ತಿಂಗಳ ಕವಿ

ಅನಸೂಯಾ ಜಹಗೀರದಾರ

ಕೊಪ್ಪಳದ ಅನಸೂಯ ಜಹಗೀರದಾರ.


.


.ಕವಿ ಪರಿಚಯ


ಹಿಂದುಸ್ತಾನಿ ಸಂಗೀತ ಕಲಾವಿದೆ. ಮತ್ತು ಕವಯತ್ರಿ,ಕಥೆಗಾರ್ತಿ, ಬರಹಗಾರರು.ಸ. ಪ್ರೌಢ ಶಾಲಾ ಶಿಕ್ಷಕರು, ಕನ್ನಡ ಪರ ವಿವಿಧ ಸಂಘಟನೆಗಳಲಿ ಪದಾಧಿಕಾರಿ, ಕಾರ್ಯಕಾರಿ ಸಮಿತಿ ಸದಸ್ಯರು ಹಾಗು ಅಧ್ಯಕ್ಷರು.
ಶಿಕ್ಷಣ :- ಎಂ ಎ ಬಿಎಡ್.
ಎಂ ಎ : ಕನ್ನಡ ಮತ್ತು ಸಮಾಜಶಾಸ್ತ್ರ.
ಕಾವ್ಯ ಕೃತಿಗಳು – ಒಡಲಬೆಂಕಿ – ೨೦೧೪ *ಆತ್ಮಾನುಸಂಧಾನ(ಗಜಲ್-೨೦೨೧)
ನೀಹಾರಿಕೆ (ಹನಿಗವಿತೆಗಳು- ೨೦೨೧))
*ಪ್ರಶಸ್ತಿ ಪುರಸ್ಕಾರ:- ಡಾ.ಡಿ. ಎಸ್. ಕರ್ಕಿ ರಾಜ್ಯ ಕಾವ್ಯ ಪ್ರಶಸ್ತಿ ( ಡಾ. ಡಿ. ಎಸ್. ಕರ್ಕಿ ಪ್ರತಿಷ್ಠಾನ. ಬೆಳಗಾವಿ-ಒಡಲಬೆಂಕಿ ಕೃತಿಗೆ ೨೦೧೫ ರಲ್ಲಿ)
*ಕಾವ್ಯಶ್ರೀ ಪ್ರಶಸ್ತಿ ( ಕಸ್ತೂರಿ ಸಿರಿಗನ್ನಡ ಬಳಗ ಮಂಡ್ಯ)
*ಕುವೆಂಪು ರಾಜ್ಯ ಕಾವ್ಯ ಪುರಸ್ಕಾರ ( ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು. ಜಿಲ್ಲಾ ಘಟಕ ಶಿವಮೊಗ್ಗ)
“ಕೊಪ್ಪಳ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ(ಕೊಪ್ಪಳ ಜಿಲ್ಲಾಡಳಿತ- ೨೦೧೫ ರಲ್ಲಿ)
*ಕೊಪ್ಪಳ ಜಿಲ್ಲಾ ಮಹಿಳಾ ಒಕ್ಕೂಟ ಪುರಸ್ಕಾರ
*ಸಂಯುಕ್ತ ಕರ್ನಾಟಕ ಯುಗಾದಿ ಕಾವ್ಯ ಸ್ಪರ್ದೆ
ಮೆಚ್ಚುಗೆ ಬಹುಮಾನ.
*ಉತ್ತಮ ವಿಶೇಷ ಶಿಕ್ಷಕಿ ರಾಜ್ಯ ಪ್ರಶಸ್ತಿ ( ಕರ್ನಾಟಕ ಸರ್ಕಾರ ೨೦೦೭)

ವಿಳಾಸ:- ಅನಸೂಯ ಜಹಗೀರದಾರ
ಕೋಟೆ ಆವರಣ
ಕೊಪ್ಪಳ – 583231
ಮೊ ನಂ :-* 9449310955
ಇ ಮೇಲ್ :- anasuyaj69@gmail.com


ಅನಸೂಯಾ ಜಹಗೀರದಾರ ಅವರ ಕವಿತೆಗಳು

ಈಗ ಗೊತ್ತಾಗಬೇಕಿದೆ

ಹಲವು ಇಲ್ಲಗಳಲೊಂದು ಇದೆ
ಅಸ್ತಿತ್ವಗೊಂಡಿದೆ ಎಂಬುದೀಗ ಗೊತ್ತಾಗಬೇಕಿದೆ.

