ವಿಶೇಷ ಬರಹ
ಔಷಧಗಳ ಆಗರ…….
ಮುರುಗಲು ಹಣ್ಣು/ ಕೋಕಂ/ಪುನರ್ಪುಳಿ
ಅಕ್ಷತಾ ಜಗದೀಶ.
ಬೇಸಿಗೆ ಬಂತೆಂದರೆ ಮಲೆನಾಡು ಹಾಗೂ ಕರಾವಳಿ ಪ್ರದೇಶದಲ್ಲಿ ಕಾಣಸಿಗುವ ಹಣ್ಣುಎಂದರೆ ಮುರುಗಲು ಅಥವಾ ಕೋಕಂ. ಸಸ್ಯ ಶಾಸ್ತ್ರೀಯ ಹೆಸರು ಅಂದರೆ ವೈಜ್ಞಾನಿಕ ಹೆಸರು Garcinia Indica. ಕನ್ನಡದಲ್ಲಿ ಮುರುಗಲು, ಪುನರ್ಪುಳಿ , ಇಂಗ್ಲೀಷ್ ಹಿಂದಿಯಲ್ಲಿ ಕೋಕಂ. ಸಂಸ್ಕೃತದಲ್ಲಿ ವೃಕ್ಷಾಮ್ಲ ಎಂದು ಕರೆಯಲಾಗುತ್ತದೆ.
ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ಬೆಳೆಯುವ ಈ ಮರವನ್ನು ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೇರಳದಲ್ಲಿ ಆಹಾರದಲ್ಲಿ ಹುಣಸೆಹಣ್ಣಿನ ಪರ್ಯಾಯವಾಗಿ ಬಳಸಲಾಗುತ್ತದೆ. ಹುಳಿ ಸಿಹಿ ಮಿಶ್ರಿತವಾದ ಈ ಹಣ್ಣು ಕೆಂಪು, ಕಡುಗೆಂಪು ಬಣ್ಣವನ್ನು ಹೊಂದಿರುತ್ತದೆ. ಹಣ್ಣಿನ ಒಳಗೆ ಬೀಜಗಳಲ್ಲಿರುವ ತಿರುಳು ಇರುತ್ತದೆ. ಮುರುಗಲು ಹಣ್ಣು ಹೆಚ್ಚಾಗಿ ಮಾರ್ಚ ,ಏಪ್ರಿಲ್, ಮೇ ತಿಂಗಳು ತಿಂಗಳಿನಲ್ಲಿ ನೋಡಬಹುದು. ಮಳೆಗಾಲ ಶುರುವಾದರೆ ಈ ಹಣ್ಣುಗಳು ಸಿಗುವುದಿಲ್ಲ. ತಾಜಾ ಹಣ್ಣುಗಳು ಸಿಗುವ ಸಮಯದಲ್ಲಿ ಅವುಗಳ ಉಪಯೋಗ ಪಡೆದುಕೊಂಡರೆ ವರ್ಷದ ಬೇರೆ ಬೇರೆ ಕಾಲಗಳಲ್ಲಿ ಹಣ್ಣುಗಳನ್ನು ಒಣಗಿಸಿ ಸೆಪ್ಪೆಗಳನ್ನಾಗಿಸಿ ಬಳಸಬಹುದಾಗಿದೆ. ಕೇರಳದಲ್ಲಿ ಹೊಗೆಯಲ್ಲಿ ಬಾಡಿಸಿ ಶೇಖರಿಸುವ ಪದ್ದತಿ ಕೂಡಾ ಇದೆ. ಹಣ್ಣು ಒಣಗಿದ ನಂತರ ಮುರಿದಂತೆ ಕಾಣುವುದು.
ಚೆನ್ನಾಗಿ ಹಣ್ಣಾಗಿರುವ ಮುರುಗಲು ಹಣ್ಣನ್ನು ತಂದು ಎರಡು ಭಾಗಮಾಡಿ ಒಳಗಿನ ತಿರುಳು ತೆಗೆದು ಸಕ್ಕರೆ ತುಂಬಿಸಿ ದೊಡ್ಡ ಪಾತ್ರೆಯೊಳಗೆ ಹಾಕಿ ,ಬಿಸಿಲಿನಲ್ಲಿ ಇಟ್ಟು ಬಟ್ಟೆಯಿಂದ ಬಾಯಿಮುಚ್ಚಿ ಇಟ್ಟಾಗ ಅದು ನೀರು ಒಡೆಯುತ್ತದೆ. ನಾಲ್ಕು- ಐದು ದಿನಗಳ ಬಿಸಿಲ ನಂತರ ಕೋಕಂ ಸಿರಪ್ ಸಿಗುತ್ತವೆ. ಸುರಕ್ಷಿತವಾಗಿ ಬಾಟಲಿಯಲ್ಲಿ ತುಂಬಿಟ್ಟರೆ ವರ್ಷಪೂರ್ತಿ ಬಳಸಬಹುದಾಗಿದೆ.
