ಕಾವ್ಯ ಸಂಗಾತಿ
ಭಾವಯಾನಿ
ಬದಲಾಗಬೇಕು ನಾನು
ಬದುಕಿನ ಪ್ರಪಾತಕ್ಕೆ ಬಿದ್ದು
ಒದ್ದಾಡುವಾಗಲೆಲ್ಲ ಅಂದುಕೊಳ್ಳುತ್ತೇನೆ,
ಬದಲಾಗಬೇಕು ನಾನು ಕೂಡ ಎಲ್ಲರಂತೆ…
ಪ್ರೀತಿಯ ಕೊಟ್ಟು ಕೊಳ್ಳುವಿಕೆಯಲ್ಲೂ
ಲಾಭ ನಷ್ಟದ್ದೆ ಲೆಕ್ಕಾಚಾರ ನಡೆಯುವಾಗ
ಮನಸು ಸುಮ್ಮನೆ ಮರುಗುತ್ತದೆ!!
ಯಾರದೋ ಉದ್ದಾರಕ್ಕೆ
ಮೆಟ್ಟಿಲಾಗಿ ನಿಂತು ಸವೆದದ್ದು
ಯಾರಿಗೂ ಕಾಣಲೇ ಇಲ್ಲ
ಬದುಕಿನ ಶರಧಿಯಲಿ ಈಜಲಾಗದೆ ಮುಳುಗುವ ಹಂತದಲ್ಲೂ
ಯಾರಿಗಾಗಿಯೋ ಕೈ ಚಾಚಿದ್ದನ್ನು
ಯಾರೂ ನೆನೆಯಲೂ ಇಲ್ಲ,
ನಿಂತಲ್ಲೇ ಕೆಸರು ಮಾಡಿಕೊಂಡು
ಬದುಕು ಜರ್ಜರಿತಗೊಂಡ ಹಿಂದಿನ,
ಕತೆಯನ್ನೂ ಯಾರೂ ಕೇಳಲಿಲ್ಲ,,,
ನಡೆದು ಹೋಗುತ್ತಾರೆ,
ನನ್ನೆದೆಯಲ್ಲೇ ದಾರಿ ಮಾಡಿಕೊಂಡು
ನನಗುಸಿರು ಗಟ್ಟುವ ಹಾಗೆ!!
ಕಣ್ಣ ಮುಂದಿನ ಮುತ್ತಿನಂತ ಮಾತುಗಳು
ಇರಿಯುತ್ತವೆ ಬೆನ್ನಿಗೆ,
ಸತ್ಯ ಅಸತ್ಯದ ನಡುವಿನ ಇಬ್ಬಗೆಯ ಮುಖಗಳು
ಜಿಗುಪ್ಸೆ ಹುಟ್ಟಿಸುತ್ತವೆ…
ನಾನು ನಾನಾಗಿಯೂ ಇರಲಾಗದೆ,
ಬದಲಾಗಲೂ ಆಗದೇ ಕೈ ಕೈ ಹಿಸುಕಿಕೊಳ್ಳುವಂತಾಗುತ್ತದೆ!!
ಹೆತ್ತವರು, ಗುರುಗಳು ಹೇಳಿಕೊಟ್ಟ
ಪಾಪ ಪುಣ್ಯಗಳ ಕತೆಗಳು
ಇಂದಿಗೂ ನೆನಪಾಗುತ್ತವೆ,
ಸರಿ ತಪ್ಪುಗಳ ತುಲನೆಯಲ್ಲೇ ಸಮಯ ಮುಗಿದುಹೋಗುತ್ತದೆ,
ಬದಲಾಗಬೇಕಿತ್ತು ನಾನುನೂ, ಬದಲಾದ ಈ ಜನರ ನಡುವೆ…
ಉಹೂಂ… ಪಾಪ ಪುಣ್ಯಗಳ ಕಥೆಗಳೇ ಗೆಲ್ಲುತ್ತವೆ!!
ಬದಲಾಗಬೇಕು ನಾನೂ… ಬರಿಯ ಮಾತುಗಳಾಗುತ್ತವೆ!