ಪ್ರಸ್ತುತ

ಮೈಕ್ರೋವೈಟಾ ಸಿದ್ಧಾಂತ ಮತ್ತು ವೈರಸ್ ನಿಯಂತ್ರಣ

ಗಣೇಶ್ ಭಟ್,ಶಿರಸಿ

ಮೈಕ್ರೋವೈಟಾ ಸಿದ್ಧಾಂತ ಮತ್ತು ವೈರಸ್ ನಿಯಂತ್ರಣ

ಒಂದು ಚಿಕ್ಕ ವೈರಾಣು ಜಗತ್ತನ್ನು ನಡುಗಿಸುತ್ತಿದೆ. ಪ್ರಕೃತಿಯನ್ನು ಜಯಿಸಿದ್ದೇನೆಂಬ ಮಾನವನ ಅಹಂಕಾರದ ಗುಳ್ಳೆಯನ್ನು ಒಡೆದಿದೆ. ಬಡವ, ಶ್ರೀಮಂತ, ಜಾತಿ, ಮತಗಳೆಂಬ ಮಾನವ ನಿರ್ಮಿತ ಕೃತಕ ಗೋಡೆಗಳು ವೈರಾಣುವಿನ ಅಬ್ಬರಕ್ಕೆ ನೆಲಕಚ್ಚಿವೆ. ಒಂದು ಶತಮಾನದ ಹಿಂದೆ ಮಾನವ ಕುಲವನ್ನು ಇನ್ಫ್ಲುಯೆಂಝಾ ರೋಗದ ಮೂಲಕ ಮಣಿಸಿದ್ದ ವೈರಾಣು ಕಲಿಸಿದ ಪಾಠವನ್ನು ಮರೆತಿದ್ದರಿಂದ ಬಹುಶಃ ಕಳೆದ ಎರಡು ದಶಕಗಳಿಂದೀಚೆಗೆ ಹೊಸ ಹೊಸ ರೂಪ ತಾಳಿ ವೈರಾಣು ದಾಳಿ ಇಡುತ್ತಿದೆ. ಸಾರ್ಸ್, ಎಬೋಲಾ, ಹಕ್ಕಿಜ್ವರ, ಹಂದಿಜ್ವರ, ಡೆಂಗ್ಯೂ, ಚಿಕನ್ಗುನ್ಯಾ ಇತ್ಯಾದಿ ರೋಗಗಳ ನಂತರ ಈಗ ಕೊರೊನಾ.
ವೈರಸ್ನ ಒಂದು ರೂಪವನ್ನು ನಿಯಂತ್ರಿಸಿದ್ದೇವೆಂದು ಹೆಮ್ಮೆಪಡುವಷ್ಟರಲ್ಲಿ ಮತ್ತೊಂದು ಪ್ರಭೇದ ಕಾಣಿಸಿಕೊಳ್ಳುತ್ತಿದೆ. ರಾಜ್ಯಗಳ ನಡುವಿನ ಗಡಿ, ದೇಶಗಳ ನಡುವಿನ ಅಂತಾರಾಷ್ಟ್ರೀಯ ಗಡಿರೇಖೆಗಳು ಮಾನವರ ಓಡಾಟವನ್ನು ನಿಯಂತ್ರಿಸಬಹುದೇ ಹೊರತು ವೈರಾಣುಗಳ ಚಲನೆಯನ್ನಲ್ಲ. ಕೊರೊನಾ ವೈರಸ್ ಚೀನಾದಿಂದ ಹಬ್ಬಿತು ಎಂದು ಹೇಳಲಾಗುತ್ತದೆ. ಅಲ್ಲಿಯ ಬಾವಲಿಗಳಲ್ಲಿ ಈ ವೈರಸ್ ಇತ್ತು, ಮಾನವನ ದೇಹದಲ್ಲಿ ಸೇರಿಕೊಂಡ ನಂತರ ಅದರ ಪ್ರಕೋಪ ಹೆಚ್ಚಾಯಿತೆಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಬಾವಲಿಯಲ್ಲಿ ಎಂದಿನಿಂದ ಈ ವೈರಸ್ ಇತ್ತು? ಎಲ್ಲಿಂದ ಬಂತು? ಯಾಕೆ ಬಂತು ಇತ್ಯಾದಿಗಳಿಗೆ ಉತ್ತರ ಸಿಗುತ್ತಿಲ್ಲ. ಇಷ್ಟಾಗಿಯೂ ಈ ವೈರಸ್ಗಳಿಗೆ ಜೀವ ಇದೆಯೇ? ಪೃಥ್ವಿಯ ಮೇಲೆ ವಿಕಾಸಹೊಂದಿರುವ ಜೀವಜಾಲದಲ್ಲಿ ವೈರಸ್ನ ಸ್ಥಾನ ಎಲ್ಲಿ ಎಂಬುದಕ್ಕೆ ಇನ್ನೂ ಉತ್ತರ ಕಂಡುಕೊಳ್ಳಬೇಕಿದೆ. ಬರಿಗಣ್ಣಿಗೆ ಕಾಣಿಸದ ವೈರಸ್ಗಳು ಏಕಕೋಶ ಜೀವಿಗಳೇ ಅಥವಾ ಬರೀ ಪ್ರೋಟೀನ್ ಕಣಗಳೇ ಎಂಬ ಕುರಿತು ಚರ್ಚೆ ನಡೆದೇ ಇದೆ. ಇಂತಹ ಹಲವು ಪ್ರಶ್ನೆಗಳಿಗೆ ಉತ್ತರವನ್ನು ಮೈಕ್ರೋವೈಟಾ ಸಿದ್ಧಾಂತ ನೀಡುತ್ತದೆ.


