ಕಾವ್ಯಸಂಗಾತಿ
ಅವಳೊಂದು ಸೋಜಿಗ
ನಯನ. ಜಿ. ಎಸ್.
ಅವಳಿಗೂ ಆಸೆಗಳಿವೆ,
ಹೇಳಿಕೊಳಲಾರದಷ್ಟು…..
ಮೇರೆಗಳ ಮೀರಿಯೂ ಹಬ್ಬುವಷ್ಟು….
ವಿಕಸಿಸುತ ಸಂಕುಚಿಸಲಾರದಷ್ಟು..
ಲೆಕ್ಕವಿಲ್ಲವದಕೆ ! ಸಾಸಿರ ಸಾಸಿರ..
ಭೋರ್ಗರೆವ ಜಲಪಾತದಂತೆ ಅವಳು.
ಭವದ ಆಳಕೆ ಇಳಿದಷ್ಟೂ ಮಿಸುನಿಯಾಗುತ್ತಾಳೆ.
ಬಾಳ ಬಂಡಿಯನು ನಡೆಸಿದಂತೆಲ್ಲಾ ಹೊಳೆಯುತ್ತಾಳೆ,
ಚೊಕ್ಕ ಚರ್ಯೆಗೆ ಅವಳಿಗವಳೇ ಸಾಟಿ..
ಪರ್ಯಾಯವಿಲ್ಲ ಅದಕಂತೂ.. ಎಂದೆಂದೂ..
ಕಾಪಿಡುತ್ತಾಳೆ ಕನಸುಗಳನು,
ಮಾನಸದ ಕಾರುಣ್ಯತೆಯಲಿ.
ಹೊಗಳಿಕೆಯ ಆಸನದಿ ಅವಳೊಂದು ಸಂಕೋಚದ ಮುದ್ದೆ !
ದೃಢವಾಗುತ್ತಾಳೆ ಚಣ ಚಣದ ದುಡಿಮೆಯಿಂದ.
ಸ್ವಾರ್ಥಾಸೂಯೆಗಳ ಪದಗಳಿಗೆ ಅವಳಂತೂ ಬಹುದೂರ,
ಕಸ್ತೂರಿಯ ಗಂಧದಂತೆ ಅವಳ ಕಸುಬು.
ವ್ಯಾಖ್ಯಾನಿಸಿದಷ್ಟೂ ಹಿರಿದು ಅವಳೊಡಲ ಒಲವು,
ಬರಡಾಗದ ಮಮತೆಯದು, ಸದಾ ಸಮೃದ್ಧ.
ನಗುತ್ತಾಳೆ, ಅಳುತ್ತಾಳೆ..ಅವಳಿಚ್ಛೆಯಂತಲ್ಲ !
ಹೃದಯದಂಬಾರಿಯಲಿ ಮೆರೆಸುತ್ತಾಳೆನ್ನನು ಉಣಿಸಿ ಮಮತೆ ತುತ್ತು.
ಭಾವ ಪ್ರಪಂಚಕೆ ರೂವಾರಿ ಆಕೆ,
ಸದಾ ವಿಜಯಳು ಖಚಿತ, ಮಾತೃತ್ವದ ದಿಗ್ವಿಜಯದಲಿ.
ಅಂತರಂಗದ ತುಮುಲಗಳಿಗೆ ಸಂಜೀವನವದು ಅವಳ ಸೊಲ್ಲು.
ಹಿತವಾದ ನೇವರಿಕೆಯಲೇ ಮರೆಸುತ್ತಾಳೆ ಎಲ್ಲವನು.
ಸೆರೆಗ ತುದಿಯಲ್ಲಿ ಬಿಚ್ಚಿಟ್ಟ ತ್ರಾಸಗಳದೆಷ್ಟೋ ?
ಅವಳೇ ಬಲ್ಲಳು ಅವಳಿಟ್ಟ ಮಿತಿಗಳನು.
ವರ್ಷಿಸುತ್ತಾಳೆ ಪ್ರೀತಿಯನು..
ಮುಂಜಾನೆಯ ಉಷೆಯಂತೆ ಉಜ್ವಲವಾಗಿ.
ಬೆಳಗು ಬೈಗುಗಳ ಲೆಕ್ಕವಿಲ್ಲ ಆಕೆಗೆ..?
ನಸುಕಿನ ರವಿಯಂತೆ ದೇದೀಪ್ಯಮಾನ ಅವಳ ಸನಿಹ,
ನಿಶೆಯ ಬೆಳದಿಂಗಳಿನಂತೆ ಹಿತಕರ ಅವಳ ಅಕ್ಕಜದ ಸ್ಪರ್ಶ.
ನಯನ. ಜಿ. ಎಸ್.