ನಾನು ಓದಿದ ಪುಸ್ತಕ

ದುರಿತಕಾಲದ ದನಿ

ವರ್ತಮಾನದ ಕಷ್ಟಕಾಲದ ಕವಿತೆಗಳು!

ಕೃತಿ: ದುರಿತಕಾಲದ ದನಿ

ಕವಿ: ಕು..ಮಧುಸೂದನ, ರಂಗೇನಹಳ್ಳಿ

ಪ್ರಕಾಶನ: ವಿಶ್ವಶಕ್ತಿ ಪ್ರಕಾಶನ

ರಾಣೇ ಬೆನ್ನೂರು

ಪುಟ: 72

ಬೆಲೆ: 100/-

      ಕು.ಸ.ಮಧುಸೂದನ ರಂಗೇನಹಳ್ಳಿ ಯವರ ’ದುರಿತಕಾಲದ ದನಿ’ ಹೆಸರೇ ಹೇಳುವಂತೆ ವರ್ತಮಾನದ ವಾಸ್ತವವನ್ನೆಲ್ಲಾ ಸಾರಾಸಗಟಾಗಿ, ತುಸು ಕಟುವೇ ಎನಿಸುವ ಶೈಲಿಯಲ್ಲಿ ಬರೆಸಿಕೊಂಡ ಕವಿತೆಗಳ ಸಂಕಲನ.

   ‘ನನ್ನ ಕವಿತೆ ಕುರಿತಂತೆ’ ಎ಼ಂದು ತಮ್ಮ ಕವಿತೆಗಳ ಬಗ್ಗೆ ತಮ್ಮದೇ ಶೈಲಿಯ ವಿವರಣೆಯೇ ಅದ್ಭುತವಾಗಿದೆ.. ಅವರ ಮಾತುಗಳಲ್ಲೇ ಹೇಳಬೇಕೆಂದರೆ “ಒಂದು ಕಡೆ ಜಾಗತೀಕರಣವು ನಮ್ಮ ಸ್ಥಳೀಯ ಸಂಸ್ಕೃತಿಯನ್ನು ನಾಶಪಡಿಸುತ್ತ ನಡೆದಿದ್ದರೆ, ಇನ್ನೊಂದೆಡೆ ಮತೀಯ ಮೂಲಭೂತವಾದ ನಮ್ಮ ಬಹುಸಂಸ್ಕೃತಿಯ ಪರಂಪರೆಯ ಮನೆಯ ಹಂದರವನ್ನು ಕೆಡವಲು ಹೊಂಚು ಹಾಕುತ್ತಿದೆ, ಪ್ರಭುತ್ವ ಧರ್ಮದ ಆಸರೆಯೊಂದಿಗೆ ಅಧಿಕಾರ ಚಲಾಯಿಸುವ ಮಾತಾಡುತ್ತಿದ್ದರೆ ಧರ್ಮವೋ ಸ್ವತಃ ತಾನೇ ಪ್ರಭುತ್ವವಾಗುವ ದಿಸೆಯಲ್ಲಿ ತನ್ನನ್ನು ಅಣಿಗೊಳಿಸಿಕೊಳ್ಳುತ್ತಿದೆ. ಹೀಗೆ ಬಂಡವಾಳ, ಧರ್ಮ, ಪ್ರಭುತ್ವಗಳು ಒಟ್ಟಾಗಿ ಛಿದ್ರಗೊಳಿಸಲು ಹೊರಟಿರುವ ಒಂದು ಸಮಾಜವನ್ನು ಎಚ್ಚರಿಕೆಯ ಸ್ಥಿತಿಯಲ್ಲಿಡಲು ಸಾಹಿತ್ಯ ಮತ್ತು ಸೃಜನಶೀಲ ಕಲಾಪ್ರಕಾರಗಳು ಮುಂದಾಗಬೇಕಿದೆ.” ‘ಕಲೆಗಾಗಿ ಕಲೆ’ ಮಾತನ್ನು ಬಿಟ್ಟು ಸಮುದಾಯಕ್ಕಾಗಿ ಸಾಹಿತ್ಯ!’ ಈ ವರ್ತಮಾನದ ವಾಸ್ತವವೇ ದುರಿತಕಾಲದ ದನಿಯಲ್ಲಿ ಕವಿತೆಗಳಾಗಿ ಮೂಡಿಬಂದಿವೆ.

