ಕಾವ್ಯ ಸಂಗಾತಿ
ಎ.ಹೇಮಗಂಗಾ
ಕಾಫಿಯಾನಾ..
ನಾ ಮಣ್ಣಲ್ಲಿ ಮಣ್ಣಾಗುವ ಮುನ್ನ ಕಾದ ಕಂಗಳ ಚುಂಬಿಸಿಬಿಡು
ನಾ ಚಿರನಿದ್ರೆಗೆ ಜಾರುವ ಮುನ್ನ ಹಣೆಗೆ ಸಿಂಧೂರ ಹಚ್ಚಿಬಿಡು
ಕಂಡ ಕನಸು ನನಸಾಗುವುದಿಲ್ಲ ಎಂಬುದೀಗ ಖಾತ್ರಿಯಾಗಿದೆ
ನಾ ಗೋರಿ ಸೇರುವ ಮುನ್ನ ಬಿಗಿತೆಕ್ಕೆಯಲಿ ಬಂಧಿಸಿಬಿಡು
ಈ ಜನ್ಮದಲ್ಲಿ ಬಾಳ ಸಂಗಾತಿಯಾಗುವ ಭಾಗ್ಯ ನನ್ನದಾಗಲಿಲ್ಲ
ನಾ ನಿನ್ನ ಅಗಲುವ ಮುನ್ನ ಪ್ರೀತಿ ಮಾತುಗಳ ಉಸುರಿಬಿಡು
ಯಾರ ಕೆಟ್ಟ ದೃಷ್ಟಿ ತಾಗಿತೋ ನಮ್ಮಿಬ್ಬರ ಒಲವಿಗೆ ತಿಳಿಯದು
ನಾ ಪ್ರಾಣ ತ್ಯಜಿಸುವ ಮುನ್ನ ತುಟಿಜೇನನು ಸವಿದುಬಿಡು
ನೀ ಬೇಡವೆಂದರೂ ಹೇಮ ಸಾವ ಮನೆಯ ಸೇರಲೇಬೇಕಿದೆ
ನಾ ನಿರ್ಜೀವಿಯಾಗುವ ಮುನ್ನ ನನ್ನೊಳು ಒಂದಾಗಿ ಸುಖಿಸಿಬಿಡು
ಮನ ಆರ್ದ್ರಗೊಂಡಿತು..ಪ್ರೀತಿಗಾಗಿ ಹಂಬಲಿಸುವ ಜೀವದ ಜೀವಂತ ಸಾಲುಗಳು..