ಸಹನೆ, ತ್ಯಾಗ, ಬಲಿದಾನದ ಪ್ರತಿಫಲವೇ ಇಂದಿನ ನಮ್ಮ ನೆಮ್ಮದಿಯ ಬದುಕು ಆ “ಸತ್ಯದ ಹಾದಿ”ಯನ್ನೇ ಸುಳ್ಳಾಗಿಸ ಹೊರಟ ಒಂದು ಪಂಗಡಕ್ಕೆ ಕವಯಿತ್ರಿ ತಮ್ಮ ಕಾವ್ಯದ ಮೂಲಕ ಚಾಟಿ ಏಟು ನೀಡುತ್ತಾರೆ. ಮತ್ತು ಭವಿಷ್ಯ ಭಾರತದ ಕುರಿತಾಗಿಯೂ ಭಯವನ್ನು ವ್ಯಕ್ತಪಡಿಸುತ್ತಾರೆ.

*      ರೈತ ದೇಶದ ಬೆನ್ನೆಲುಬು. ಪ್ರತೀ ವರ್ಷ “ರೈತರ ದಿನ” ಆಚರಿಸುತ್ತೇವೆ. ಇದನ್ನು ಆಚರಿಸುವ ನಾವು ಎಷ್ಟು ವ್ಯವಸಾಯ ಬಲ್ಲೆವು ಎಂಬುದನ್ನು ಕವಯಿತ್ರಿ


“ಉಂಡು ಹೆಚ್ಚಿದ ಅನ್ನ ಕಸದ ತೊಟ್ಟಿಯಲ್ಲಿ
ಭತ್ತ ಬೆಳೆಯುವ ವಿಧಾನ ತಿಳಿಯದಿಲ್ಲಿ
ಹೊಲಗದ್ದೆ ಚಿತ್ರ ಹುಡುಕಿಹೆವು ಗೂಗಲಿನಲ್ಲಿ
ನಾವೂ ಆಚರಿಸುತಿರುವೆವು ರೈತರ ದಿನ”


             ಎಂಬುದಾಗಿ ವಂಗ್ಯ ಮಾಡುತ್ತಾ ರೈತರ ದುಸ್ಥಿತಿಯನ್ನು ಮತ್ತು ಇಂದು ರೈತರ ಮಕ್ಕಳೂ ಕೃಷಿಯಿಂದ ವಿಮುಖರಾಗಿ ಸುಗ್ಗಿ ಬಂದಾಗಷ್ಟೆ ಹುಗ್ಗಿ ತಿನ್ನಲು ಹಾಜರಾಗುತ್ತಾರೆ, ಇದು ಬೇಸರದ ಸಂಗತಿ, ಅರ್ಥವಿಲ್ಲದೇ ನಾವು ರೈತರ ದಿನ ಆಚರಿಸುತ್ತಿದ್ದೇವೆ ಎನ್ನುತ್ತಾರೆ.

*        ಈ “ಹದುಳ ತೆಕ್ಕೆಯಲಿ” ಕೃತಿಯಲ್ಲಿ ಓದುಗನನ್ನು ಮಂತ್ರಮುಗ್ಧರನ್ನಾಗಿಸುವ ಮತ್ತೊಂದು ಕವಿತೆ “ಹದಿನೈದರ ಬಾಲೆ”, ಬಾಲ್ಯ ವಿವಾಹವೋ, ಪರಿಸ್ಥಿತಿಯ ಕೈಗೊಂಬೆಯಾಗಿಯೋ ಹದಿಹರೆಯದಲ್ಲಿಯೇ ತಾಳಿ ಕಟ್ಟಿಸಿಕೊಂಡು ದೇವಿಯ ಹೊತ್ತು ಚಾಟಿ ಬೀಸಿಕೊಂಡು ಹಣ ಸಂಪಾದಿಸುವ ಹುಡುಗಿಯ ಕುರಿತಾದ ಕವಿತೆ, ನೈಜವೆನಿಸುವಂತಿದೆ. ಪ್ರತಿ ಸಾಲಿನ ಓದಿನಲ್ಲೂ ಆ ಬಾಲೆ ಕಣ್ಣ ಮುಂದೆ ಬರುತ್ತಾಳೆ. ಇಂತಹ ನತದೃಷ್ಟ ಬಾಲೆಗೆ ಕವಯಿತ್ರಿ ಕೊಡುವ ಸಲಹೆ ಚಾಟಿ ಬಿಡು, ಪುಸ್ತಕ ಹಿಡಿ.
ಪುಸ್ತಕ ಬದುಕನ್ನು ಬಂಗಾರವಾಗಿಸುತ್ತದೆ ಎಂಬುದು ಶಿಕ್ಷಣದ ಮಹತ್ವವನ್ನು ತಿಳಿಸುತ್ತದೆ. ಇಂತಹ ಕಾವ್ಯಗಳೇ ಕೃತಿಯ ಗೆಲುವಿಗೆ ಕಾರಣವಾಗುತ್ತವೆ ಮತ್ತು ಕವಿಯ ಬೆಳವಣಿಗೆಗೂ ಕೂಡ.