ಹಲವು ಬೇಡಗಳಲೊಂದು ಬೇಕು
ಚಿಗುರಿದೆ ಎಂಬುದೀಗ ಗೊತ್ತಾಗಬೇಕಿದೆ.

ಹಲವು ಪ್ರಬೇಧಗಳಲೊಂದು ಅಬೇಧ
ಪ್ರಬೋಧವಾಗಿದೆ ಎಂಬುದೀಗ ಗೊತ್ತಾಗಬೇಕಿದೆ.

ಹಲವು ವಿಭಿನ್ನಗಳಲೊಂದು ಸಮುನ್ನತ
ಘನವಾಗಿದೆ ಎಂಬುದೀಗ ಗೊತ್ತಾಗಬೇಕಿದೆ.

ಹಲವು ಮತಗಳಲೊಂದು ಒಮ್ಮತ
ಸಹಮತವಾಗಿದೆ ಎಂಬುದೀಗ ಗೊತ್ತಾಗಬೇಕಿದೆ.

ಹಲವು ರಾದ್ಧಾಂತಗಳಲೊಂದು ಸಿದ್ಧಾಂತ
ಬೇರೂರಿದೆ ಎಂಬುದೀಗ ಗೊತ್ತಾಗಬೇಕಿದೆ.

ಹಲವು ಚಲಿತಗಳಲೊಂದು ಅಚಲಿತ
ಮಿಲಿತವಾಗಿದೆ ಎಂಬುದೀಗ ಗೊತ್ತಾಗಬೇಕಿದೆ.

ಹಲವು ರೂಪಗಳಲೊಂದು ಸ್ವರೂಪ
ವಿಲೀನಗೊಂಡಿದೆ ಎಂಬುದೀಗ ಗೊತ್ತಾಗಬೇಕಿದೆ.

ಹಲವು ವಶಗಳಲೊಂದು ವಿವಶ
ಪರವಶವಾಗಿದೆ ಎಂಬುದೀಗ ಗೊತ್ತಾಗಬೇಕಿದೆ.

ಹಲವು ವಿಚಲಿತಗಳಲೊಂದು ಪ್ರಚಲಿತ
ಚಲಿತವಾಗಿದೆ ಎಂಬುದೀಗ ಗೊತ್ತಾಗಬೇಕಿದೆ.

ಹಲವು ಆತ್ಮಗಳಲೊಬ್ಬ ಪರಮಾತ್ಮ
ಏಕವಾಗಿಹನೆಂಬುದೀಗ ಗೊತ್ತಾಗಬೇಕಿದೆ.

ಹಲವು ಸ್ವಧರ್ಮಗಳಲೊಂದು
ಮಾನವಧರ್ಮ
ಐಕ್ಯಗೊಂಡಿದೆ ಎಂಬುದೀಗ ಗೊತ್ತಾಗಬೇಕಿದೆ.

******

ದಾರಿ

ಆ ಒಂದು ದಾರಿಯಲ್ಲಿ
ನಡೆಯುತ್ತಿದ್ದೆವು ನಾವು

ನಮ್ಮ ಹೆಜ್ಜೆಗಳು

ವೇಗದಲಿ ಒಂದಿಷ್ಟು ಬಿರುಸಾಗಿಯೂ
ನಿರ್ವೇಗದಲಿ ಒಂದಿಷ್ಟು ಸುಸ್ತಾಗಿಯೂ
ಆವೇಗದಲಿ ಒಂದಿಷ್ಟು ಪುಳಕವಾಗಿಯೂ
ಸಾಗುತ್ತಿದ್ದವು

ನಮ್ಮ ಹೆಜ್ಜೆಗಳು
ಬಂಧ ಶಾಶ್ವತ ಅನ್ನುವ ಭಾವಗಳ
ಹುಟ್ಟುಹಾಕುತ್ತಿದ್ದವು
ದಾರಿಯ ಹಿಂದೆ ಸರಿಸುತ್ತಿದ್ದವು

