ನೀನಿಲ್ಲದ ಪಯಣ-ಇಂದಿರಾ ಮೋಟೆಬೆನ್ನೂರ.

ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರ.

ನೀನಿಲ್ಲದ ಪಯಣ

ನಿಮ್ಮೂರಿನ ಹಾದಿಯಲಿ
ನಾನಿಂದು…..
ತಿರುವಿನಲ್ಲಿ ತಿರುಗೊಮ್ಮೆ ನೋಡಿ
ಮುನ್ನಡೆದೆ…ಇಂದು
ನಿನ್ನ ನಗುವಿನ ಅಲೆಗಳ
ಹೊತ್ತು ತಂದಿತು ಪವನ..
ನಿನ್ನ ಮಾತಿನ ಕಲ ಕಲ ತೇಲಿಬಂತು
ನಿನ್ನಿರುವ ಸಾರುವ…ಕವನ ದವನ
ಮೊಳಕೆ ಪರಿಮಳ ಅರಳು..
ಹೂ ಬಳ್ಳಿ ಚಿಗುರ ಕರುಳು….

ತಿರುವಿನಲ್ಲಿ ತಿರುಗದೆ ನಡೆದು
ನಾ ಮುಂದೆ ಬಿಡುತ ನಿಟ್ಟುಸಿರು…
ಅದೇ ಗುಲ್ ಮೊಹರ್ ಕೆಂಪಿನ ಹಾಸು….
ಅದೇ ಉಸುರುವ ಹಸಿರ ಚಾಮರ ಬೀಸು…
ಅದೇ ಹಾದಿ…ಅದೇ ಹೊಲದ ಬದುವು.
ಆದರೆ ನೀನಿಲ್ಲದ ಪಯಣ ಇಂದು..

ಜೊತೆಗಿಲ್ಲದ ಒಂಟಿ ಪಯಣವಿಂದು
ಎಲ್ಲವೂ ಭಣ ಭಣ….
ಅದೇ ನಿಲ್ದಾಣ..ಅದೇ ಶಾಂತಿ ತಂಗುದಾಣ
ನೀನಿಲ್ಲದ ಪಯಣ….
ನಿಮ್ಮೂರಿನ ಹಾದಿಯಲಿ…

ಅದೇ ಸೂರ್ಯಪಾನದ ಹೂವಿನ
ಹೊಲದ ಸೊಬಗು….
ಅದೇ ಬೀದಿಯ ದೇವಿಯ ಗುಡಿಯು…
ಅದೇ ಸೂರ್ಯರಶ್ಮಿಯ ಬೆಡಗು…
ಎಲ್ಲವೂ ಅದೇ…ಆದರೆ ನೀನಿಲ್ಲದ
ನೀರಸ ಪಯಣವಿಂದು…..
ನೀ ಜೊತೆಯಿಲ್ಲದ ಪಯಣವು….
ನಿನ್ನೂರಿನ ಹಾದಿಯಲಿ ನಾನಿಂದು…

—————————————-

ಇಂದಿರಾ ಮೋಟೆಬೆನ್ನೂರ.

Leave a Reply

Back To Top