ಹನಿಬಿಂದು ಕವಿತೆ-ಸಹಾಯಕ

ಕಾವ್ಯ ಸಂಗಾತಿ

ಹನಿ ಬಿಂದು

ಸಹಾಯಕ

ಅಲ್ಲೊಂದು ಹನಿ ಕಾಯುತ್ತಿತ್ತು
ಭೂಮಿಗೆ ಉದುರಿ ಬಿದ್ದು
ಮಣ್ಣ ಮೇಲೆ ನಿಂತು
ಅದು ಯಾವುದೋ ಮೊದಲೇ
ಒಣಗಿ ಬಿದ್ದು ಹದವಾಗಿ ಕಾದಿಹ
ಬೀಜದೊಡನೆ ಸೇರಿ ಮೊಳಕೆ
ಒಡೆಯಲು ಸಹಕರಿಸೆ ತನ್ನ
ಜೀವನ ಪಾವನ ಎನುತ!

ಇಲ್ಲಿ ಯಾರೋ ತಿಂದು ಬಿಸಾಕಿದ
ಮಾವಿನ ಹಣ್ಣಿನ ಗೆರಟೆ ಒಳಗಿದ್ದ
ಬೀಜ ಒಣಗಿ ಹದವಾಗಿ ಬಾಳೆ ಗಿಡದ
ಬುಡದಲ್ಲಿ ಕಾಯುತ್ತಾ ಕುಳಿತಿತ್ತು
ತನಗಾಗಿ ಬಾನಿಂದ ಮುತ್ತುಗಳು
ಉದುರಿ ಹನಿ ಸಾಲು ಎನ್ನ
ತೋಯಿಸಿ ಅದೆಂತು ಚಿಗುರಾಗಿ
ನಾ ಬೇರು ಬಿಟ್ಟು
ಅಂಕುರಿಸುವೇನೋ ಎಂದು..

ಇದನ್ನು ತಿಳಿದ ಮೋಡಕ್ಕೆ
ಸಹಾಯ ಹಸ್ತ ಚಾಚುವ ಚಪಲ
ಬಿಳಿ ಮೇಘ ಕುಪಿತನಾದ
ಕರ್ರಗಾದ ಬಡಿದ ಸುರಿಸಿದ
ಹನಿ ನೀರ ಧಾರೆಯ ಧರೆಯತ್ತ
ಕಾದಿಹ ಬೀಜಕೆ ಮೊಳಕೆಯ
ಸಂತಸವ ನೀಡಿ ಮತ್ತೆ ಬಿಳಿಯಾದ
ಓಡಿ ದಿಗಂತದಿ ತೂರಿ ಕುಳಿತ
ತಾನೇನೂ ಮಾಡಿಲ್ಲ ಎಂಬಂತೆ!


ಹನಿ ಬಿಂದು

Leave a Reply

Back To Top