ಇಳೆಯ ಸ್ವಗತ-ಮಂಜುಳಾ ಪ್ರಸಾದ್

ಕಾವ್ಯ ಸಂಗಾತಿ

ಮಂಜುಳಾ ಪ್ರಸಾದ್

ಇಳಯ ಸ್ವಗತ

ಎನ್ನ ತೊಯ್ದು ತಂಪಾಗಿಸು
ಓ ಮೇಘವೇ,
ಈ ಮುನಿಸು ತರವೇ?
ಬಾಡಿ ಬಸವಳಿದ ಎನಗೆ
ನೀ ಹರಿಸು ವರ್ಷಧಾರೆ,
ಬಾ ಮೇಘವೇ ಧರೆಗಿಳಿದು ಬಾ,
ತುಸು ಇಣುಕಿ ಆಚೆ ಮರೆಯಾದೆ ಏತಕೆ?
ಎನ್ನೊಡಲ ಗರ್ಭದ ಚಿಗುರನುಳಿಸಿ
ಬೆಳೆಸು ಬಾ ಒಲವೇ..
ವಿರಸದುರಿಯ ಬೇಗೆಯಲಿ ಬಳಲಿ
ಸೋತೆ ನಾನೀಗಲೇ..
ಹನಿಹನಿಯ ಸಿಂಚನ!
ಬೀಳಲು ಮೈ ರೋಮಾಂಚನ!
ಕಾದ ಬಿಸಿಲಿಗೆ ತಂಪಿನ ಆಲಿಂಗನ!
ಕನಸಾಗದೇ ನನಸಾಗಲಿ
ಈ ಒಲವ ಬಂಧನ!
ಕಾದಿರುವೆ ನಿನಗಾಗಿ,
ನಿನ್ನೊಲವ ಕರೆಗಾಗಿ,
ಬತ್ತಿದೆದೆಯಲಿ ಭಾವ ಮಳೆ ಸುರಿಸು,
ಚಿಗುರು ಕೊನರಿಸಿ,
ಮೈಯ ಹಗುರಾಗಿಸು,
ಬಾಬಾರೋ ಇಳಿದು ಬಾ,
ಓ ಮೇಘರಾಜನೇ ..
ಧರೆಗವತರಿಸು ಮರೆಗೆ ಸರಿಯದೇ,
ಕಣ್ಣಾ ಮುಚ್ಚಾಲೆ ಆಡದೇ,
ಬಣ್ಣ ಹಚ್ಚುವ ಜನರ ತಪ್ಪಿಗೆ ಕ್ಷಮೆಯಾಗಿ,
ಬರಗಾಲದ ಸೂಚಕವ ಕೊನೆಯಾಗಿಸಿ,
ಮತ್ತೆ ಅವತರಿಸು ಬಾ..
ಮತ್ತೆ ಸಂತೈಸು ಬಾ..
ಮತ್ತೆ ತಂಪಾಗಿಸು ಬಾ..


ಮಂಜುಳಾ ಪ್ರಸಾದ್

2 thoughts on “ಇಳೆಯ ಸ್ವಗತ-ಮಂಜುಳಾ ಪ್ರಸಾದ್

Leave a Reply

Back To Top