ಕಾವ್ಯ ಸಂಗಾತಿ
ಅನಸೂಯ ಜಹಗೀರದಾರ.
ಮೂರು ಪ್ರಶ್ನೆಗಳು
ಮಾತಿನಲಿ ವೇಗ
ನಡೆಯಲಿ ಧಾವಂತ
ವಿಷಯಾಸಕ್ತಿ
ಪ್ರಣಯ ರಸಕಾವ್ಯದ ಓಘ..
ಎಲ್ಲವೂ ಅವಳಿಗಾಗಿ
ನೆಚ್ಚಿದ ಪ್ರೀತಿಗಾಗಿ
ನೋಡಲು
ಸ್ಪರ್ಶಿಸಲು
ಉತ್ತುಂಗ ಶೃಂಗಾರದ
ಶೃಂಗಕ್ಕೇರಲು
ಕಾತರ ಆತುರ
ತಲ್ಲಣ ತಳಮಳ
ಉದ್ವೇಗ
ಭಾವೋನ್ಮಾದ…
ಓ..! ಪ್ರೇಮ ತಪಸ್ವಿ..!!
ಫಲಿತವಾಯ್ತೆ ತಪ..!!
ದಕ್ಕಿತೆ ಪ್ರೇಮ..!!
ಅವಳ ನಡೆಯಲಿ
ನುಡಿಯಲಿ
ಲಾಲಿತ್ಯದಲಿ
ಮುದವಿದೆ ಹದವಿದೆ
ಉನ್ಮತ್ತಗೊಳಿಸುವ
ಮಧುವಿದೆ
ನಿನ್ನೆದೆಯ ಬಟ್ಟಲಲಿ
ಅವಳ ಭಾವಲಹರಿ
ತುಂಬಿ ತುಳುಕಿದೆ
ಮದವೇರಿಸಿದೆ
ನೋಡಬಹುದು
ಸ್ಪರ್ಶಿಸಬಹುದು
ಆತಂಕವಿಲ್ಲ ಅಡಚಣೆಯಿಲ್ಲ..
ದುಗುಡ ದುಮ್ಮಾನವಿಲ್ಲ
ನಿರಾತಂಕ ವದನೆ
ಪ್ರಶಾಂತ ನಗು…!!
ಸಮಾಗಮದಲಿ ತೇಲುವ ಸುಖ
ಮನೋರಮೆಯಲಿ ಲೀನವಾಗುವ
ಅದಮ್ಯ ಅನುಭೂತಿ..!
ಬಯಕೆ ನಿನ್ನದು
ಕನಸು ನಿನ್ನದು
ನನಸಾಗಿ ರೂಪುಗೊಳ್ಳುವ
ಕನವರಿಕೆ ನಿನ್ನದು
ಸಾಕಾರತೆಯ ಕಡೆಯ ನಡೆ ನಿನ್ನದು
ಆದರೆ….;
ಪ್ರಶ್ನೆಗಳಿವೆ ಇಲ್ಲಿ..
ಉತ್ತರ ಸಿಕ್ಕಿರಲಿಕ್ಕಿಲ್ಲ
ಇದೂವರೆಗೂ..
ಬಹುತೇಕ..ಎಲ್ಲರಿಗೂ..,
ಮೊದಲ ಪ್ರಶ್ನೆ ಇದು:
ಸಾಕಾರತೆ ಸಂಪೂರ್ಣಗೊಳ್ಳುವುದೆ…?!
ಏಕೆಂದರೆ…,
ಅಪೂರ್ಣವಾದುದನ್ನು ಪೂರ್ಣಗೊಳಿಸುವ ತವಕದಲಿ ಮತ್ತೇ ಅಪೂರ್ಣತೆಯತ್ತ..ನಡಿಗೆ..!
ಅಲ್ಪತೃಪ್ತಿಯ.. ಸಂಪೂರ್ಣಗೊಳ್ಳದ
ತಾತ್ಕಾಲಿಕತೆಯ ಮರೀಚಿಕೆ…!
ಮತ್ತೊಂದು ಪ್ರಶ್ನೆ:
ಅವಳಲಿ ಜೀವ ತುಂಬಬಲ್ಲೆಯಾ..?!
ಏಕೆಂದರೆ…’,
ಕಡೆದ ಶಿಲ್ಪವದು
ಸಾಲಭಂಜಿಕೆ..
ಪ್ರತಿಕ್ರಯಿಸದು..!
ಸಂವೇದಿಸದು..!!
ಅದೊಂದು ಶಿಲಾಮೂರ್ತಿ
ಉಳಿಪೆಟ್ಟು ಸತತ ತಿಂದ
ಕಲ್ಲುಗೊಂಬೆ..!
ನೋಡುವ ಮೊದಲು
ಸ್ಪರ್ಶಿಸುವ ಮೊದಲು
ಇದ ತಿಳಿಯಬೇಕಿತ್ತಲ್ಲ….!
ಮೆಚ್ಚಿದೆ..! ನಿಜ ತಪಃಶಕ್ತಿಯಿದೆ
ನೆನಪಾಯ್ತು..ತಾಪಸಿ ನೀನು.
ತುಂಬಬಹುದು ಜೀವವ..
ಪರಾಶರ ಕೃತಕ ಕತ್ತಲಿನಂತೆ ..ಸೂರ್ಯನನ್ನೇ ಮುಳುಗಿಸಿದಂತೆ …!
ನಿಜ..ಮಹೋನ್ನತ ವಾಂಛೆಯದು..!
ಪ್ರೇಮವೇ ಹಾಗೆ…!
ಕೈಗೂಡಬಹುದು..ನಿನ್ನ ಆಶಯ..!
ಅಭಿನಂದನೆಗಳು ನಿನಗೆ..!!
ಆದರೆ….
ಮತ್ತೊ ಒಂದು ಪ್ರಶ್ನೆಯಿದೆ
ಜೀವ ತುಂಬಿದ ಜೀವವ ಕಾಪಿಡಬಲ್ಲೆಯಾ..?!
ಏಕೆಂದರೆ….,
ಆ ಜೀವ ಮತ್ತೇ ಪಾಶಾಣವಾಗದಂತೆ
ಸದಾ ಸಂವೇದಿಸುವಂತೆ…
ಹೃದಯ ಮತ್ತೇ ಕಲ್ಲಾಗದಂತೆ…!!!
ಸಾಲಭಂಜಿಕೆ ಜೀವ ತಳೆದಂತೆ..!!
ಹೇಳು ಜೀವವೆ…?! .ಉತ್ತರ..ಹೇಳಬಲ್ಲೆಯಾ..??
ಉತ್ತರವಿರಲಿಕ್ಕಿಲ್ಲ….ಬಹುತೇಕ ಎಲ್ಲರಲೂ..!!
ಮತ್ತೇ…ನಿನ್ನಲ್ಲೂ…!!!
ಅದ್ಭುತ..
Thank you ..
ತುಂಬಾ ಕಾಡುವ ಕವಿತೆ
ಮನಸ್ಸಿನಲ್ಲಿ ಏನೊ ಕೊರತೆ
ಇದುವರೆಗೆ ಮನಸ್ಸಿಗೆ ಬಂದಿರಲಿಲ್ಲ
ಅದೇ ಕಾಡುತ್ತದೆ ಮತ್ತೆ ಮತ್ತೆ
Thank you sir.