*     “ಹಸಿವು” ಎನ್ನುವುದು ಸರ್ವ ಜೀವ ಸಂಕುಲದಲ್ಲೂ ಇದೆ. ದೇವ ಅಲ್ಲಲ್ಲೆ, ಅಡಿಗಡಿಗೆ ಆಹಾರವನಿಟ್ಟು ಸಲಹುವನೆಂಬ ದಾಸವಾಣಿಯಂತೆ ಎಲ್ಲರಿಗೂ ಅವರವರ ಪಾಲು ಮೀಸಲಿದೆ ಎಂಬುದು ಎಷ್ಟು ಸತ್ಯವೋ, ಪರರ ಆಹಾರವನ್ನು ಕಬಳಿಸಿ ತಿಂದವರಾರು ಎಂದು ಭಗಂವತನನ್ನು ತುಸು ಖಾರವಾಗಿಯೇ ಪ್ರಶ್ನಿಸುತ್ತಾರೆ.  


“ಪ್ರತಿ ಕಾಳ ಮೇಲೆ ಬರೆದ ಹೆಸರು ಅಳಿಸಿದವರಾರು!”
ಎಂದು ಹೇಳುತ್ತ
‘ಅನ್ನ’, ‘ಅನ್ನ’ ಎಂದು ಹಸಿದು, ಬೆಂದವರು
ಭಗವಂತಾ ಎಂದು ತುತ್ತಿಗೂ ಬೇಡುವಾಗ
ನೀ ದೇವರ ಗುಡಿಯಲ್ಲಿ ನೈವೇದ್ಯಕ್ಕೆ
ಉಪವಾಸವಿದ್ದೆಯೇ ರಂಗ?


   ಹಸಿದವರ ಹೊಟ್ಟೆ ಕಂಡು ಸುಮ್ಮನೆ ಹಸನ್ಮುಖಿಯಾಗಿ ನಿಂತದ್ದು,
“ಕುಹಕವಲ್ಲವೇ ಇದು! ನ್ಯಾಯವೇ ಅನಘ?
    ಎಂದು ಬಡವರ ಪರ ದನಿ ಎತ್ತುತ್ತಾರೆ. ಇದಕ್ಕೆಲ್ಲ ಪರಿಹಾರ ನಿನ್ನ ಬಳಿಯೇ ಇದೆ,


“ಹಸಿದವರ ಉರಿಸಬೇಡ ಉಣಿಸು
ಅನ್ನ ಕಸಿಯಬೇಡ ಕರುಣಿಸು”


       ಎಂದು ಅಂಗಲಾಚುತ್ತಾರೆ. ಈ ಕವಿತೆ ಓದುತ್ತಿದ್ದಂತೆ ಓದುಗನಿಗೂ ಹಸಿವಿನ ದರ್ಶನವಾಗಿ ಭಗವಂತನ ಕಡೆ ಒಮ್ಮೆ ಮುಖ ಮಾಡುತ್ತಾನೆ.

       ಈ ಕೃತಿಯಲ್ಲಿ ಇನ್ನಿತರ ಕವಿತೆಗಳಾದ, “ನೀ ನಿಲ್ಲದೆ” , “ಯುದ್ಧ”, “ವೈದೇಹಿ”, “ಡಾ.ಸಿದ್ದಲಿಂಗಯ್ಯನವರ ಮಗಳ ಸ್ವಗತ”, “ಸತ್ಕವಿ ಪಂಪ”, “ಡಾ.ಸಿದ್ದಲಿಂಗಯ್ಯ”,  “ಅವಳ ದಿನ”, “ಭೂಮಿಯ ಸ್ವಗತ”, “ವಂದೇ ಮಾತರಂ”, “ಹಿಜಾಬು-ಕೇಸರಿ ಶಾಲು”, “ಮೌನ-ಮಾತು”, “ಸೀತಾ ಸೀತಾ” ಮುಂತಾದವು ಕಾಡುವ ಕವಿತೆಗಳಾಗಿವೆ. ಮತ್ತೆ ಮತ್ತೆ ಕಣ್ಣಾಯಿಸುವಂತೆ ಮಾಡಿ ಕಣ್ಣಲ್ಲಿ ತುಂಬಿಕೊಳ್ಳುತ್ತವೆ. ಮನವನ್ನು ಭಾವಪರವಶವಾಗಿಸಿ ನೆನಪಿನಂಗಳದಲ್ಲಿ ಗುನುಗುತ್ತವೆ. ತಾವೂ ಈ ಕೃತಿಯನ್ನು ಓದಿದರೆ ಅದರ ಅಂತರ್ಭಾವ ನಿಸ್ಸಂದೇಹವಾಗಿ ನಿಮಗೆ ಹೊಸ ಅನುಭವ ನೀಡುತ್ತದೆ ಎಂಬುದು ನನ್ನ ಅನಿಸಿಕೆ.
       ಸಹೋದರಿ ವಸು ವತ್ಸಲೆ ಅವರಿಂದ ಮತ್ತಷ್ಟು, ಮೊಗದಷ್ಟು ಪ್ರಬುದ್ಧ ಕವಿತೆಗಳು ಓದುಗರಿಗೆ ಸಿಗಲಿ, ಹಲವಾರು ಕೃತಿಗಳು ಲೋಕಾರ್ಪಣೆಗೊಂಡು ನಾಡಿನಾದ್ಯಂತ ಮನೆಮಾತಾಗಲಿ ಎಂದು ಆಶಿಸುತ್ತಾ ನನ್ನ ಕಿರು ಅವಲೋಕನಕ್ಕೆ ವಿರಾಮ ನೀಡುತ್ತೇನೆ.

ಪುಸ್ತಕಕ್ಕಾಗಿ ಸಂಪರ್ಕಿಸಿ
ವಸು ವತ್ಸಲೆ
 87926 93438


ವರದೇಂದ್ರ ಕೆ ಮಸ್ಕಿ


Leave a Reply

Back To Top