ಹೇಳಿದ್ದೆಲ್ಲಾ ಕವಿತೆಯಾಗುವುದಿಲ್ಲ
ಜಹಾನ್ ಆರಾ ಎಚ್. ಕೋಳೂರು
ಹೇಳಿದ್ದೆಲ್ಲಾ ಕವಿತೆಯಾಗುವುದಿಲ್ಲ
ಹೇಳಿದ್ದೆಲ್ಲಾ ಕವಿತೆಯಾಗುವುದಿಲ್ಲ
ನೇರಭಾವಕ್ಕೆ ತೂಕ ಕಡಿಮೆ
ಸಾಗರದ ಆಳಗಲವಂತೆ
ಆಗಸದ ಅನೂಹ್ಯವಂತೆ
ನಾಜೂಕಂತೆ, ಸುಲಭವು ಅಲ್ಲವಂತೆ
ಬಿಡಿ ಬಿಡಿ ಹೇಳಿದ್ದೆಲ್ಲಾ ಕವಿತೆಯಾಗುವುದಿಲ್ಲ
ನಾನು ಬರೆದದ್ದು ಅವನೊಪ್ಪನು
ಇವ ಬರೆದದ್ದು
ಮತ್ತೋರ್ವನೊಪ್ಪನು
ಅವರು ಬರೆದದ್ದು… ನಾ ಒಪ್ಪಬೇಕಂತೆ!!!
ಭಾವ ಭಕುತಿ ಅವರಿಗೆ ಬಿಟ್ಟದು.
ಇಲ್ಲಿ ಜರೂರಾಗಿ ಹೇಳಬೇಕಾದ ನಿಯಮ
ಕಡಿಮೆ ಪದಗಳ ಪೋಣಿಕೆ
ಹೆಚ್ಚು ಭಾವ ಭಾರ ತುರುಕುವಿಕೆ
ಶಬ್ಧ ಮಣಿಗಳ ದರ್ಪಣದಲಿ ನಿಂತರೂ
ಪಾಶ್ಚಾತ್ಯ ಸಿಂಗಾರದ ಪ್ರತಿಬಿಂಬ
ಬಿಡಿ ಬಿಡಿ ಹೇಳಿದೆಲ್ಲಾ ಕವಿತೆಯಾಗುದಿಲ್ಲ
ನೇರ ಭಾವಕ್ಕೆ ತೂಕ ಕಡಿಮೆ
ತಕ್ಕಡಿಯಲ್ಲಿ ಒದ್ದಾಡುತ್ತಿದ್ದ ಕವಿತೆಯಿಂದ
ಅವ ಕವಿತ್ವ ಹೊರಹಾಕಿದ
ಅರೆ! ತೂಕ ಸರಿಯಾಗಬೇಕು
ಸತ್ವಕ್ಕೆ ಸ್ವಲ್ಪ ಮೇಕಪ್ ಬೇಕು
ನಾನು ಮಾಡಿದರಾಗದು
ಅವರಾದರೆ ಮಾಡಬಹುದಂತೆ
ಈಗ ಭಾವವೂ ಕಸದಬುಟ್ಟಿ ಸೇರಿತು
‘ವ್ಹಾ! ಎಂತಹ ಕವಿತೆ’ ಎಂದವನೆ
ಮತ್ತೆ ಮತ್ತೆ ತೂಕಕಿರಿಸಿದ
ತಡಕಾಡಿ ತಮ್ಮಿಸಿ
ಅತ್ತಿತ್ತ ಕಲಿತಿದ್ದನ್ನು ಸ್ಮರಿಸಿ
ನನ್ನ ಮುಂದೆ ವಾಂತಿ ಮಾಡಿ
“ಕ್ಷಮಿಸಿ,
ಹೇಳಿದೆಲ್ಲಾ ಕವಿತೆಯಾಗುದಿಲ್ಲ” ಎಂದು,
ಗುಜರಿ ಅಂಗಡಿಯವ ಬಾಗಿಲು ಹಾಕಿಕೊಂಡ
ತನ್ನತನವೇ ಕಳಚಿ
ಉಸಿರುಗಟ್ಟಿದ ಕವಿತೆ
ರಕ್ತಸಿತವಾಗಿ
ಚೂರಿಯಿಂದಾದ ಗಾಯಗಳನ್ನು
ನಾಲಿಗೆಯಿಂದ ನೆಕ್ಕಿದಂತೆ
ಕುಂಯ್ಯಿ ಎನ್ನದೆ ನನ್ನ ಕಡತ ಸೇರಿತು.
ಮತ್ತದೇ ಗುಡುಗು
“ಬಿಡು ಬಿಡು ಬರೆದದ್ದಲ್ಲಾ
ಕವಿತೆಯಾಗುದಿಲ್ಲ”
*********