ಈ ಕವಿತೆಗಳು ನಮ್ಮನ್ನು ನಾವು ಅರ್ಥಮಾಡಿಕೊಳ್ಳಲು ಮಾತ್ರವಲ್ಲದೇ, ನಾವಲ್ಲದ ನಮ್ಮ ಹೊರಪ್ರಪಂಚವನ್ನೂ ಅರ್ಥ ಮಾಡಿಕೊಳ್ಳುವ ಕ್ರಿಯೆಯಲ್ಲಿ ತೊಡಗಿವೆ.

‘ರಣ ಹಸಿವಿನಿಂದ’ ಕವಿತೆಯಲ್ಲಿ ದೇಶದಲ್ಲಿನ ದ್ವೇಷ ರಾಜಕಾರಣದ ಬಗ್ಗೆ ಹೀಗೆ ಬರೆಯುತ್ತಾರೆ:

ಮೊನ್ನೆಮೊನ್ನೆಯವರೆಗೂ ನೆಡೆದ ಅಕಾರಣ ಯುದ್ಧಗಳಿಗೀಗ

ಸಕಾರಣಗಳ ಪಟ್ಟಿ ಮಾಡುತ್ತಾ ಕುಳಿತಿದ್ದಾರೆ

ತರಿದ ತಲೆಗಳ ಭೋಗಿಸಿದ ಯೋನಿಗಳ

ಕಚ್ಚಿದ ಮೊಲೆಗಳ

ಕಲಸಿಹಾಕಿದ ಭ್ರೂಣಗಳ ನಿಖರ ಅಂಕಿಅಂಶಗಳಿಗಾಗಿ

ತಲೆ ಕೆರೆದುಕೊಳ್ಳುತ್ತಿದ್ದಾರೆ

ಪ್ರತಿಮನುಷ್ಯನಿಗೂ ಇರಬಹುದಾದ ಮೃಗದ ಮುಖವಾಡವ

ಕಳಚಲೆತ್ನಿಸಿದಷ್ಟೂ ಗೊಂದಲವಾಗುವುದು ಖಚಿತ

ನೋಡು ಇದ ಬರೆಯುವಾಗಲೂ ಕೆಕ್ಕರಿಸಿ ನೋಡುತಿದೆ ಮೃಗವೊಂದು

ರಣಹಸಿವಿನಿಂದ!

 ಇನ್ನೊಂದು ಕವಿತೆಯಲ್ಲಿ ಇಂದಿನ ಕಷ್ಟಕಾಲದ ಬಗ್ಗೆ ಹೀಗೆ ಹೇಳುತ್ತಾರೆ.

ಖಾಲಿ ಶಿಲುಬೆಗೆ ಹೊಡೆಯುವುದಿಲ್ಲ ಯಾರೂ ಮೊಳೆಗಳ

ಕಷ್ಟ ಕಾಲದ ಕವಿತೆಗಳು ಅನ್ನದ ಅಗುಳಾಗುವುದಿಲ್ಲ.

ಬಯಲ ಗಾಳಿಯಲಿ ಹಣತೆ ಉರಿಯುವುದಿಲ್ಲ.

ಕಷ್ಟ ಕಾಲದ ಮಾತುಗಳಿಗೆ ಕೊನೆಯಿರುವುದಿಲ್ಲ….

‘ಬಾ ಮಗುವೆ ಬಾ ನನ್ನ ಹತ್ತಿರಕೆ’ ಕವಿತೆಯಲ್ಲಿ ನಿಸರ್ಗದಿಂದಲೇ ಪಾಠ ಹೇಳಿಕೊಡುವ, ಯಾವ ಮಕ್ಕಳಿಗೂ ತಂದೆಯಾಗಿಬಿಡುವ ಅಂತಃಕರಣದ ಅಪ್ಪನಾಗಲಾರದ ಅಪ್ಪ ಎಂಬ ಕವಿತೆಯ ಮಾತು ಮನವ ಮೂಕವಾಗಿಸುತ್ತದೆ..

ಪ್ರಭುತ್ವದ ಅಸಹಿಷ್ಣುತೆಯ ಬಗೆಗಿನ ಕವಿತೆಯಲ್ಲಿ

ಭಯಗೊಂಡ ಬರಹಗಾರರು

ಇದೀಗ ಪುರಾಣ ಪುಣ್ಯ ಕತೆಗಳ ಪುನರ್ ಸೃಷ್ಟಿಸುತ್ತ

ದಣಿಗಳ ಪುರಸ್ಕಾರಕ್ಕಾಗಿ ಕಾಯುತ್ತ ಕೂತಿದ್ದಾರೆ!