ದಾರ್ಶನಿಕ ಶ್ರೀ ಪ್ರಭಾತರಂಜನ್ ಸರ್ಕಾರರು ೧೯೮೬ರ ಡಿಸೆಂಬರ್ ೩೧ರಂದು ತಮ್ಮ ಪ್ರವಚನದಲ್ಲಿ ‘ಮೈಕ್ರೋವೈಟಮ್-ದಿ ಮಿಸ್ಟೀರಿಯಸ್ ಎಮನೇಶನ್ ಆಫ್ ಕೋಸ್ಮಿಕ್ ಫ್ಯಾಕ್ಟರ್’ (microvitum- The mysterious emanation of cosmic factor) ಅಂದರೆ ವಿಶ್ವಶಕ್ತಿಯ ನಿಗೂಢ ಉದ್ಭವ-ಮೈಕ್ರೋವೈಟಮ್ ಎಂಬ ವೈಜ್ಞಾನಿಕ ವಿಷಯವನ್ನು ಪ್ರಥಮ ಬಾರಿಗೆ ಪ್ರಸ್ತುತಪಡಿಸಿ, ನಂತರದ ಹಲವಾರು ಪ್ರವಚನಗಳಲ್ಲಿ ಇನ್ನಷ್ಟು ವಿವರ ನೀಡಿದರು. ಅಣು, ಪರಮಾಣುಗಳೇ ಅತೀ ಚಿಕ್ಕ ಅಸ್ತಿತ್ವವೆಂದು ಮೊದಲು ನಂಬಲಾಗಿತ್ತು. ಪ್ರೋಟಾನ್, ಇಲೆಕ್ಟ್ರಾನ್, ನ್ಯೂಟ್ರಾನ್ಗಳು ಅಣುವಿಗಿಂತ ಸೂಕ್ಷ್ಮವೆಂದು ಈಗ ಹೇಳಲಾಗುತ್ತದೆ. ಇವುಗಳಿಗಿಂತ ಸೂಕ್ಷ್ಮವಾದ ಅಸ್ತಿತ್ವ, ಭೌತಿಕ ಮತ್ತು ಮಾನಸಿಕ ಸ್ತರಗಳಲ್ಲಿ ಇರುವ ಅಸ್ತಿತ್ವವನ್ನು ‘ಮೈಕ್ರೋವೈಟಮ್’ ಎಂದು ಹೆಸರಿಸಿದ ಶ್ರೀ ಸರ್ಕಾರರು, ಅದರ ಬಹುವಚನ ಶಬ್ದವಾಗಿ ಮೈಕ್ರೊವೈಟಾ ಎಂಬ ಪದವನ್ನು ಬಳಸಿದರು.


