ಕಾವ್ಯ ದೀವಿಗೆ ಪುಸ್ತಕ ಅವಲೋಕನ

ಪುಸ್ತಕ ಸಂಗಾತಿ

ಕಾವ್ಯ ದೀವಿಗೆ ಪುಸ್ತಕ ಅವಲೋಕನ

ಉದಯೋನ್ಮುಖ ಕವಿಗಳ ಭಾವಾಭಿವ್ಯಕ್ತಿ ಕಾವ್ಯ ದೀವಿಗೆ


-ಗೊರೂರು ಅನಂತರಾಜು, ಹಾಸನ.


ಹಾಸನದ ಸ್ಫಂದನ ಸಿರಿ ಪ್ರಕಾಶನ ಕಾವ್ಯ ದೀವಿಗೆ ಕವನ ಸಂಕಲನ ಪ್ರಕಟಿಸಿದೆ. ಶ್ರೀಮತಿ ಕಲಾವತಿ ಮಧುಸೂಧನ್ ಸಾರಥ್ಯದ ಸ್ಫಂದನ ಸಿರಿ ವೇದಿಕೆಯ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜೂನ್ ೨೭ರಂದು ಹಾಸನದಲ್ಲಿ ಬಿಡುಗಡೆಯಾಗುತ್ತಿದೆ. ವರುಣ್‌ರಾಜ್‌ ಜಿ. ಮತ್ತು ಧನುಷ್‌ಎಚ್ ಶೇಖರ್‌ ಅವರ ಸಂಪಾದಕತ್ವದ ಹೊಸ ತಲೆಮಾರಿನ ಉದಯೋನ್ಮುಖ ಕವಿಗಳ ೬೨ ಕವಿತೆಗಳು ಸಂಕಲನದಲ್ಲಿವೆ. ಹೊಸಬರ ಬಹುತೇಕ ಚೊಚ್ಚಲ ಕವನಗಳು ಕಾವ್ಯ ತತ್ವದ ದೃಷ್ಟಿಯಿಂದಷ್ಟೇ ಅಲ್ಲ ಕಾಗುಣಿತಾದಿ ಪ್ರಾಥಮಿಕ ಭಾಷಾ ಬಳಕೆಯ ದೃಷ್ಟಿಯಿಂದಲೂ ಹತ್ತು ಹಲವು ದೋಷಗಳಿಂದ ಕೂಡಿರುತ್ತವೆ.  ಆ ಎಲ್ಲವನ್ನು ತಾಳ್ಮೆಯಿಂದ ಅವಲೋಕಿಸಿ ಆಯಾ ಕವಿಗಳ ನಿರಂತರ ಸಂಪರ್ಕದಲ್ಲಿ ಕವನಗಳನ್ನು ಭಾಷೆ ದೃಷ್ಟಿಯಲ್ಲಿ ಒಪ್ಪ ಓರಣಗೊಳಿಸಿ ಪ್ರಕಟಿಸುವ ಸಾಹಸ ಸಂಪಾದಕರದು. ಇದು ಸಾಹಿತ್ಯವನ್ನು ಕುರಿತು ಮೇಲಾಗಿ ಮನುಷ್ಯರು ಮತ್ತು ಅವರ ಬದುಕನ್ನು ಕುರಿತು ಆರ್ದ್ರ ಆಧ್ಯಾತ್ಮಿಕ ಪ್ರೀತಿಯಿದ್ದರಷ್ಟೇ ಸಾಧ್ಯ, ಆತ್ಮತೃಪ್ತಿಯನ್ನು ಹೊರತುಪಡಿಸಿ ಇನ್ಯಾವ ಲಾಭವನ್ನೂ ಇಂಥ ಸಂಪಾದನ ಕೆಲಸ ನೀಡುವುದಿಲ್ಲ ಎಂಬ ಅಮರ್ ಬಿ. ಮಾತು ಒಪ್ಪತಕ್ಕದ್ದೇ. ಇಂತಹ ಅನುಭವ ನನಗೂ ಆಗಿದೆ. ೧೯೮೫ರಲ್ಲಿ ನಾನು ರಾಜ್ಯಾದ್ಯಂತ ನೂರು ಕವಿಗಳಿಂದ ನೂರು ಕವನಗಳನ್ನು ಸಂಗ್ರಹಿಸಿ ಸಮ್ಮಿಲನ ಕೃತಿ ಪ್ರಕಟಿಸಿ ಯಾರೂ ದಿಡೀರ್‌ ಎಂದು ಲೇಖಕರಾಗುವುದಿಲ್ಲ ಬರೆಯುತ್ತಾ ಬೆಳೆಯುತ್ತಾ ಲೇಖಕರಾಗುವುದು ಅಸಾಧ್ಯವೇನಲ್ಲ ಎಂದು ಸಂಪಾದಕೀಯದಲ್ಲಿ ಬರೆದು ಅದನ್ನು ಅರಗಿಸಿಕೊಳ್ಳಲು ಇಂದಿಗೂ ಕಾವ್ಯ ಕೃಷಿಯಲ್ಲಿ ಪ್ರಯೋಗಶೀಲನು.ಇರಲಿ ಕಾವ್ಯ ದೀವಿಗೆಯ ತುಳಸಿದಾಸ ಸಿಂಧನೂರರ ಇರಲಿ ಬಿಡಿ ಕವಿತೆ ನೋಡಿ.
ಇರಲಿ ಬಿಡಿ ಇದ್ದಂತೆ ಕಾರಿರುಳ ಕಾಡಂತೆ
ಮೋರಿಯೊಳಗಿನ ಹಂದಿ ನಾರುವಂತೆ..
ಉರಿಯಲಿ ಬಿಡಿ ಉರಿದಂತೆ ಮರ ಬೂದಿಯಾದಂತೆ
ಜರಿದು ಸಾಯಲಿ ಬಿಡಿ ಹೊರಡುವ ಕರಿಯಂತೆ

