ಅನ್ವೇಷಾ
ರಶ್ಮಿ ಕಬ್ಬಗಾರ
ಅನ್ವೇಷಾ
೧
ಮತ್ತೆ ಹೊಸದಾಗಿ
ನಿನ್ನ ಪ್ರೀತಿಸ ಬೇಕೆಂದಿದ್ದೇನೆ
ನೀ ನನ್ನ ಮಹತ್ವಾಕಾಂಕ್ಷೆಯೋ
ಹಳೇ ಪ್ರೇಮಿಯೋ
ಪತ್ತೆ ಮಾಡಬೇಕಿದೆ
೨
ಇಲ್ಲ
ಮತ್ತೆ ಮತ್ತೆ ನಿನ್ನ ಕಾಯಿಸುವ
ಇರಾದೆಯಿಲ್ಲ
ಸೀದ ಇಳಿದು
ಮನವೊಲಿದಲ್ಲಿ
ಮಳೆ ಕರೆದು
ಮೊಳೆವೆ
೩
ರಾಗ ರಂಜನೆ
ಧ್ಯಾನ ಸಾಧನೆಗೆಲ್ಲ
ವ್ಯವಧಾನವಿಲ್ಲೀಗ
ಇದು ಕವಿ ಹುಟ್ಟುವ
ಪದ ಪಾದ ನಾಭಿಯೊಳ್ ಮುಟ್ಟುವ
ಖುಷಿ ಋಷಿ ಮೊಟ್ಟೆಯೊಡೆದುಟ್ಟುವ ಮುಂಜಾವು
ಮತ್ತೀಗ
ಗಾಳಿಗೆ ಬೆಂಕಿ ಎದುರಾದಂತೆ
ಎದು ರಾಗಬೇಕಿದೆ ನಾವು .
*****