ಎದುರು ಬದುರಿನ ಕಾಣದ ಬಿಂದುವಿಗೆ
ಸೇರುವ ಇರಾದೆಯಿತ್ತು

ಏಕೆ ಹೇಗೆ ಏನು ಎಂತು
ಯಾವ ಪ್ರಶ್ನಾರ್ಥಕ ಪದಕ್ಕೂ
ಜಾಗವಿರಲಿಲ್ಲ ಅಲ್ಲಿ
ನಡೆದಷ್ಟೂ ದಾರಿ
ಕಳೆದಷ್ಟೂ ಸಮಯ ಇಲ್ಲಿ

ಕತ್ತಲಿನ ಹಕ್ಕಿ ಆಕಾಶದೆತ್ತರಕ್ಕೇರಿ
ಭೂಮಿಯಲಿ ತಂಗುದಾಣವ ಹುಡುಕುತ್ತ
ಎವೆಯಲಿ ಹಿಡಿದಿಡುತ್ತ
ಹಾರಾಡುತ್ತ ಸಾಗುತ್ತಿದೆಯೆಂದೂ
ನಮಗೆ…
ಗೊತ್ತಾಗುವ ಹೊತ್ತಿಗೆ
ನಡೆವ ದಾರಿ ಕವಲೊಡೆದಿತ್ತು..!

*****

ಹೀಗೆ ಯೋಚಿಸಿದ್ದೇನೆ

ಕೆಲವು ದಿನ ನಗರಗಳ ಬಗ್ಗೆ
ಕೆಲವು ದಿನ ಊರಿನ ಬಗ್ಗೆ..
ಹಳ್ಳಿ ಹಳ್ಳಿಗಳ ಬಗ್ಗೆ..
ಗಲ್ಲಿ ಗಲ್ಲಿಗಳ ಬಗ್ಗೆ ಮೊಹಲ್ಲಾಗಳ ಬಗ್ಗೆ…
ಮನೆ ಮನೆಗಳು ಮಠಮಾನ್ಯಗಳ ಬಗ್ಗೆ
ಗುಡಿ ಚರ್ಚು ಬಸೀದಿ ಮಸೀದಿಗಳ ಬಗ್ಗೆ
ಹರಿದಾಡುವ ವಿಷ ವಿಷಯಗಳ ಬಗ್ಗೆ
ಜಾತಿ ಆತೀತ ವ್ಯತೀತ ಬಂಧಗಳ ಬಗ್ಗೆ

ಎಲ್ಲ ಜನಸಮುದಾಯಗಳ ಬಗ್ಗೆ….
ಒಡಲಿನ ಕಿಚ್ಚು ದಳ್ಳುರಿಗಳ ಬಗ್ಗೆ
ಬೇರು ಬಿಟ್ಟ ಜಡ ವಾದಗಳ ಬಗ್ಗೆ…
ವಿತಂಡ ವಿವಾದಗಳ ಬಗ್ಗೆ
ಭಂಡತೆ ಷಂಡತೆಯ ಬಗ್ಗೆ..
ಅತಂತ್ರ ಕುತಂತ್ರಗಳ ಬಗ್ಗೆ..
ಅಕ್ರಮ ಸಕ್ರಮಗಳು..
ಕ್ರಯ ವಿಕ್ರಯ ಕಲ್ಪ ವಿಕಲ್ಪಗಳ ಬಗ್ಗೆ
ವಿಕೃತ ವಿವಶತೆಗಳ ಬಗ್ಗೆ..
ಸೋಗಲಾಡಿತನ ಡಾಂಭಿಕತನ ಬಗ್ಗೆ
ಮುಖಗಳು ಮುಖವಾಡಗಳ ಬಗ್ಗೆ

ದೇಹಾಂತರ ದೇಶಾಂತರ ದೇಹ ಗೇಹಗಳ ಬಗ್ಗೆ
ಸರ್ವಾಧಿಕಾರ ಪರಮಾಧಿಕಾರ ಪ್ರಭುತ್ವಗಳ ಬಗ್ಗೆ..
ಕಪಟತನ ಕುಹಕತನ ನೀಚತನಗಳ ಬಗ್ಗೆ
ಶರಣ್ಯ ನಿರ್ವಿಣ್ಯ ನಿತ್ರಾಣ ನಿರ್ಗಮಗಳ ಬಗ್ಗೆ
ಅಂತರ ಸಮನಾಂತರ ನಿರಂತರಗಳ ಬಗ್ಗೆ
ಬಲವಿಲ್ಲದಾಗ ಎದ್ದುಬಡಿಯುವ
ಆಪತ್ತು ವಿಪತ್ತು
ವಿಕೋಪಗಳ ಅಟ್ಟಹಾಸದ ಬಗ್ಗೆ..
ತಾಕತ್ತು ಸವುಲತ್ತು ಸಂಪತ್ತು
ದುರುಪಯೋಗಗಳ ಬಗ್ಗೆ
ಪ್ರತಿಭೆ ಪ್ರತಿಮೆಗಳ ಶೋಷಣೆಯ ಬಗ್ಗೆ