ಆರೋಗ್ಯದ ದೃಷ್ಟಿಯಿಂದ ಅತ್ಯಂತ ಉಪಯುಕ್ತವಾದ ಈ ಹಣ್ಣು ಹೆಚ್ಚಿನ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಪಿತ್ತದಿಂದ ವಾಕರಿಕೆ, ತಲೆಸುತ್ತು ಉಂಟಾದಾಗ ಈ ಹಣ್ಣಿನ ಸಿಪ್ಪೆಯಿಂದ ತೆಗೆದರಸ ಒಂದೆರಡು ಚಮಚ ತೆಗೆದುಕೊಂಡು, ಒಂದು ಲೋಟ ನೀರು ಸೇರಿಸಿ ಚೂರು ಉಪ್ಪು ಬೆರೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೂರು ದಿನ ಸೇವಿಸಿದರೆ ಪಿತ್ತ ಕಡಿಮೆ ಆಗುತ್ತದೆ. ಪಿತ್ತ ಸಂಬಂಧಿ ಕಾಯಿಲೆಗೆ ಮುರುಗಲು ಹಣ್ಣು ರಾಮಬಾಣವಾಗಿದೆ. ಇದರಲ್ಲಿ ಸಿವಿಟಮಿನ್ ಹೇರಳವಾಗಿ ಇದೆ. ಬೇಸಿಗೆಯಲ್ಲಿ ಪಾನಕ,ಮಳೆಗಾಲದಲ್ಲಿ ಬಿಸಿ ಬಿಸಿ ಸಾಂಬಾರು ಮಾಡಿ ಬಳಸಬಹುದು.
ಪರಿಸರದಲ್ಲಿ ದೊರೆಯುವ ಇಂತಹ ಹಣ್ಣುಗಳು ಆರೋಗ್ಯಕ್ಕೆ ಅತ್ಯಂತ ಉಪಯುಕ್ತವಾಗಿದೆ. ನಾವು ಬಳಸುವ ,ಸೇವಿಸುವ ಆಹಾರದಲ್ಲಿಯೇ ಔಷಧಗಳು ಇವೆ ಹಾಗೂ ಆರೋಗ್ಯವು ಇದೆ ಎಂಬ ನಮ್ಮ ಹಿರಿಯರ ನುಡಿ ಎಂದಿಗೂ ಸತ್ಯವಾದದ್ದು. ಕಾಲಕ್ಕೆ ಅನುಗುಣವಾಗಿ ಪ್ರಕೃತಿಯೇ ನಮಗೆ ಅನೇಕ ಆಹಾರವನ್ನು ,ಹಣ್ಣುಗಳನ್ನು ನೀಡುತ್ತ ಬಂದಿದೆ. ನೂರಾರು ವರ್ಷಗಳಿಂದ ಪ್ರಕೃತಿಯೊಂದಿಗೆ ಬೆರೆತ ನಮ್ಮ ಹಿರಿಯರು ಪ್ರಕೃತಿ ದತ್ತವಾಗಿ ದೊರೆಯುವ ಅನೇಕ ಗಿಡಮೂಲಿಕೆಗಳಿಂದಲೇ ತಮ್ಮ ಆರೋಗ್ಯವನ್ನು ಅನೇಕ ಕಾಯಿಲೆಗಳಿಂದ ರಕ್ಷಿಸಿಕೊಂಡು ಬಂದಿದ್ದಾರೆ.
ಒಟ್ಟಿನಲ್ಲಿ ಈ ಬಾರಿಯೂ ಸಹ ಬೇಸಿಗೆ ರಜೆಯಲ್ಲಿ ಅಂಕೋಲಾದ ಬೆಳಂಬಾರದ ನಮ್ಮ ಮನೆಯಲ್ಲಿ ಸವಿಸ ಮುರುಗಲು ಹಣ್ಣಿನ ಪಾನಕ ಹಾಗೂ ಸಾಂಬಾರಿಗೆ ಬೇಕಾದ ಮುರುಗಲು ಹಣ್ಣಿನ ಹುಳಿ ನಮ್ಮನ್ನು ಪಿತ್ತಸಂಬಂಧಿ ಹಾಗೂ ಜೀರ್ಣ ಸಂಬಂಧಿ ಕಾಯಿಲೆಗಳಿಂದ ಪಾರುಮಾಡುವುದಂತು ಸತ್ಯ. ಹೀಗೆ ಮುರುಗಲು ಹಣ್ಣಿನ ಉಪಯೋಗ ಬಹಳಷ್ಟು ಜನರಿಗೆ ಅರಿವಿರುವುದರಿಂದಲೇ ಇದು ಅಳಿವಿನ ಅಪಾಯವಿರದೆ ನಿಂತಿದೆ.