ಪ್ರತಿಯೊಬ್ಬ ಕವಿಯೂ ತಾನು ತನಗೆ ಕಟ್ಟಿಕೊಳ್ಳುವ ಏಕಾಂತದಲ್ಲಿ ಅಂತರಂಗದ ಕಿಡಿಯ ಪಿಸು ನುಡಿಯ ಮಿಂಚನ್ನು ಹಿಡಿದು ಕವಿತೆ ಕಟ್ಟುತ್ತಾನೆ. ಧನುಷ್‌ಎಚ್.ಶೇಖರ್‌ ಅವರ ಕವಿತೆ:
ಈಗೀಗ ನಾನು ಮೋಡಕವಿದ ಬಾನಿನಲ್ಲಿ
ತಾರೆಗಳ ಲೆಕ್ಕಾಚಾರ ನಡೆಸುತ್ತಿಲ್ಲ
ಮೌನವಾಗಿ ಕುಳಿತು ಹಳೆಯ ಹಾಡೊಂದನು ಗುನುಗುತ್ತಿಲ್ಲ
ನಿನ್ನೆ ನಡೆದ ಯುದ್ಧದಲ್ಲಿ ಸತ್ತವರ ಸಂತಾಪಕ್ಕೆಕರಗುತ್ತಿಲ್ಲ
ನಿತ್ಯ ಸಾಯುವವರಿಗೆ ಸಂತಾಪದ ಹಂಗಿಲ್ಲ ಬಿಡಿ.
.
ಕವಿತೆಯು ಒಳ್ಳೆಯದು, ಸಮರ್ಥವಾದದ್ದು ಎಂದೆನಿಸಿಕೊಳ್ಳಲು ಅದರ ವಸ್ತು ಹೊರರೂಪ ಪ್ರಾಸ ರೂಪಕಾದಿ ಅಲಂಕಾರಗಳಿಗಿಂತ ಅದರ ಧ್ವನಿ ಶಕ್ತಿಯೇ ಮುಖ್ಯ ಎಂದಿರುವ ಅಮರ್ ಪ್ರಸಿದ್ಧರ ಗದ್ಯ ಸಾಹಿತ್ಯ ಪದ್ಯಗಳ ಜೊತೆ ಹೋಲಿಸಿ ಮುನ್ನುಡಿಯಲ್ಲಿ ಕಾವ್ಯ  ವಿಮರ್ಶೆ ಮಾಡಿದ್ದಾರೆ.ಕವಿತೆ ಎಂದರೇನೆ ಕವಿಯೋದು. ಒಳಗೆ ಹೊರಗೆ ಅನುರಣಿಸುತ್ತ ವ್ಯಾಪಿಸಿಕೊಳ್ಳುವುದು. ಯಾರೋ ಬರೆದ ಕವಿತೆ ನಮ್ಮದೂ ಅನುಭವ ಅಂದಾಗ ಅದಕ್ಕೆ ಒಂದು ವ್ಯಾಪಕತೆ ಸಿಕ್ಕಿ ಭಾವ ಸಾರ್ವತ್ರಿಕಗೊಳ್ಳುವುದು ಎಂಬ ದೇವರಾಜ ಅವರ ಅಭಿಪ್ರಾಯ ಸೂಕ್ತವಾಗಿದೆ.
ನಿನ್ನೊಳಗಿನ ಗುಣ ನೀ ಹುಡುಕಿಕೋ
ದುರ್ಗಣಗಳ ಹುಡ್ಕಕ ಜನ ಇದ್ದಾರಲ್ಲ..