ಮೈಕ್ರೊವೈಟಾವು ಭೌತಿಕ ಸ್ತರದ ಎಲೆಕ್ಟ್ರಾನ್ ಅಲ್ಲ, ಜೀವಕೋಶದ ಬಾಹ್ಯದ್ರವವೂ (ectoplasm) ಅಲ್ಲ. ಇವೆರಡರ ನಡುವಿನ ಸ್ಥಾನ ಅವುಗಳದ್ದು. ಅವಕ್ಕೆ ಜೀವ ಇದ್ದರೂ ಕೂಡ ಅವು ಏಕಕೋಶ ಜೀವಿಗಳೂ (protozoic) ಅಲ್ಲ. ಅಥವಾ ಜೀವಕೋಶಗಳು ಅಂಗಗಳಾಗಿ ವಿಂಗಡಣೆಗೊಳ್ಳುವಂಥವೂ (metazoic) ಅಲ್ಲ. ಜೀವೋದ್ಭವವಾಗಲು ಇಂಗಾಲದ ಕಣ ಇರಲೇಬೇಕೆನ್ನುವ ನಿಯಮ ಅವುಗಳಿಗೆ ಅನ್ವಯವಾಗದು. ಬದಲಿಗೆ ಲಕ್ಷಾಂತರ ಮೈಕ್ರೋವೈಟಾಗಳು ಸೇರಿ ಇಂಗಾಲದ ಅಣುವಿನ ಸೃಷ್ಟಿಯಾಗುತ್ತದೆ.
ಮೈಕ್ರೋವೈಟಾಗಳ ಅಸ್ತಿತ್ವವನ್ನು ಅರಿಯಲು ಮಾನವನಿಗೆ ಸಾಧ್ಯವಿದೆ. ಆದರೆ ಅವುಗಳ ಉತ್ಪತ್ತಿಯ ಮೂಲ ಕಾರಣವನ್ನು ಕಂಡುಕೊಳ್ಳುವುದು, ಅವುಗಳನ್ನು ಸೃಷ್ಟಿಸುವುದು ಮಾನವನಿಗೆ ಸಾಧ್ಯವಾಗದು. ಆ ಕಾರಣಕ್ಕಾಗಿಯೇ ಮೈಕ್ರೋವೈಟಾವನ್ನು ವಿಶ್ವಶಕ್ತಿಯ ನಿಗೂಢ ಉದ್ಬವವೆಂದು ಶ್ರೀ ಸರ್ಕಾರರು ಹೇಳುತ್ತಾರೆ.
ಮೈಕ್ರೋವೈಟಾಗಳ ಸೂಕ್ಷ್ಮತೆಯನ್ನು ಮೂರು ಹಂತಗಳಲ್ಲಿ ಗುರುತಿಸಲಾಗಿದೆ. ಮೊದಲನೆಯ ಹಂತವೆಂದರೆ ಬರಿಗಣ್ಣಿಗೆ ಕಾಣದ ಆದರೆ ಶಕ್ತಿಯುತ ಸೂಕ್ಷ್ಮದರ್ಶಕಗಳ (ಮೈಕ್ರೊಸ್ಕೋಪ್) ಮೂಲಕ ನೋಡಬಹುದಾದವು. ಇವುಗಳನ್ನು ವೈರಸ್ಗಳೆಂದು ಹೇಳಲಾಗುತ್ತದೆ. ವೈರಸ್ ಎಂಬ ಪದವು ಸ್ಪಷ್ಟತೆಯನ್ನು ಹೊಂದಿಲ್ಲದ ಕಾರಣಕ್ಕಾಗಿ ಮೈಕ್ರೋವೈಟಾ ಎಂಬ ಪದವನ್ನು ಬಳಸುವುದು ಸೂಕ್ತವೆಂಬುದು ಶ್ರೀ ಸರ್ಕಾರರ ಅಭಿಪ್ರಾಯ.
ಎರಡನೆಯ ಹಂತದ ಮೈಕ್ರೋವೈಟಾಗಳು ಕಾರ್ಯವೈಖರಿ ಅಥವಾ ಅವು ಉಂಟುಮಾಡುವ ಪರಿಣಾಮದಿಂದಾಗಿ ಮಾನವನ ಗ್ರಹಿಕೆಗೆ ಬರುವಂಥವು ಅಂದರೆ ಅನುಭವ ವೇದ್ಯವಾಗುವಂಥವು.
ಮೂರನೆಯ ಹಂತದ ಅತಿ ಸೂಕ್ಷ್ಮ ಮೈಕ್ರೋವೈಟಾಗಳು ಕೂಡ ಮಾನವನ ಗ್ರಹಿಕೆಯ ವ್ಯಾಪ್ತಿಯಲ್ಲೇ ಇರುತ್ತವಾದರೂ ಅದಕ್ಕಾಗಿ ವಿಶೇಷ ಅರಿವಿನ ಅಗತ್ಯವಿರುತ್ತದೆ. ಆಧ್ಯಾತ್ಮ ಸಾಧನೆಯಿಂದ ಮನಸ್ಸನ್ನು ವಿಕಾಸಗೊಳಿಕೊಂಡವರ ಕಲ್ಪನಾ ಶಕ್ತಿಯ ಅರಿವಿಗೆ ಈ ಅತಿ ಸೂಕ್ಷ್ಮ ಮೈಕ್ರೋವೈಟಾಗಳು ಬರುತ್ತವೆ.
ಸೃಷ್ಟಿಗೆ ಪಂಚಭೂತಗಳು ಕಾರಣವೆಂದು ಹೇಳುತ್ತಾರೆ.ಅವುಗಳಲ್ಲಿ ಅತಿ ಸೂಕ್ಷ್ಮವಾದುದು ಆಕಾಶತತ್ವ. ಅದಕ್ಕಿಂತ ಸೂಕ್ಷ್ಮವಾದುದು ವಿಶ್ವಮನ. ಮೈಕ್ರೋವೈಟಾಗಳ ಸ್ಥಾನ ಇವೆರಡರ ನಡುವೆ ಇರುವುದರಿಂದ ಅವು ವಿಶ್ವದೆಲ್ಲೆಡೆ ಸಂಚರಿಸಬಲ್ಲವು. ಅವುಗಳ ಚಲನೆ ಬರೀ ಪೃಥ್ವಿಗೆ ಮಾತ್ರ ಸೀಮಿತವಾಗಿಲ್ಲ, ವಿವಿಧ ಗ್ರಹ, ಆಕಾಶ ಕಾಯಗಳು, ನಕ್ಷತ್ರ ಮಂಡಲ, ನಿಹಾರಿಕೆ ಮುಂತಾಗಿ ಇಡೀ ಬ್ರಹ್ಮಾಂಡವೇ ಮೈಕ್ರೋವೈಟಾಗಳ ತಾಣಗಳಾಗಿವೆ.