ಮನುಷ್ಯನ ಅಸಹಾಕತೆಯನ್ನು ಕಟ್ಟಿ ಕೊಡುವ ಕವಿತೆ ಹೀಗೆ ಮುಗಿಯುತ್ತದೆ

ಛಿದ್ರಗೊಂಡ ಆತ್ಮದ ತುಣುಕುಗಳನ್ನು

ಮೂಸಿ ನೋಡಿದ ಬೀದಿ ನಾಯಿ ತಿರುಗಿ ನೋಡಿ

ಬೊಗುಳಿ ಓಡಿಹೋಯಿತು

ಕೊಳೆತ ಆತ್ಮಗಳ ಕತೆ ಇಷ್ಟೇನೆ!!

ಪ್ರಭುತ್ವದ ಸರ್ವಾಧಿಕಾರಿ ಅಟ್ಟಹಾಸದ ಬಗ್ಗೆ ಕವಿತೆಯೊಂದು ಹೀಗೆ ಸಾಗುತ್ತದೆ.

ರಾಜರಸ್ತೆಯ

ವಿಜಯೋತ್ಸವದ ಘೋಷಗಳ ನಡುವೆ

ಕ್ಷೀಣವಾಗಿ ಕೇಳುವ

ಹಸಿದವರ ಪ್ರಲಾಪದ

ಆಲಾಪಗಳೊಳಗೆ ಸಿಂಹಾಸನಗಳ ಉರುಳಿಸುವ

ಶಾಪದ ಬಿಸಿಯಿತ್ತು.

ಬರಗಾಲ ತಂದೊಡ್ಡುವ ಹಸಿವಿನ ಬಗ್ಗೆ ಬರೆಸಿಕೊಂಡ ಕವಿತೆಯ ಸಾಲುಗಳು:

ಮಾಮೂಲಿನಂತಿಲ್ಲ ರಾತ್ರಿ

ಹಸಿದವರಾರೂ ಮಲಗಿಲ್ಲ ಯಮ ಯಾತನೆಯಲ್ಲಿ

ಉಂಡವರೂ ಮಲಗಿಲ್ಲ ಹೊಟ್ಟೆ ಉಬ್ಬರದಲ್ಲಿ !

ನಾಯಕರು ಮತ್ತು ಪಾರಿವಾಳಗಳು, ಬರೆದು ಬಿಸಾಕಿದ ಕಾಗದದ ಚೂರಂತೆ… ದುಸ್ವಪ್ನದಲ್ಲಿನ ಬಂದು ಹೀಗೆ ಹಸಿರಿಗೇಕೆ ಉರಿ ಹಚ್ಚಿದೆ ಅದೇನಂತಹ ದ್ವೇಷಾಗ್ನಿಯಿತ್ತು ನಿನ್ನೊಳಗೆ ??”” ಜಂಗಮ ಸ್ಥಾವರ…. ಹೀಗೆ ಇಲ್ಲಿನ ಇಲ್ಲಿನ ಕವಿತೆಗಳು ಸಮಕಾಲೀನ ಸಮಾಜದ ಎಲ್ಲ ಆಗುಹೋಗುಗಳಿಗೂ ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸುತ್ತ ಸಾಗುತ್ತವೆ.

ಎಲ್ಲಾ ೫೭ ಕವಿತೆಗಳೂ ನಮ್ಮ ಭ್ರಷ್ಟ ವ್ಯವಸ್ಥೆಗೆ ಹಿಡಿದ ಕೈಗನ್ನಡಿಗಳೇ.. ರೋಷ ಅಸಹಾಯಕತೆಯ ಶಬ್ಧವಾಗದ ದನಿಗಳು… ಇದನ್ನ ಓದಿದ ಕೆಲವು ಮನಗಳಾದರೂ ಸಶಭ್ಧವಾಗಿ ಪ್ರತಿಭಟನೆಗೆ ನಿಂತರೇ ಅಲ್ಪಸ್ವಲ್ಪ ಬದಲಾವಣೆ ಸಾಧ್ಯವೇನೋ…

ಕುರುಡರ ಸಂತೆಯಲ್ಲಿಯೂ

ಕನ್ನಡಿ ಮಾರುವ ಧೈರ್ಯ

ಮಾಡುವವನೇ ನಿಜವಾದ ಕವಿ!

ಎನ್ನುವಲ್ಲಿ ಕವಿಯೊಬ್ಬನ ಎದೆಗಾರಿಕೆ ಕಂಡು ಬರುತ್ತದೆ.