ಹೌದಲ್ಲ..!ನಮ್ಮ ಸದ್ಗುಣ ದುರ್ಗಣಗಳನ್ನು ಹುಡುಕಲ್ಲಿಕ್ಕೆ ನಮ್ಮ ಸುತ್ತಲೂ ಜನ ಇದ್ದೆ ಇದ್ದಾರಲ್ಲ..! ಕವನಗಳ ಎಲ್ಲಾ ಸಾಲುಗಳನ್ನು ಓದಿ ಅರ್ಥೈಸಬೇಕಿಲ್ಲ. ಕವನಗಳ ನಡುವೆ ಇಂತಹ ಒಂದೆರಡು ಸಾಲುಗಳು ಕವನವನ್ನು ಮೆಚ್ಚುವಂತೆ ಮಾಡುತ್ತವೆ.
 ಗಂಗಾಧರ ಬಾಣಸಂದ್ರರ
ಕ್ಷಮಿಸು ಬಿಡು ಕಂದ ನನ್ನೊಮ್ಮೆ ನೀ ಕಣ್ಣುತೆರೆಯುವ ಮುನ್ನ
ಮನುಷ್ಯತ್ವವಿಲ್ಲದ ನನ್ನ ನೀ
ಬರುವ ಮೊದಲೇ
ನಿನಗೊಂದು ಕಾರಾಗೃಹ ಕಾದಿದೆ ನೀ ಹೆಣ್ಣೋ ಗಂಡೋ ಗೊತ್ತಿಲ್ಲ
ಆದರೂ ಸಿದ್ಧವಾಗಿ ನಿಂತಿದೆ ಜಾತಿ ಹಣೆಪಟ್ಟಿಯೊಂದು
..
ಇಂದು ಮೆರೆಯುತ್ತಿರುವ ಜಾತಿ ಮೇಲಾಟ ರಾಜಕೀಯ ಕಾದಾಟಗಳ ಸಂಘರ್ಷದಲ್ಲಿ ಕವಿತೆ  ಸಮಾಜಮುಖಿ ಚಿಂತನೆಯಾಗಿದೆ. ಗದ್ಯ ಸಾಹಿತ್ಯದಲ್ಲಿ ಪುಟಗಟ್ಟಲೇ ಬರೆಯಬಹುದಾಗಿ ಕಾವ್ಯ  ಕೆಲವೇ ಸಾಲುಗಳಲ್ಲಿ  ಶಶಕ್ತವಾಗಿ ಕಟ್ಟಿಕೊಡುತ್ತದೆ.
ದೀಪಕಾ ಮರಳೂರರ ಕವಿತೆ:
ಅವಳು ಒಂದು ಹೆಣ್ಣಲ್ಲವೇ ಅವಳಿಗೂ ಮನಸ್ಸಿಲ್ಲವೇ
ಭಾವನೆಗಳ ಕಿತ್ತೆಸೆದು ಕೊಂದು ಬಿಟ್ಟರು
ಸುಟ್ರು ಅವಳ ಅಂತರಂಗವನ್ನ
ಸಾಧನೆಯ ಮನೋಭಾವವನ್ನೇ ಕಸಿದುಬಿಟ್ಟರು..