ಮೈಕ್ರೋವೈಟಾಗಳು ಜೀವಿಗಳೇ ಆಗಿರುವುದರಿಂದ ಅವುಗಳಿಗೂ ಅಸ್ತಿತ್ವ, ಸಂಖ್ಯಾವೃದ್ಧಿ ಹಾಗೂ ಮರಣವಿದೆ.ಅವುಗಳ ಚಲನೆಗೆ ವಾಹಕದ ಅವಶ್ಯಕತೆ ಇದ್ದೇ ಇದೆ.ಕೆಲವು ಮೈಕ್ರೋವೈಟಾಗಳು ಏಕಕಾಲಕ್ಕೆ ವಿವಿಧ ವಾಹಕಗಳ ಮೂಲಕ ಚಲಿಸಬಲ್ಲವು. ರೂಪ, ಗಂಧ (ವಾಸನೆ/ಪರಿಮಳ), ಸ್ಪರ್ಶ, ಶಬ್ದಗಳು ಅವುಗಳ ಸಾಮಾನ್ಯ ವಾಹಕಗಳು. ಅತೀ ಸೂಕ್ಷ್ಮವಾದ ಮೈಕ್ರೊವೈಟಾಗಳು ವಿಚಾರಗಳ ಮೂಲಕ ಕೂಡ ಹರಡಬಲ್ಲವು. ಅಂದರೆ ಪ್ರಬಲವಾದ ಮಾನಸಿಕ ಶಕ್ತಿಯನ್ನು ಹೊಂದಿರುವ ವ್ಯಕ್ತಿಯ ವಿಚಾರಗಳ ಮೂಲಕ ವಿಶ್ವದ ವಿವಿಧೆಡೆಗೆ ಮೈಕ್ರೋವೈಟಾ ಪಸರಿಸಬಲ್ಲದು.


ವಿಶ್ವದಲ್ಲಿ ಜೀವೋದ್ಭವಕ್ಕೆ ಇಂಗಾಲದ ಕಣಗಳೇ ಕಾರಣ ಎಂದು ವಿಜ್ಞಾನ ಹೇಳುತ್ತದೆ. ಆದರೆ ಮೈಕ್ರೋವೈಟಾಗಳೇ ಪ್ರಾಣಶಕ್ತಿ ಹಾಗೂ ಜೀವವಿಕಾಸದ ಮೂಲ ಕಾರಣವೆನ್ನುತ್ತಾರೆ ಶ್ರೀ ಸರ್ಕಾರ್. ದೇಹ ಮತ್ತು ಮನಸ್ಸಿನ ಸೃಷ್ಟಿಗೂ ಅವೇ ಕಾರಣವಾಗಿರುವುದರಿಂದ ವಿಶ್ವದ ಯಾವುದೇ ಭಾಗದಲ್ಲಿಯಾದರೂ ದೇಹ ಮತ್ತು ಮನಸ್ಸನ್ನು ನಾಶಪಡಿಸುವ ಶಕ್ತಿ ಅವಕ್ಕಿದೆ.