ಬದಲಾಗದ ಡೊಂಕುಬಾಲಗಳ ಬಗ್ಗೆ
ಮೂಗಿನ ನೇರ ಜಾಯಮಾನಗಳ ಬಗ್ಗೆ
ಅವರವರ ಭಾವಗಳ ಭಕುತಿಗಳ ಬಗ್ಗೆ
ಒಗ್ಗದ ಜಗ್ಗದ ಬಗ್ಗದ ಚರ್ಯೆಗಳ ಬಗ್ಗೆ

ಮತ್ತೇ…,.ನಮ್ಮಗಳ…..,
ಮದ್ದಿಲ್ಲದ ಆ ಸ್ವಭಾವಗಳ ಬಗ್ಗೆ…
ಅಭಾವ ಪ್ರಭಾವಗಳ ಬಗ್ಗೆ…,

ಅವನ…,
ವ್ಯಂಗ್ಯ ವಕ್ರೋಕ್ತಿ ಜಾಣತನದ ಬಗ್ಗೆ
ಹುಂಗುಟ್ಟದ ನನ್ನ ನೇರ ನಿಲುವುಗಳ ಬಗ್ಗೆ
ಯೋಚಿಸಿದಷ್ಟೂ ಚಿಂತಿಸಿದಷ್ಟೂ.,
ಏರ್ಪಡುವ ಕಂದರಗಳ ಬಗ್ಗೆ..

ಯೋಚಿಸಿರುವೆ…!
ಹೈರಾಣಾಗಿರುವೆ…
ಯಾರೋ ಹೇಳಿದರು ಹಿತೈಷಿ ನಮ್ಮವರು
ಯಾವುದು ನಮ್ಮ ಕೈಯಲ್ಲಿಲ್ಲವೋ..
ಯೋಚಿಸುವುದರಲ್ಲೇನಿದೆ…!!
ಪರರ ಚಿಂತೆ ಏತಕಯ್ಯ..
ಊರ ಚಿಂತಿ ಮಾಡಿ ಮುಲ್ಲಾ ಬಡವಾದ..
ಸಾಲು ನೆನಪಾದವು..!!

ಈಗೀಗ…,.
ಯೋಚಿಸುವುದನ್ನು ಕೈಬಿಡಬೇಕೆಂದು
ಹೀಗೆ….
ಯೋಚಿಸಿದ್ದೇನೆ

ಇದೂ ಯೋಚಿಸುವ ವಿಷಯವೇ…!!
ಯೋಚಿಸಿಯೇ ಉದ್ಘರಿಸಬಹುದು

**********************

ಅನಸೂಯಾರವರ ಪೋಟೊ ಆಲ್ಬಂ

10 thoughts on “

  1. ಹೀಗೆ ಯೋಚಿಸಿದ್ದೇನೆ – ಈಗ ಗೊತ್ತಾಗಬೇಕಿದೆ – ದಾರಿ!!!!
    ನಿಮಗಾಗಲೇ ಗೊತ್ತಾಗಿದೆ!
    ನಮಗೀಗ ಗೊತ್ತಾಗಿದೆ ನಿಮ್ಮ ಕವಿತೆಗಳ ಓದಿದಮೇಲೆ!
    ಮೂರು ಕವಿತೆಗಳು ಅದ್ಭುತ!
    ಶುಭ ಅಭಿನಂದನೆಗಳು,
    ಧನ್ಯವಾದಗಳು

  2. ನಿಮ್ಮ ಕಾವ್ಯಾತ್ಮಕ ಸ್ಪಂದನೆಗೆ ಧನ್ಯವಾದಗಳು.

  3. ಅಭಿನಂದನೆಗಳು ಮೇಡಂ ನಿಮ್ಮ ಸಾಹಿತ್ಯ ಪಯಣ ಹೀಗೆಯೇ ಮುಂದುವರಿಯಲಿ

Leave a Reply

Back To Top