ಹೃದಯ ತಂತಿ ಮೀಟಿದೆ-ಸುಧಾ ಪಾಟೀಲ

ಕಾವ್ಯ ಸಂಗಾತಿ

ಸುಧಾ ಪಾಟೀಲ

ಹೃದಯ ತಂತಿ ಮೀಟಿದೆ

ಭಾವದರಮನೆಯಲ್ಲಿ
ಕಚಗುಳಿಯಿಟ್ಟು ನೀ
ಮೋಡಿ ಮಾಡಿ ಮಾಯವಾಗಿ
ಒಲವ ಉಕ್ಕಿ ಹೊನಲಾಗಿ
ಹರಿದು ಹೃದಯ ತಂತಿ
ಮೀಟಿದೆ

ಪ್ರೀತಿಯ ಸೆಲೆಯಲ್ಲಿ ನೀ
ಹೊನ್ನ ಗಿಂಡಿಯ ಹಿಡಿದು
ಅಮೃತದ ಸಿಂಚನ ಮಾಡಿ
ಭರವಸೆಯ ಬೆಳಕು ಮೂಡಿಸಿ
ನಿಂತಾಗ ಹೃದಯ ತಂತಿ
ಮೀಟಿದೆ

ಹುಲ್ಲ ಹಾಸಿಗೆಯ ಮೇಲೆ
ಇಬ್ಬನಿ ಮೂಡಿ ಹಸಿರು
ಉಕ್ಕಿ ನಿಂತಾಗ ನೀ
ನವಿರಾದ ಮುಗುಳ್ನಗೆ
ಬೀರಿ ಹೃದಯ ತಂತಿ
ಮೀಟಿದೆ

ಕ್ಷಣ ಕ್ಷಣಕ್ಕೂ ಉಕ್ಕಿ
ಹರಿಯುವ ಸ್ನೇಹ ಸಾಗರದಿ
ತೇಲಿ ಅಲೆಗಳ ಉಯ್ಯಾಲೆಯಲಿ
ಮಿಂದು ಹಗುರಾಗಿ
ಹೃದಯ ತಂತಿ ಮೀಟಿದೆ

ಹೊತ್ತು ಗೊತ್ತಿನ ಪರಿವೆಯ
ಮೀರಿ ಎಲ್ಲವನೂ ಮೀರಿದ
ಅನುಭಾವದ ಸುಖವ ಹೊದ್ದು
ತೃಪ್ತಿಯ ಪದಕಮಲದಲಿ
ಹೃದಯ ತಂತಿ ಮೀಟಿದೆ

ಬಾಳ ಬೆಳಕಿನ ಬುತ್ತಿಯಲಿ
ಹಂಚಿಕೊಂಡು ಉಣ್ಣಲು
ಸಮಾಧಾನದ ಬೆಳಕು
ಉದಯಿಸಿ ಒಡಲೆಲ್ಲ ತಂಪು
ಮೂಡಿ ಹೃದಯ ತಂತಿ ಮೀಟಿದೆ


5 thoughts on “ಹೃದಯ ತಂತಿ ಮೀಟಿದೆ-ಸುಧಾ ಪಾಟೀಲ

  1. ಧನ್ಯವಾದಗಳು ಸರ್… ತಾವು ಓದಿ ಪ್ರತಿಕ್ರಿಯೆ ನೀಡಿದ್ದಕ್ಕೆ

Leave a Reply

Back To Top