ಮೈಕ್ರೋವೈಟಾಗಳು ಉಂಟುಮಾಡುವ ಪರಿಣಾಮಗಳನ್ನಾಧರಿಸಿ ಮೂರು ವಿಧಗಳು- ಋಣಾತ್ಮಕ, ಧನಾತ್ಮಕ ಹಾಗೂ ತಟಸ್ಥ. ಇವು ಮಾನವರ ಮೇಲೆ ವೈಯಕ್ತಿಕವಾಗಿ ಅಥವಾ ಸಾಮೂಹಿಕವಾಗಿ ಪರಿಣಾಮ ಬೀರಬಲ್ಲವು. ಸ್ಥೂಲ ಮೈಕ್ರೋವೈಟಾಗಳು ಭೌತಿಕ ಸ್ತರದಲ್ಲಿ ವಾಸಿಸುತ್ತವೆ. ಸೂಕ್ಷ್ಮವಾಗಿರುವವು ಮಾನಸಿಕ ಸ್ತರದಲ್ಲಿ ವಾಸಿಸಿದರೆ, ಸೂಕ್ಷ್ಮಾತಿಸೂಕ್ಷ್ಮವಾಗಿರುವವು ಮನಸ್ಸಿನ ಸೂಕ್ಷ್ಮ ಸ್ತರಗಳಲ್ಲಿ ವಾಸಿಸಬಲ್ಲವು. ಆದರೆ ಆಧ್ಯಾತ್ಮಿಕ ಸ್ತರದಲ್ಲಿ ಮೈಕ್ರೋವೈಟಾಗಳು ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿರುವುದಿಲ್ಲ.


ಋಣಾತ್ಮಕ ಸ್ವಭಾವದ ಮೈಕ್ರೊವೈಟಾಗಳು ಮಾನವದೇಹವನ್ನು ಪ್ರವೇಶಿಸಿ ರೋಗಗ್ರಸ್ಥನನ್ನಾಗಿಸಬಲ್ಲವು. ಧನಾತ್ಮಕ ಸ್ವಭಾವದವುಗಳಿಂದ ಮಾನವನ ದೈಹಿಕ ಹಾಗೂ ಮಾನಸಿಕ ಉನ್ನತಿ ಸಾಧ್ಯವಾಗುತ್ತದೆ.
ತಂತ್ರಶಾಸ್ತ್ರದನ್ವಯ ಮಾನವನ ದೇಹದಲ್ಲಿ ಇಡಾ, ಪಿಂಗಳ ಮತ್ತು ಸುಷುಮ್ನ ಎಂಬ ಮೂರು ನಾಡಿಗಳಿರುತ್ತವೆ. ಇವು ಪರಸ್ಪರವಾಗಿ ಸಂಧಿಸುವ ಸ್ಥಳವನ್ನು ಚಕ್ರ ಎನ್ನುತ್ತಾರೆ. ಹುಬ್ಬುಗಳ ನಡುವೆ ಇರುವ ಆಜ್ಞಾಚಕ್ರದ ಹೊರತಾಗಿ ಉಳಿದ ಚಕ್ರಗಳು ಕಶೇರುಕದಲ್ಲಿ ಇರುತ್ತವೆ. ತಂತ್ರಶಾಸ್ತ್ರದ ಈ ವಿಚಾರವನ್ನು ಆಧುನಿಕ ವೈದ್ಯಶಾಸ್ತ್ರ ಒಪ್ಪುವುದಿಲ್ಲ. ದೇಹಗಳನ್ನು ಕುಯ್ದು ವಿವಿಧ ಭಾಗಗಳನ್ನು ಪರೀಕ್ಷಿಸುವ ವೈದ್ಯರಿಗೆ ಅಂತಹ ಯಾವುದೇ ನಾಡಿಗಳು ಅಥವಾ ಚಕ್ರಗಳು ಕಂಡಿಲ್ಲ. ಅದರೆ ತಂತ್ರಸಾಧನೆಯ ಕುರಿತು ಅಭ್ಯಾಸ ಮಾಡುವವರು ಸೂಕ್ಷ್ಮರೂಪದಲ್ಲಿರುವ ಈ ಚಕ್ರ ಹಾಗೂ ನಾಡಿಗಳ ಅಸ್ತಿತ್ವ ತಮ್ಮ ದೇಹದಲ್ಲಿರುವುದನ್ನು ಅನುಭವಿಸಬಲ್ಲರು.
ಮಾನವರಲ್ಲಿ ಪ್ರಮುಖವಾಗಿ ೫೦ ಪ್ರವೃತ್ತಿಗಳನ್ನು ಗುರುತಿಸಲಾಗಿದೆ. ಪ್ರತಿಚಕ್ರವೂ ನಿರ್ದಿಷ್ಟ ಪ್ರವೃತ್ತಿಯನ್ನು (ಉದಾ: ಧರ್ಮ, ಅರ್ಥ, ಕಾಮ, ಲಜ್ಜಾ, ಭಯ, ಈರ್ಷೆ, ಕ್ರೌರ್ಯ, ಆಸೆ, ಮಮತೆ, ಇತ್ಯಾದಿ) ನಿಯಂತ್ರಿಸುತ್ತದೆ. ನಕಾರಾತ್ಮಕ ಮೈಕ್ರೋವೈಟಾಗಳು ಆಜ್ಞಾಚಕ್ರಕ್ಕಿಂತ ಉನ್ನತ ಚಕ್ರಗಳ ಮೇಲೆ ಪರಿಣಾಮ ಬೀರಲಾರವು. ಅವುಗಳ ಪರಿಣಾಮವೇನಿದ್ದರೂ ಮೂಲಾಧಾರದಿಂದ ವಿಶುದ್ಧ ಚಕ್ರದವರೆಗಿನ ಐದು ಚಕ್ರಗಳ ಮೇಲೆ ಮಾತ್ರ. ಈ ಐದು ಚಕ್ರಗಳು ಪಂಚಭೂತ ತತ್ವಗಳನ್ನು ಪ್ರತಿನಿಧಿಸುವುದರಿಂದ ದೈಹಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಇದರ ಪರಿಣಾಮದಿಂದಾಗಿ ಮನಸ್ಸಿಗೆ ಸಂಬಂಧಿಸಿದ ಆಜ್ಞಾ ಚಕ್ರವು ಅಪ್ರತ್ಯಕ್ಷವಾಗಿ ಪೀಡಿತವಾಗುವುದರಿಂದ ವ್ಯಕ್ತಿಯು ಹಲವು ವಿಧದ ಮಾನಸಿಕ ಖಾಯಿಲೆಗಳಿಗೆ ತುತ್ತಾಗುತ್ತಾನೆ.
ಸಕಾರಾತ್ಮಕ ಮೈಕ್ರೋವೈಟಾಗಳು ಆಜ್ಞಾಚಕ್ರದ ಮೇಲೆ ಪರಿಣಾಮ ಬೀರುವುದರಿಂದಾಗಿ ಮಾನವರಲ್ಲಿ ಉನ್ನತ ವಿಚಾರಗಳು, ವಿಶಾಲ ಭಾವ, ಆಧ್ಯಾತ್ಮದಲ್ಲಿ ಆಸಕ್ತಿ ಮುಂತಾದವು ಮೂಡುತ್ತವೆ. ಈ ಧನಾತ್ಮಕತೆಯ ಪರಿಣಾಮದಿಂದಾಗಿ ದೇಹ ಕೂಡ ಆರೋಗ್ಯಪೂರ್ಣವಾಗಿರುತ್ತದೆ.