ಒಂದುಕವಿತೆ ನಾನಾ ಅರ್ಥಗಳಲ್ಲಿ ಧ್ವನಿಸುತ್ತದೆ. ಅದರ ಗೂಢರ್ಥ ಭಾವರ್ಥಗಳನ್ನು ನಾವು ನಮ್ಮ ವಿಚಾರಕ್ಕೆ ಅನ್ವಯಿಸಿ ವ್ಯಾಖ್ಯಾನಿಸುವುದಕ್ಕಿಂತ ಓದುಗರ ಅರ್ಥೈಸುವಿಕೆಗೆ ಬಿಡುವುದೇ ಸೂಕ್ತ. ಈ ಕೃತಿ ವಿಚಾರ ಮಂಟಪ ಬಳಗದ ಹೊಸ ತಲೆಮಾರಿನ ಕವಿಗಳ ಸಂಪಾದಿತ ಕವನ ಸಂಕಲನ. ಕಾಲ ಮುಂದುವರೆದಂತೆ ಅಭಿವ್ಯಕ್ತಿಯ ಮಾಧ್ಯಮವು ಬದಲಾಗುತ್ತಿದೆ. ನಮ್ಮ ಕಾಲಘಟ್ಟದಲ್ಲಿ ನಮ್ಮ ಕವಿತೆ ಬರಹಗಳು ಪತ್ರಿಕೆಗಳ ಮೂಲಕವೇ ಓದುಗರಿಗೆ ತಲುಪಬೇಕಿತ್ತು. ಇಂದು ವ್ಯಾಟ್ಸಪ್ ಫೇಸ್‌ಬುಕ್, ಯೂ ಟ್ಯೂಬ್‌ಗಳು ಮೊದಲಾಗಿ ಅಭಿವ್ಯಕ್ತಿಗೆ  ಅವಕಾಶ ತೆರೆದಿಟ್ಟಿವೆ. ಈ ದಿಶೆಯಲ್ಲಿ ವಿಚಾರ ಮಂಟಪ ಬಳಗ ಕಲಿಕೆಯಲ್ಲಿ ಆಸಕ್ತಿ ಇರುವ ಕಿರಿಯರಿಗೆ ಸೂಕ್ತ ವೇದಿಕೆಯಾಗಿ ಹೊಸ ಓದು ಬರಹಗಳಿಗೆ ಪ್ರೋತ್ಸಾಹಿಸಿದೆ. ಚಂದನ್‌ ಗುರುತಿಸಿದಂತೆ ಇಲ್ಲಿನ ಕವನಗಳು ಮೈ ಮನಗಳ ತುಮುಲಗಳಿಂದ ಹಿಡಿದು ಸಮಕಾಲೀನ ಸಾಮಾಜಿಕ ರಾಜಕೀಯ ವಿದ್ಯಮಾನಗಳವರೆಗಿನ ಹತ್ತು ಹಲವು ವಿಚಾರಗಳಿಗೆ ಪ್ರತಿಕ್ರಿಯಿಸಿದೆ. ಪ್ರಾಥಮಿಕ ಬರಹಗಳಿಂದ ಹಿಡಿದು ಹಲವು ಸೂಕ್ಷ್ಮ ಹಾಗೂ ಸಂವೇದನಾಶೀಲ ಕವನಗಳನ್ನೂ ಒಳಗೊಂಡಿದೆ. ಓದುಗರಿಗೆ ಹಲವು ಭಾವ ಜಗತ್ತಿನ ದರ್ಶನ ಮಾಡಿಸಿದೆ.
ಈಗೀಗ ನಾನು ನಿನ್ನ ಮುನಿಸಿಗೆ ತಪ್ಪೊಪ್ಪಿಗೆಯ
ಅಹವಾಲು ಪತ್ರಕ್ಕೆ ಸಹಿ ಹಾಕುತ್ತಿಲ್ಲ
ಅನು ದಿನವೂ ತಿದ್ದಿ ತೀಡಿ ತೋಚಿದ್ದ
ಗೀಚುತ್ತಿದ್ದ ಎರಡು ಸಾಲನ್ನು ಲೇಖನಿ ಮುಂದುವರಿಸುತ್ತಿಲ್ಲ..
————————–


ಗೊರೂರು ಅನಂತರಾಜು

Leave a Reply

Back To Top