ಕಾವ್ಯಯಾನ

ಗಝಲ್

ಕಾಫಿ಼ಯಾನಾ………….

Clear Wine Glass

ಎ.ಹೇಮಗಂಗಾ

ಮಧುಪಾನದ ನಶೆಯಲ್ಲಿ ಭೂತವನ್ನು ಮರೆಯಬೇಕಿದೆ
ಬೆಂಬಿಡದೇ ಕಾಡುವ ಕಹಿಕ್ಷಣಗಳಿಗೆ ಗೋರಿ ಕಟ್ಟಬೇಕಿದೆ

ಮರೆಯಲಾಗದ ನೋವ ಮರೆವುದಾದರೂ ಹೇಗೆ ಸಾಕಿ?
ಅಂತರಂಗದ ಬಿಕ್ಕುಗಳನ್ನು ಅಲ್ಲಲ್ಲಿಯೇ ಹೂಳಬೇಕಿದೆ

ನೋವು, ಯಾತನೆಗಳು ಹೊಸದಲ್ಲ ಎಲ್ಲ ಅವಳಿತ್ತ ಕೊಡುಗೆ
ಅವಳಿಗೆಂದೇ ಪ್ರತಿಕ್ಷಣ ಮಿಡಿದ ಧಮನಿಗಳ ಸಂತೈಸಬೇಕಿದೆ

ಬಾಳು ಪಾಳು ಬಿದ್ದ ಮನೆಯಂತೆ ಭಣಗುಡುತ್ತಲೇ ಇದೆ ಸಾಕಿ
ಅವಳನ್ನೇ ಬಯಸುವ ಹುಚ್ಚುಮತಿಗೆ ಅರಿವಳಿಕೆ ನೀಡಬೇಕಿದೆ

ಗರಿ ಚಾಮರಗಳು ತೊನೆದಂತೆ ಕಂಡಿವೆ ಮಧುಪಾತ್ರೆಯಲ್ಲಿ
ಭ್ರಮೆಯನ್ನೇ ನಿಜವೆಂದು ನಂಬಿದ ಮನಕೆ ತಿಳಿಹೇಳಬೇಕಿದೆ

ಕಾಣದ ಕೈ ಕದಡುತ್ತಲೇ ಇದೆ ಜೊಂಡಾದ ಎದೆಗೊಳವನ್ನು
ಮೊರೆಯಿಡುವ ಹೃದಯಕೆ ಮೌನಪಾಠವನು ಕಲಿಸಬೇಕಿದೆ

ಮಧುಶಾಲೆಯ ಪ್ರತಿ ಭೇಟಿಯೂ ಸಾವಿನ ಮನೆಗಲ್ಲವೇ ಸಾಕಿ?
ನೆನಪುಗಳೇ ವಿಷವಾಗಿರೆ ಕೊನೆಗೊಮ್ಮೆ ಉಸಿರು ನಿಲ್ಲಿಸಬೇಕಿದೆ

*********

Leave a Reply

Back To Top