ಮನುಷ್ಯನ ಭಾವನೆಗಳಿಗೆ ತಕ್ಕುದಾದ ಮೈಕ್ರೋವೈಟಾಗಳು ಆಕರ್ಷಿಸಲ್ಪಡುತ್ತವೆ. ಸ್ವಾರ್ಥ, ಸಂಕುಚಿತತೆ, ಅಸೂಯೆ, ನೀಚತನ, ಕ್ರೌರ್ಯ ಮುಂತಾದ ಹೀನ ಮನಸ್ಸಿನ ವ್ಯಕ್ತಿಯೆಡೆಗೆ ನಕಾರಾತ್ಮಕ ಮೈಕ್ರೋವೈಟಾ ಆಕರ್ಷಿಸಲ್ಪಡುತ್ತದೆ. ಇದೇ ತತ್ವ ಸಮುದಾಯಕ್ಕೆ ಕೂಡ ಅನ್ವಯವಾಗುತ್ತದೆ. ಇದರಿಂದಾಗಿ ಪರಸ್ಪರರಲ್ಲಿ ದ್ವೇಷ, ಅಪನಂಬಿಕೆ, ಶೋಷಣೆಗಳಿಗೆ ಕಾರಣವಾಗುತ್ತದೆ.


ಧನಾತ್ಮಕ ಚಿಂತನೆಗಳು ಸಕಾರಾತ್ಮಕ ಮೈಕ್ರೋವೈಟಾಗಳನ್ನು ಆಕರ್ಷಿಸುತ್ತವೆ. ಇವು ವ್ಯಕ್ತಿ ಹಾಗೂ ಸಮಾಜವನ್ನು ಉನ್ನತಿಯತ್ತ ಕೊಂಡೊಯ್ಯುತ್ತವೆ.


