ಕಾವ್ಯ ಸಂಗಾತಿ
ಆದಪ್ಪ ಹೆಂಬಾ ಮಸ್ಕಿ
ಅಮ್ಮ ಮತ್ತು ಅವಳು
ಅತ್ತೆಗೆ ಅಮ್ಮನ ಸ್ಥಾನ ?
ಸಾಧ್ಯವೇ ಇಲ್ಲ.
ನಿಮ್ಮವ್ವ
ನನಗೆ ಮಗಳ ಸ್ಥಾನ
ಕೊಟ್ಟರೆ ತಾನೆ ?
ಇದವಳ ವಾದ ||
ಹತ್ತಾರು ವರ್ಷಗಳಾತು
ಇವ ಸುಸ್ತೋ ಸುಸ್ತು
ಆಫೀಸಿನಲ್ಲಿ
ದುಡಿದು ದಣಿದು
ಮನೆಗೆ ಬಂದವನಿಗೆ
ಮಡದಿ ಮತ್ತವಳ ಮಾತು
ಸಾವರಿಸಿಕೊ ಸಹಿಸಿಕೊ
ಇದು ಅಮ್ಮನ ತಾಕೀತು ||
ಸಂಜೆ ಟೀ ಹೊತ್ತಿಗೆ
ನೂರು ಕಂಪ್ಲೇಂಟು
ಊಟ ಮಾಡಾಯ್ತು
ತಿರಗಾ ಮಂಚದ ಮೇಲೆ
ಮತ್ತೊಂದಾರು…..
ಕೇಳಿ ಕೇಳಿ
ಕಬ್ಬಿಣದಂತಾಗಿದ್ದವವನ ಕಿವಿ
ಇನ್ ಫ್ಯಾಕ್ಟ್ ಅದು
ಅವನ ಪಾಲಿನ ತಪ್ಪದ ಲಾಲಿ ||
ಅವತ್ತಾಗಿದ್ದೂ ಅದೇ
ಅಮ್ಮನ ಕುರಿತಾದ ಕಂಪ್ಲೇಂಟಿನ
ನಿತ್ಯೋತ್ಸವ
ಸುಮ್ಮನಿರು ಸಾಕೆಂದ
ಮುತ್ತಿಡುವಾಗ
ಮಾತನಾಡಬಾರದು ಅಂದ
ಅವಳೀಗ ಮೌನಿ
ಇವನೂ ಮಾತನಾಡದೆ
ಮುಂದುವರೆದ ||
ಆದಪ್ಪ ಹೆಂಬಾ ಮಸ್ಕಿ