ಕಾವ್ಯ ಸಂಗಾತಿ
ರೋಹಿಣಿ ಯಾದವಾಡ
ಬಂಗಾರ
ಬಂಗಾರ ಯಾತಕ ಮೈಮ್ಯಾಲ
ಬಂಗಾರದಂಗ ನೀ ಇರುವಾಗ
ಕಾಡಿ ಬೇಡಿ ತಗೋದರಾಗ
ಸುಖಾ ಐತೇನೇಳು ಸರದಾರ
ಬಂಗಾರಿ ನೀ ನನ್ನ ಅನ್ನುವಾಗ
ಮತ್ಯಾಕ ಆಸೆ ಪಡಲಿ ನಾನೀಗ
ಬಂಗಾರ ಸ್ಥಿರವಲ್ಲ ನೆನಪೀಡ ನೀ
ಬಂಗಾರದಂಗ ಇರತಿನಿ ತಿಳಿ ನೀ
ಮನಭಾರ ಬಂಗಾರ ಬೇಕೇನ
ಮನಸ್ಸಿಗ ಸುಖ ಇರದಿರುವಾಗ
ನೀ ನಕ್ಕ ಮ್ಯಾಲ ನನ್ನ ನೋಡ
ಬಂಗಾರಕಿಂತ ನಾ ಹೊಳಿತೆನ
ತಿಜೂರ್ಯಾಗ ಮುಚ್ಚಿ ಇಡುದ್ಯಾಕ
ಬಂಗಾರಿ ನಾ ನಿನ್ನ ತೋಳಬಂದ್ಯಾಗ
ಸಿಟ್ಟು ಸೆಡುವು ಮಾಡುದಿಲ್ಲೀಗ
ಬಂಗಾರ ಬೇಡಿ ಕಾಡುದಿಲ್ಲ ನಾ
ನಿನಗ ನಾನ ಬಂಗಾರಿ ಆದರ
ನನಗ ನೀನ ಬಂಗಾರ ಇದ್ದಂಗ
ಬಂಗಾರ ಗೊಡವಿನ ಬ್ಯಾಡ
ನಮಗಿ ಇನಮ್ಯಾಲ ಸರದಾರ
ಬಂಗಾರಂಗ ಬಾಳ್ವೆ
ಮಾಡೂನ ನಾವು
ಜೀವನದೊಳಗ ಈಜಿ ಗೆದ್ದು ನೋವು.
ರೋಹಿಣಿ ಯಾದವಾಡ