ಈ ಹಿನ್ನೆಲೆಯಲ್ಲಿ ಇಂದಿನ ಕರೊನಾ ಸಮಸ್ಯೆಗೆ ಪರಿಹಾರವನ್ನು ಕಾಣಲು ಸಾಧ್ಯ. ಮೈಕ್ರೋವೈಟಾದ ಅತ್ಯಂತ ಸ್ಥೂಲ ರೂಪವಾಗಿರುವ ವೈರಸ್ಸನ್ನು ಔಷಧಗಳಿಂದ ಕೊಲ್ಲಲು ಅಥವಾ ನಿಯಂತ್ರಿಸಲು ಸಾಧ್ಯವಿಲ್ಲ. ಔಷಧವು ದೇಹದ ನೋವನ್ನು ಕಡಿಮೆ ಮಾಡಬಲ್ಲದು ಅಷ್ಟೆ. ನಕಾರಾತ್ಮಕ ಮೈಕ್ರೋವೈಟಾಗಳ ನಿಯಂತ್ರಣದ ಒಂದು ವಿಧವೆಂದರೆ ಅವು ತಾನಾಗಿಯೇ ಸಾಯುವುದಕ್ಕಾಗಿ ಕಾಯುವುದು, ಇನ್ನೊಂದು ವಿಧವೆಂದರೆ ಸಕಾರಾತ್ಮಕ ಮೈಕ್ರೋವೈಟಾಗಳನ್ನು ಬಳಸುವುದು. ಮಾನವರಿಗೆ ಮೈಕ್ರೋವೈಟಾಗಳನ್ನು ಸೃಷ್ಟಿಸುವ ಶಕ್ತಿಯಿಲ್ಲ. ಆದರೆ ಅವುಗಳನ್ನು ಆಕರ್ಷಿಸುವ ಶಕ್ತಿಯಿದೆ. ಸಕಾರಾತ್ಮಕ ಹಾಗೂ ಆಧ್ಯಾತ್ಮಿಕ ಚಿಂತನೆಯಿಂದ ಮಾತ್ರ ಇದು ಸಾಧ್ಯ.
ಸಾವಿನ ಭಯ ಬಿತ್ತುವ ಮಾಧ್ಯಮ ವರದಿಗಳು, ಜನರನ್ನು ಬಲವಂತವಾಗಿ ಪ್ರತ್ಯೇಕತೆಗೆ ತಳ್ಳುವ ಲಾಕ್ಡೌನ್ನಂತಹ ಕ್ರಮಗಳು, ಉದ್ಯೋಗವಿಲ್ಲದೇ; ಆಹಾರವೂ ಇಲ್ಲದೇ ನಾಳಿನ ಚಿಂತೆಯಿಂದ ಬಳಲುವಂತೆ ಮಾಡಿರುವುದರಿಂದ ಜನರಲ್ಲಿ ನಕಾರಾತ್ಮಕ ಭಾವನೆಯೇ ಹೆಚ್ಚಾಗುತ್ತದೆ. ಈಗಾಗಲೇ ಬೇರು ಬಿಟ್ಟಿರುವ ಸ್ವಾರ್ಥ ಅಸೂಯೆಗಳ ಜೊತೆಗೆ ಪರಿಸ್ಥಿತಿಯ ಪ್ರಭಾವವೂ ಸೇರಿ ಋಣಾತ್ಮಕ ಮೈಕ್ರೋವೈಟಾಗಳನ್ನು ಆಕರ್ಷಿಸುವುದು ಸಹಜ. ಇದರಿಂದಗಿ ವೈರಸ್ ಪ್ರಭಾವ ಇನ್ನಷ್ಟು ತೀವ್ರವಾಗಿ ಕಾಡಲಿದೆ.


ಸ್ಪರ್ಶದಿಂದಲೇ ಪಸರಿಸುತ್ತದೆಂದು ನಂಬಲಾಗಿರುವ ಕೊರೊನಾ ವೈರಸ್, ಸೋಂಕಿತ ವ್ಯಕ್ತಿಗಳ ಸಂಪರ್ಕವೇ ಇಲ್ಲದವರಿಗೂ ತಗಲುತ್ತಿರುವುದು ಅವು ಹಲವು ಮಾಧ್ಯಮಗಳನ್ನು ಬಳಸಿ ಚಲಿಸಬಲ್ಲವು ಎಂಬ ವಿಚಾರಕ್ಕೆ ಪುಷ್ಠಿ ನೀಡುತ್ತದೆ. ಇಷ್ಟಕ್ಕೇ ತತ್ತರಿಸಿರುವ ಮಾನವ ಸಮಾಜ ಗಂಧ, ಶಬ್ಧ, ವಿಚಾರಗಳ ಮೂಲಕ ಪಸರಿಸಬಲ್ಲ ಮೈಕ್ರೋವೈಟಾಗಳಿಂದ ಪ್ರಭಾವಿತರಾಗುವ ಸಂದರ್ಭದ ಪರಿಣಾಮದ ಭೀಕರತೆ ಊಹೆಗೂ ನಿಲುಕದು. ಇದಕ್ಕೆಲ್ಲಾ ಪರಿಹಾರವೆಂದರೆ ಸಕಾರಾತ್ಮಕ ಚಿಂತನೆ.