ಹೀಗೆ ಇವತ್ತಿನ ಪ್ರಕ್ಷುಬ್ದ ಪರಿಸ್ಥಿತಿಯಲ್ಲಿ ಯಾರಾದರೂ ಹೇಳಲೇಬೇಕಾದ್ದನ್ನು ತಮ್ಮಕವಿತೆಗಳ ಮೂಲಕ ಹೇಳುತ್ತ ಒಟ್ಟು ಸಮಾಜದ ದನಿಯಾಗಲು ಕವಿ ಪ್ರಯತ್ನಿಸಿದ್ದಾರೆ

ಹೌದು ಇಲ್ಲಿ ಕವಿತೆಗಳು ಮಾತನಾಡುತ್ತವೆ…. ಕವಿತೆಗಳ ಮಾರುಕಟ್ಟೆಯ ಸರಕನ್ನಾಗಿಸಿದ ಪ್ರಕಾಂಡ ಪಂಡಿತರುಗಳ ಮಾತುಗಳನ್ನು ಕವಿತೆಗಳು ಓದುವವರ ದನಿಯಲ್ಲಿ ಧ್ವನಿಸಿ ಸುಳ್ಳಾಗಿಸಲೀ ಲೇಖಕರ ಸಮಾಜ ವ್ಯವಸ್ಥೆ ಸುಧಾರಣೆ ಮಾಡುವ ಕವಿಯ ಆಶಯ ಈಡೇರಲೆಂದು ನಾವು ಆಶಿಸಬಹುದು! ಇಂತಹ ಕವಿತೆಗಳು ಜನರನ್ನು ತಲುಯಪಿದಾಗಲೇ ಕವಿಯ ಪ್ರಯತ್ನಕ್ಕೆ ಸಾರ್ಥಕತೆ ಬರುವುದು. ಕನ್ನಡದ ಓದುಗರು ಈ ಸಂಕಲನವನ್ನು ಕೊಂಡು ಓದಬೇಕಾಗಿದೆ.

ಪ್ರಭುತ್ವದ ಅಟ್ಟಹಾಸದ ಬಗ್ಗೆ ಹೇಳು ಕವಿತೆ ಹೀಗಿದೆ.

ನಡುವೆ ಎತ್ತಿದ ಎತ್ತರದ ಗೋಡೆಗಳು ಸರಳುಗಳು

ಅವರಿಗೊ ನಮಗೊ?

ಪ್ರಭುತ್ವದ ನಾಮಪಲಕವೇ ರಾಚುತ್ತಿದೆ ಕಣ್ಣಿಗೆ!

ಹೀಗೆ ಪ್ರಾರಂಭವಾಗುವ ಕವಿತೆ ಕೆಳಗಿನ ಸಾಲುಗಳೊಂದಿಗೆ ಮುಗಿಯುತ್ತದೆ

ಕೊಳೆತ ಆತ್ಮಗಳನ್ನಿಟ್ಟುಕೊಂಡ

ಮನೆ ಮಸಣವಾಗುತ್ತಿದೆ

ದಣಿಗಳ ವಿಜಯೋತ್ಸವಗಳ ಸಂಭ್ರಮ ಸಡಗರಗಳ

ಗವಜುಗದ್ದಲ ಮಿತಿ ಮೀರುತಿದೆ.

ಇಡೀ ಸಂಕಲನದ ಆಶಯವನ್ನು ಕೆಳಗಿನ ಪುಟ್ಟ ಕವಿತೆಯೊಂದೇ ಹೇಳಿಬಿಡುತ್ತದೆ.

ಕ್ರಾಂತಿಕಾರಿ

ಬರುವುದಿಲ್ಲ ಆಕಾಶದಿಂದ ಹಾರಿ

ನಮ್ಮ ಹಾಗೆಯೇ ಅವನೂ

ಅರಸುತ್ತಿದ್ದಾನೆ ಕ್ರಾಂತಿಯ ದಾರಿ

ಕವಿತೆಯ ಬೆಂಕಿ ಕಡ್ಡಿ ಗೀರಿ!

**************

ಪದ್ಮಜಾ ಜೋಯಿಸ್

One thought on “ನಾನು ಓದಿದ ಪುಸ್ತಕ

  1. ಕಷ್ಟಕಾಲದಲ್ಲಿ ಕವಿತೆಗಳು ಅನ್ನದ ಅಗುಳಾಗುವುದಿಲ್ಲ
    ಬಯಲ ಗಾಳಿಯಲ್ಲಿ ಹಣತೆ ಉರಿಯುವುದಿಲ್ಲ

    ಚೆಂದ ವಿಶ್ಲೇಷಣೆ. ವರ್ತಮಾನಕ್ಕೆ ಮುಖಾಮುಖಿಯಾದ
    ಕವಿತೆಗಳು…

Leave a Reply

Back To Top