ಕಾವ್ಯ ಸಂಗಾತಿ
ಶಂಕರಾನಂದ ಹೆಬ್ಬಾಳ
ಗಜಲ್


ಬೂದಿಯಾದ ಬದುಕಿನಲ್ಲಿ ನಿರಾಶೆ
ಹುಟ್ಟಿತಲ್ಲ ಇಂದು
ಹೊತ್ತಿ ಉರಿವ ವಹ್ನಿಯಲಿ ಭಾವಗಳ
ಸುಟ್ಟಿತಲ್ಲ ಇಂದು
ದುಃಖದ ಕಡಲಲ್ಲಿ ಶಂಖದೊಳಗಿನ
ಹುಳುವಾದೆ ನಾನು
ಶವಗಳ ರಾಶಿಯನು ಕಂಗಳೆದುರಲ್ಲಿ
ಒಟ್ಟಿತಲ್ಲ ಇಂದು
ಜೀವವನ್ನು ಕಸಿಯುವ ದೇವರಿಗೆ
ಕಿಂಚಿತ್ತು ಕರುಣೆಯಿಲ್ಲ
ಮುಗ್ದಹೃದಯಗಳ ಅಳಲು ಮುಗಿಲು
ಮುಟ್ಟಿತಲ್ಲ ಇಂದು
ತುಮುಲದ ಮನಸು ವಿಲಿವಿಲಿ
ಒದ್ದಾಡುವ ಮೀನಾಗಿದೆ
ಕಂಬನಿಧಾರೆ ಹರಿದು ಶೋಕಕೆರೆಯ
ಕಟ್ಟಿತಲ್ಲ ಇಂದು
ಕ್ರೂರಿತನಕೆ ಧಿಕ್ಕಾರ ಕೂಗಿದನಲ್ಲ
ಪ್ರಲಾಪಿಸುತ ಅಭಿನವ
ಸಾಂತ್ವನದ ಸಂಕಲ್ಪವನು ಕವಿತೆಯು
ತೊಟ್ಟಿತಲ್ಲ ಇಂದು