ನಾಳಿನ ಬದುಕಿನ ಭದ್ರತೆ ಹಾಗೂ ಭರವಸೆಯನ್ನು ಪ್ರತಿಯೋರ್ವ ವ್ಯಕ್ತಿಯಲ್ಲೂ ಮೂಡಿಸುವ ಸರ್ಕಾರದ ನಡೆ-ನುಡಿ- ಕಾರ್ಯಕ್ರಮಗಳು, ಭಯದ ವಾತಾವರಣವನ್ನು ದೂರ ಮಾಡುವುದು, ಸಕಾರಾತ್ಮಕ ಚಿಂತನೆಯ ಪ್ರೇರೇಪಣೆ ಆದ್ಯತೆ ಪಡೆಯಬೇಕು. ನಕಾರಾತ್ಮಕತೆ ಬೆಳೆಸುತ್ತಿರುವ ಹೊಣೆಗೇಡಿ ಮಾಧ್ಯಮಗಳ ಕಿವಿ ಹಿಂಡುವ ಕೆಲಸದ ಜೊತೆಗೆ, ಜನರಲ್ಲಿ ಅಂಧ ವಿಶ್ವಾಸ, ಮೂಢನಂಬಿಕೆ ಬೆಳೆಸುವ ಕಾರ್ಯಕ್ರಮಗಳಿಗೆ ತಡೆ ಹಾಕಿ; ಆತ್ಮವಿಶ್ವಾಸ ಬೆಳೆಸುವ, ಸಕಾರಾತ್ಮಕ ಚಿಂತನೆಗಳನ್ನು ಪ್ರೇರೇಪಿಸುವ ಕಾರ್ಯಕ್ರಮ ಬಿತ್ತರಿಸುವುದನ್ನು ಕಡ್ಡಾಯ ಮಾಡಬೇಕು.


ಭಜನೆ, ಕೀರ್ತನೆ, ಜಪ, ಧ್ಯಾನಗಳಿಂದ ಸಕಾರಾತ್ಮಕ ಮೈಕ್ರೊವೈಟಾಗಳು ಆಕರ್ಷಿಸಲ್ಪಡುತ್ತವೆ. ಪಂಚವಟಿ (ಬೇವು, ಬಿಲ್ವ, ಶಾಲ್ಮಲಿ, ಆಲ, ಅಶ್ವಥ್ಥ, ಕೆಲವೊಮ್ಮೆ ನೆಲ್ಲಿ ಗಿಡಗಳ ಸಮೂಹ) ಯಲ್ಲಿ ಕೆಲ ಸಮಯ ಕಾಲ ಕಳೆಯುವುದು ದೈಹಿಕ, ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು; ಯಾಕೆಂದರೆ ಇವು ಸಕಾರಾತ್ಮಕ ಮೈಕ್ರೋವೈಟಾವನ್ನು ಆಕರ್ಷಿಸುತ್ತವೆ.


ವಿಜ್ಞಾನದ ಮೂಲ ನಂಬಿಕೆಗಳಿಗೇ ಸವಾಲು ಎಸೆದಿರುವ, ವಿಜ್ಞಾನದ ಕ್ಷಿತಿಜವನ್ನು ವಿಸ್ತರಿಸುವ ಮೈಕ್ರೊವೈಟಾ ಕುರಿತಾದ ಸಂಶೋಧನೆಗಳಿಂದಾಗಿ ಇಂದಿನ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರ ಮುಂತಾದವುಗಳಲ್ಲಿ ಮಹತ್ತರ ಬದಲಾವಣೆಗಳಾಗಿವೆ. ಅರ್ಥಶಾಸ್ತ್ರದ ಸಂಪನ್ಮೂಲಗಳ ಕಲ್ಪನೆಯ ವಿಸ್ತಾರವು ಇಂದಿನ ತಜ್ಞರು ಊಹಿಸಲಾರದಷ್ಟು ಹಿಗ್ಗಲಿದೆ. ಇಡೀ ಮಾನವ ಸಮಾಜ ನೈಜ ಪ್ರಗತಿಯ ದಾರಿಯಲ್ಲಿ ಮುನ್ನಡೆಯಲಿದೆ.

*********

Leave a Reply

Back To Top