ಡಾ. ಮೀನಾಕ್ಷಿ ಪಾಟೀಲ್ ಕವಿತೆ-ಬಾಲ್ಯ

ಕಾವ್ಯ ಸಂಗಾತಿ

ಡಾ. ಮೀನಾಕ್ಷಿ ಪಾಟೀಲ್

ಬಾಲ್ಯ

ಕಳೆದು ಹೋಗಿರುವೆ ನಾನು ಜಾಗತಿಕ ಜಾಲದಲ್ಲಿ ಜಾಲದ ರಭಸಕ್ಕೆ ಕೊಚ್ಚಿ ಯಾವುದೋ ಕಂಪ್ಯೂಟರನಲ್ಲಿ

ಕಳೆದು ಹೋಗಿರುವೆ ನಾನು ಇಂಗ್ಲಿಷ್ ಕಾನ್ವೆಂಟ್ ನ ಕ್ಲಾಸ್ ರೂಮಿನಲ್ಲಿ ಮಿಸ್ ಹೇಳುವ ಡಿಸಿಪ್ಲಿನ್ ನಲ್ಲಿ

ಕಳೆದು ಹೋಗಿರುವೆ ನಾನು ಹೋಮ್ ವರ್ಕ್ ನ ಹೊರೆಯಲ್ಲಿ ತಪ್ಪಿದರೆ ಬೆತ್ತದ ಏಟಿನಲ್ಲಿ

ಕಳೆದು ಹೋಗಿರುವ ನಾನು ಅಪ್ಪನ ಮೊಬೈಲ್ನಲ್ಲಿ ಅಮ್ಮನ ಧಾರಾವಾಹಿಗಳಲ್ಲಿ

ಕಳೆದುಹೋಗಿರುವ ನಾನು ಟ್ಯೂಷನ್ ಹುಚ್ಚಿನಲ್ಲಿ
ಅಂಕ ತೆಗೆಯುವ ಫ್ಯಾಕ್ಟರಿಯಲ್ಲಿ

ಹುಡುಕಬಲ್ಲಿರಾ ನನ್ನನ್ನು……..
ಅಜ್ಜಿಯ ಹಳ್ಳಿಯ ಹೊಳೆನೀರಿನಲ್ಲಿ ಹಳ್ಳದ ಹೊಲದಲ್ಲಿ

ಹುಡುಕಬಲ್ಲಿರಾ ನನ್ನನ್ನು
ಹಕ್ಕಿ ಹಾಡಿನಲ್ಲಿ ತೊನೆಯುವ ಜೋಳದ ತೆನೆಯಲ್ಲಿ

ಹುಡುಕಬಲ್ಲಿರಾ ನನ್ನನ್ನು ಎರಕಲು ಬೀಡಿನ ಜೋತು ಬಿದ್ದಿರುವ ಹೆಜ್ಜೇನಿನ ಗೂಡಿನಲ್ಲಿ

ಹುಡುಕಬಲ್ಲಿರಾ ನನ್ನನ್ನು ಬೇಲಿಯ ಮೇಲಿನ ತೊಂಡೆ ಹಣ್ಣಿನ ಕೆಂಪಿನಲ್ಲಿ ಹೊಲದ ಬದುವಿನ ರಟಗಳ್ಳಿಯ ಹಣ್ಣಿನಲ್ಲಿ

ಹುಡುಗ ಬಲ್ಲಿರಾ ನನ್ನನ್ನು ಕಾಕಿ ಹಣ್ಣಿನ ಕಂಟಿಗಳಲ್ಲಿ ಹುಣಸೆ ಬಾರೆ ಗಿಡಗಳಲ್ಲಿ

ಹುಡುಕಬಲ್ಲಿರಾ ನನ್ನನ್ನು
ಹಳ್ಳದ ನೀರಿನ ಮೀನಾಟದಲ್ಲಿ ಕೆಸರು ಕೆರೆಯ ತಿಳಿ ನೀರಿನಲ್ಲಿ

ಹುಡುಕಬಲ್ಲರಾ ನನ್ನನ್ನು ಗೆಳೆಯರ ಗುದ್ದಾಟದಲ್ಲಿ
ಗಿಡ ಮಂಗ್ಯಾ ಆಟದಲ್ಲಿ
ಕಮಲಿಯ ಜಡೇ ಜಗ್ಗಿದ ಕುಚೇಷ್ಟೆಯ ಸಂತಸದಲ್ಲಿ

ಹುಡುಕಬಲ್ಲಿ ರಾ ನನ್ನನ್ನು ಅಜ್ಜಿ ಹೇಳುವ ರಾಜ ರಾಣಿಯ ಕಥೆ ಸೊಗಸಿನಲ್ಲಿ


ಡಾ. ಮೀನಾಕ್ಷಿ ಪಾಟೀಲ್

6 thoughts on “ಡಾ. ಮೀನಾಕ್ಷಿ ಪಾಟೀಲ್ ಕವಿತೆ-ಬಾಲ್ಯ

  1. ಉತ್ತಮ ಕವನ ಮೇಡಂ

Leave a Reply

Back To Top