ಕಾವ್ಯಯಾನ

ಅಪ್ಪಣ್ಣನಿಗೊಂದು ಮನವಿ

ಎ.ಎಸ್. ಮಕಾನದಾರ ಗದಗ

ಅಪ್ಪಣ್ಣ
ಎಷ್ಟೊಂದು ಕತ್ತಿಗಳು
ಸೇರಿಕೊಂಡಿವೆ ನಿನ್ನ ಹಸಬಿಯೊಳು
ಆ ಕತ್ತಿಗಳೇ ಮಾಡಿದ ಕ್ಷೌರ
ಹೇಗೆ ಸೂಚಿಸಿ ಬಿಡುತ್ತವೆ.

ಆ ಚಾಂದ ದಾಡಿ ಮುಸ್ಲಿಮನದೆಂದು
ಆ ಜುಟ್ಟು ಬ್ರಾಹ್ಮಣನನದೆಂದು
ಆ ಕೆಳದಾಡಿ ಸಿಖ್ಖನದೆಂದು
ಆ ಫ್ರೆಂಚ್ ದಾಡಿ ಕ್ರಿಶ್ಚಿಯನನದೆಂದು

ಮೀಸೆ ಬಿಟ್ಟರೊಂದು ಜಾತಿ
ಕೇಶ ಬಿಟ್ಟರೊಂದು ಜಾತಿ
ಮುಡಿ ಕಟ್ಟಿ ದಾಡಿ ಬಿಟ್ಟರೊಂದು ಜಾತಿ
ಎಲ್ಲವನು ಬೋಳಿಸಿಟ್ಟು
ಹೊಸದೊಂದು ವ್ಯವಸ್ಥೆ
ನಿರ್ಮಿಸಬಾರದಿತ್ತೇ

ಅಪ್ಪಣ್ಣ ನೀನು
ಅಣ್ಣ ಅಕ್ಕ ಅಲ್ಲಮರೊಂದಿಗೆ
ಅನುಭವ ಮಂಟಪದ ಚುಕ್ಕಾಣಿಯಾಗಿದ್ದಿ

ಯಾಕಣ್ಣ ಈ ವ್ಯವಸ್ಥೆಗೆ
ಕಡಿವಾಣ ಹಾಕದೆ ಸುಮ್ಮನಾದೆ
ಗಂಡಲ್ಲದೆ-ಹೆಣ್ಣಲ್ಲದೆ ಒಳಗಿರುವ
ಆತ್ಮಕ್ಕೆ ಅನುಭವ ಮಂಟಪದಲಿ
ಅಂತರಂಗ ಶುದ್ಧಿ ಮಾಡಿದ ನೀನೇ
ಬಹಿರಂಗ ಶುದ್ಧಿಗಾಗಿ
ಮಾಡಿದ ಈ ಕ್ಷೌರದಿಂದ
ಅದ್ಹೇಗೆ ಅಶಾಂತಿ ತಾಂಡವವಾಡುತ್ತಿದೆ ?

ಅಪ್ಪಣ್ಣ
ನಿನಗೆ ನೆನಪಾಗಲಿಲ್ಲವೇ
ಶೂನ್ಯನಾದ ಅಣ್ಣ

ಬೆತ್ತಲಾದ ಅಕ್ಕ

ಜಗದ ಕೊಳೆ ತೊಳೆಯುವ ಮಾಚಿದೇವ

ತನ್ನ ಚರ್ಮವನೇ ಕತ್ತರಿಸಿ ಚಡಾವು
ಮಾಡಿದ ಹರಳಯ್ಯ ಕಲ್ಯಾಣಮ್ಮ

ಯುದ್ಧಕ್ಕೆ ವಿದಾಯವಿತ್ತ ಅಶೋಕ

ಬುದ್ಧನಾದ ಸಿದ್ಧ

ಅಂತೆಯೇ
ಎಸೆದು ಬಿಡಲು ಹೇಳು
ಎಲ್ಲ ಸಹೋದರರಿಗೆ
ಈ ಜಾತಿ ಸೂಚಕ ಕತ್ತಿಗಳನು……..

********

Leave a Reply

Back To Top